ಗೃಹಲಕ್ಷ್ಮಿ ಹಣದಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸನ್ಮಾನ
ಬೆಳಗಾವಿ, ಆಗಸ್ಟ್ 25: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಿಟ್ಟುಕೊಂಡಿದ್ದ ವೃದ್ಧೆಯೊಬ್ಬರು ಆ ಹಣದಿಂದ ಊರಿನ ಮಹಿಳೆಯರನ್ನು ಮನೆಗೆ ಕರೆಸಿಕೊಂಡು ಹೊಟ್ಟೆತುಂಬ ಹೋಳಿಗೆಯ ಸಿಹಿಯೂಟ ಉಣಬಡಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಸಿಬ್ಬಂದಿಯಲ್ಲಿ ಕಳುಹಿಸಿ ಆ ವೃದ್ಧೆಯನ್ನು ಸನ್ಮಾನಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸುಟ್ಟಟ್ಟಿ ಎನ್ನುವ ಗ್ರಾಮದ ಅಕ್ಕಾತಾಯಿ ಲಂಗೂಟಿ ಎನ್ನುವ ವೃದ್ಧೆ ತನಗೆ ಬಂದಿದ್ದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಾಮದ ಮಹಿಳೆಯರಿಗೆ ಹೋಳಿಗೆ ರುಚಿ ತೋರಿಸಿದ್ದರು. ಇದರಿಂದ ಗ್ರಾಮಸ್ಥರು ಫುಲ್ ಖುಷ್ ಆಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡುತ್ತಿರುವ ಗೃಹಲಕ್ಷ್ಮಿ ಹಣದಿಂದ ನಮಗೆಲ್ಲ ಬಹಳ ಅನುಕೂಲವಾಗುತ್ತಿದೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಈ ಕಾರಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡು, ನಮ್ಮ ಊರಿನವರಿಗೆ ಸಿಹಿ ಊಟ ಹಾಕಿಸಿದ್ದೇನೆ ಎಂದು ಅಜ್ಜಿ ಸಂತಸ ವ್ಯಕ್ತಪಡಿಸಿದ್ದರು.

ಇದರ ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕೆಲಸವನ್ನೂ ಅಜ್ಜಿ ಮಾಡಿದ್ದರು. ಗ್ರಾಮಸ್ಥರೆಲ್ಲ ಅಕ್ಕಾತಾಯಿ ಅವರ ಮನೆಗೆ ಆಗಮಿಸಿ, ರುಚಿ ರುಚಿಯಾದ ಹೋಳಿಗೆ ಸವಿದು ಹರಸಿ ಹೋಗಿದ್ದರು. ʼನನಗೆ ಗೃಹಲಕ್ಷ್ಮಿ ಯೋಜನೆಯಿಂದ ಹತ್ತು ಕಂತಿನ ಹಣ ಖಾತೆಗೆ ಜಮೆ ಆಗಿದೆ. ಈ ಯೋಜನೆಯಿಂದ ನನ್ನಂತಹ ಅನೇಕ ಬಡವರಿಗೆ ತುಂಬಾ ಅನುಕೂಲವಾಗಿದೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನೂ ತಿಳಿಸಿದ್ದರು.
ಈ ವಿಚಾರ ತಿಳಿಯುತ್ತಿದ್ದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಸಿಬ್ಬಂದಿಯನ್ನು ತಕ್ಷಣವೇ ಅಕ್ಕಾತಾಯಿ ಲಂಗೋಟಿ ಅಜ್ಜಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ದೂರವಾಣಿ ಕರೆಯ ಮೂಲಕ ಅಜ್ಜಿಯೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆಗೆ ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆಯ ನೆನಪಾರ್ಥ ಅಜ್ಜಿಗೆ ಶಾಲು ಹೊದಿಸಿ, ಸನ್ಮಾನ ಕೂಡ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತೈದೆಯರಿಗೆ ಉಡಿ ತುಂಬಿರುವುದು ಗೃಹಲಕ್ಷ್ಮಿ ಯೋಜನೆಯ ಸಾರ್ಥಕ ಕ್ಷಣಕ್ಕೆ ಮತ್ತೊಂದು ಉದಾಹರಣೆ. ಇಂದು ಈ ತಾಯಿಯ ಜೊತೆ ಮಾತನಾಡಿ,… pic.twitter.com/aIMRTPrugH
— Laxmi Hebbalkar (@laxmi_hebbalkar) August 25, 2024
ʼಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವ 'ಗೃಹಲಕ್ಷ್ಮಿ' ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತ್ತೈದೆಯರಿಗೆ ಉಡಿ ತುಂಬಿರುವುದು ಮನಸ್ಸಿಗೆ ಖುಷಿ ತಂದಿದೆ. ಇಂದು ನನ್ನ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಬಿ.ಬಾಗೋಜಿಕೊಪ್ಪ ಅವರನ್ನು ಅಕ್ಕಾತಾಯಿ ಲಂಗೂಟಿ ಅವರ ಮನೆಗೆ ಕಳುಹಿಸಿ, ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಸನ್ಮಾನಿಸಿ ಅವರನ್ನು ಗೌರವಿಸಲಾಯಿತು ಗೌರವಿಸಿದ್ದೇನೆʼ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ಮಹಿಳೆಯರ ಪಾಲಿಗೆ ವರದಾನ ಎಂದು ಕರೆಯಲಾಗುತ್ತಿದೆ. ಕಳೆದ ವರ್ಷ ಕಾಂಗ್ರೆಸ್ ಪಕ್ಕ ಅಧಿಕಾರಕ್ಕೇರಿದ ನಂತರ ಆಶ್ವಾಸನೆಯಂತೆ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಮಾಡುತ್ತಿದೆ. ಇದು ಅದೆಷ್ಟೋ ಬಡ ಮಹಿಳೆಯರ ಬದುಕಿಗೆ ಆಸರೆಯಾಗಿರುವುದಕ್ಕೆ ಅಕ್ಕಾತಾಯಿ ಲಂಗೂಟಿ ಅವರ ಕಾರ್ಯ ಉತ್ತಮ ನಿದರ್ಶನವಾಗಿದೆ.












Click it and Unblock the Notifications