ಇದೇ ಕಾರಣಕ್ಕೆ ನಿಮಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅನಿಸುತ್ತೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಹಣದಿಂದ ಬೆಳಗಾವಿಯ ವೃದ್ಧೆಯೊಬ್ಬರು ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ್ದ ವಿಚಾರ ಸಿಎಂ ಸಿದ್ದರಾಮಯ್ಯವರೆಗೂ ತಲುಪಿತ್ತು. ಇದಕ್ಕೆ ಸಂತಸ ವ್ಯಕ್ತಪಡಿಸಿ ವೃದ್ಧೆಗೆ ಸನ್ಮಾನವೂ ಮಾಡಲಾಗಿದೆ. ಆದರೆ, ಕೆಲವು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಲವರು ನಮಗೆ ಗೃಹಲಕ್ಷ್ಮಿ ಯೋಜನೆಯಿಂದ ಹಣ ಬರಲೇ ಎಂದು ತಲೆಕೆಡಿಸಿಕೊಂಡವರೂ ಇದ್ದಾರೆ. ಈಗ ಇದಕ್ಕೆ ಕಾರಣವನ್ನು ಖುದ್ದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಜಿಎಸ್‌ಟಿ ಹಾಗೂ ಆದಾಯ ತೆರಿಗೆ ತುಂಬುವವರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವವರಿಗೆ ಕೆಲವು ನಿಯಮಗಳನ್ನು ರೂಪಿಸಲಾಗಿತ್ತು. ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರು ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿದ್ದವು. ಆದರೂ ಜಿಎಸ್‌ಟಿ ಇದ್ದವರೂ ಸರ್ಕಾರದ ಪೋರ್ಟಲ್‌ನಲ್ಲಿ ಈ ಯೋಜನೆಗೆ ಅರ್ಜಿ ಹಾಕಿದ್ದರು. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಈ ರೀತಿ ಗೃಹಲಕ್ಷ್ಮಿ ಯೋಜನೆಗೆ ಅನರ್ಹವಾದ ಸುಮಾರು 15 ಸಾವಿರಕ್ಕೂ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿದಾರರ ಹಿನ್ನೆಲೆ ಪರಿಶೀಲಿಸಿದಾಗ ಜಿಎಸ್‌ಟಿಗೆ ಒಳಪಟ್ಟಿರುವುದು ತಿಳಿಯಿತು. ಕೂಡಲೇ ಅಂತಹ ಅರ್ಜಿಗಳನ್ನು ರಿಜೆಕ್ಟ್ ಮಾಡಿದ್ದೇವೆ. ರಾಜ್ಯಾದ್ಯಂತ ಶ್ರೀಮಂತರು, ಜಿಎಸ್‌ಟಿ ಇದ್ದವರು ಸೇರಿ ಒಟ್ಟು 1.58 ಕೋಟಿ ಕುಟುಂಬಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಜೂನ್ ತಿಂಗಳ ಗೃಹಲಕ್ಷ್ಮಿ ಹಣವು ಫಲಾನುಭವಿಗಳ ಖಾತೆಗೆ ಸೇರಿದ್ದು, ಇನ್ನೂ ಅನೇಕರಿಗೆ ಹಣ ತಲುಪಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ತೊಡಕಾಗಿದ್ದ ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದೇವೆ. ಈ ಜುಲೈ ಮತ್ತು ಆಗಷ್ಟ್ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಿನ್ನೆ ಬೆಳಗಾವಿಗೆ ಬಂದಿದ್ದಾಗ ಚರ್ಚೆ ಮಾಡಿದ್ದೇವೆ. ಮುಂದಿನ ವಾರದೊಳಗೆ ಈ ಎರಡೂ ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಷಣ ಮಾಡುತ್ತಿದ್ದ ವೇಳೆಯೂ ನಮಗೆ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲ ಎಂದು ಮಹಿಳೆಯರು ಕೂಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಂ, ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಅಕೌಂಟ್‌ಗೆ ಹಣ ಬರಲಿದೆ ಎಂದು ಭರವಸೆ ಕೊಟ್ಟಿದ್ದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರುವ ಮುನ್ನ ಪ್ರತಿ ಮನೆಯ ಒಬ್ಬರು ಯಜಮಾನಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇತ್ತೀಚೆಗೆ ಈ ಯೋಜನೆಯ ಹಣ ಬರುತ್ತಿಲ್ಲ ಎಂದು ಫಲಾನುಭವಿಗಳು ದೂರಿದ್ದಾರೆ.












Click it and Unblock the Notifications