Gruhalakshmi Scheme: ಗೃಹಲಕ್ಷ್ಮಿ 3 ತಿಂಗಳ ಹಣ ಬಾಕಿ: ಬಿಡುಗಡೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
ಕೋಲಾರ, ನವೆಂಬರ್ 25: ರಾಜ್ಯದಲ್ಲಿ ಗೃಹಲಕ್ಷ್ಮಿ ಹಣಕ್ಕೆ ಮಹಿಳೆಯರು ಪ್ರತಿ ತಿಂಗಳೂ ಕಾದು ಕುಳಿತುಕೊಳ್ಳುವಂತೆ ಆಗುತ್ತಿದೆ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಗೃಹ ಲಕ್ಷ್ಮಿ ಹಣ ಜಮಾ ಆಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ರು. ಇದೀಗ ಶೀಘ್ರದಲ್ಲೇ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಡ್ ನ್ಯೂಸ್ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣ ಬಾಕಿಯಿದೆ. ಆಗಸ್ಟ್ ತಿಂಗಳ ಹಣ ಬಿಡುಗಡೆಯಾಗಿದ್ದು, ಉಳಿದ ಎರಡು ತಿಂಗಳ ಹಣವನ್ನೂ ಕೊಡುತ್ತೇವೆ ಎಂದು ಹೇಳಿದ್ದಾರೆ. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಸಮಪರ್ಕವಾಗಿ ಜಾರಿಗೆ ತಂದ ರಾಜ್ಯ ನಮ್ಮದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಕೊಟ್ಟ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. 2023ರ ಚುನಾವಣಾ ಪೂರ್ವ ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ ಎಂದು ಹೇಳಿದರು.
ಇಡೀ ದೇಶವೇ ಬಡತನದಿಂದ ತತ್ತರಿಸಿದ್ದ ವೇಳೆ ಬಡ ಮಕ್ಕಳಿಗೂ ಪೌಷ್ಠಿಕ ಆಹಾರ, ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು 1973ರ ಅಕ್ಟೋಬರ್ 2 ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಮ್ಮ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದರು. ಇದಾದ ಬಳಿಕ ನಮ್ಮ ಪಕ್ಷ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ ಕಾಯ್ದೆ, ಮಹಿಳೆಯರಿಗೆ ಮೀಸಲಾತಿ, ಸ್ಥಳೀಯ ಆಡಳಿತದಲ್ಲಿ ಶೇಕಡ 50% ಮೀಸಲಾತಿಯನ್ನು ಜಾರಿಗೆ ತಂದಿತು ಎಂದರು.
ನವೆಂಬರ್ 28ರ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಮುಂದಿನ 50 ವರ್ಷಕ್ಕೆ ಭದ್ರ ಬುನಾದಿ ಹಾಕುವುದೇ ಈ ಕಾರ್ಯಕ್ರಮದ ಉದ್ದೇಶ. ಮಹಿಳೆಯರ ಸಬಲೀಕರಣಕ್ಕೆ ಜಾರಿಗೆ ತಂದ ಯೋಜನೆಯೇ ಗೃಹಲಕ್ಷ್ಮಿ ಯೋಜನೆ. ಇದರ ಯಶಸ್ಸಿನ ಪ್ರಮುಖ ರೂವಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಇದೇ ಮಾದರಿಯಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಯಶಸ್ಸಿಗೊಳಿಸಬೇಕು. ಇದು ನನ್ನ ಕನಸಿನ ಯೋಜನೆಯಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಶಕ್ತಿ ತುಂಬಲು ಹಾಗೂ ರಕ್ಷಣೆ ನೀಡುವ ಸಲುವಾಗಿ ಅಕ್ಕ ಪಡೆಯನ್ನು ಆರಂಭಿಸಲಾಗುತ್ತಿದ್ದು, ಇದರಿಂದ ಮಹಿಳೆಯರಿಗೆ ನೈತಿಕವಾಗಿ ಸ್ಥೈರ್ಯ ಬರಲಿದೆ. ಜನನಿಬಿಡ ಪ್ರದೇಶದಲ್ಲಿ ಅಕ್ಕಪಡೆ ಓಡಾಡಲಿದ್ದು, ಮನೆಯ ಒಳಗೆ ಹಾಗೂ ಹೊರಗೆ ಹೆಣ್ಣುಮಕ್ಕಳು ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸಿದರೂ ಸಹಾಯವಾಣಿ ಮೂಲಕ ಅಕ್ಕಪಡೆ ಗಮನಕ್ಕೆ ತರಬೇಕು ಎಂದರು. ಇನ್ನು, ಬಡ ಮಕ್ಕಳಿಗೆ ತಳಹಂತದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ದೃಷ್ಟಿಯಿಂದ ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಪೌಷ್ಠಿಕ ಆಹಾರದ ಜೊತೆಗೆ ಉತ್ತಮ ಶಿಕ್ಷಣ ಬಡ ಮಕ್ಕಳಿಗೆ ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.












Click it and Unblock the Notifications