Annabhagya Scheme: ಅನ್ನಭಾಗ್ಯದ ಹಣ ಯಾವಾಗ ಬರುತ್ತೆ? ಸ್ಪಷ್ಟನೆ ಕೊಟ್ಟ ಆಹಾರ ಸಚಿವ
ರಾಜ್ಯ ಕಾಂಗ್ರೆಸ್ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಬಾಕಿ ಅಕ್ಕಿಯ ಹಣವು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು ನಾಲ್ಕೈದು ತಿಂಗಳಿಂದ ಅನ್ನಭಾಗ್ಯದ ಹಣ ಜಮೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಮಹತ್ವದ ಮಾಹಿತಿ ನೀಡಿದ್ದಾರೆ.
"ನಾಲ್ಕು ತಿಂಗಳಿನಿಂದ ಹಣ ತಲುಪಿಲ್ಲ ಎನ್ನುವುದು ಸುಳ್ಳು. ಕೇವಲ ಎರಡು ತಿಂಗಳ ಹಣ ನೀಡುವುದು ಮಾತ್ರ ಬಾಕಿ ಇದೆ. ಇಲ್ಲಿವರೆಗೆ ಪ್ರತಿ ಎರಡು ತಿಂಗಳಿಗೊಮ್ಮೆ ಅನ್ನಭಾಗ್ಯದ ಹಣವನ್ನು ಫಲಾನುಭವಿಗಳಿಗೆ ತಲುಪಿಸುತ್ತಿದ್ದೆವು. ಇನ್ನು ಮುಂದೆ ಪ್ರತಿ ತಿಂಗಳು ಹಣ ಹಾಕುತ್ತೇವೆ" ಎಂದು ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

"ಅನ್ನಭಾಗ್ಯ ಯೋಜನೆಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿನಿಂದ ಜಮೆಯಾಗಿಲ್ಲ ಎಂಬುದು ನನ್ನ ಗಮನದಲ್ಲಿದೆ. ಯಾವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾವತಿಯಲ್ಲಿ ಆಗಿರುವ ವಿಳಂಬವನ್ನು ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು" ಎಂದು ಸಿಎಂ ಸಿದ್ದರಾಮಯ್ಯ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. "ಅನ್ನಭಾಗ್ಯ ಅಕ್ಕಿಯ ಹಣ ಹಾಗೂ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ಮೂರು ತಿಂಗಳಿಂದ ಬಂದಿಲ್ಲ. ಈ ಹಣವನ್ನು ಇಷ್ಟರಲ್ಲೇ ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅಕ್ಕಿ ಖರೀದಿಸಲೂ ದುಡ್ಡಿಲ್ಲ. ಅಕ್ಕಿಯ ಬದಲು ದುಡ್ಡು ಹಾಕುತ್ತೇವೆ ಎಂದವರು ಅದನ್ನೂ ಹಾಕುತ್ತಿಲ್ಲ. ಗೃಹಲಕ್ಷ್ಮಿಯರಿಗೂ ಹಣ ಜಮೆ ಮಾಡುತ್ತಿಲ್ಲ, ರಸ್ತೆ ರಿಪೇರಿಗೂ ದುಡ್ಡಿಲ್ಲ. ಎಲ್ಲ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರವೇ ದಿವಾಳಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ಕೆ.ಜಿ ಅಕ್ಕಿಗೆ 34 ರೂಪಾಯಿ ಕೊಡುವ ಬದಲು, ಕೇಂದ್ರ ಸರ್ಕಾರ ಪ್ರತಿ ಕೆ.ಜಿ ಅಕ್ಕಿ 22.50 ರೂಪಾಯಿಗೆ ಕೊಡುವುದನ್ನು ಖರೀದಿ ಮಾಡುವ ಮೂಲಕ ವಾರ್ಷಿಕವಾಗಿ 2,280 ಕೋಟಿಯಷ್ಟು ಹಣ ಉಳಿತಾಯ ಮಾಡುವುದಾಗಿ ಹಾಗೂ ಎಷ್ಟು ಬೇಕಾದರೂ ಅಕ್ಕಿ ನೀಡುವುದಾಗಿ ಹೇಳಿದ್ದರೂ ಸಿದ್ದರಾಮಯ್ಯ ಸರ್ಕಾರ ಜನರಿಗೆ ಮೋಸ ಮಾಡುತ್ತಲೇ ಬಂದಿದೆ. ಇದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದ ಜನರಿಗೆ ಮಾಡುತ್ತಿರುವ ಮೋಸದ ಗ್ಯಾರಂಟಿ. ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ ನಂಬಿದ್ರೆ ಚೊಂಬು ಗ್ಯಾರಂಟಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ. 5 ತಿಂಗಳಿಂದ ಅನ್ನಭಾಗ್ಯದ ಹಣ ಸಿಕ್ಕಿಲ್ಲ, ಇತ್ತ ಅಕ್ಕಿಯೂ ಕೊಡುತ್ತಿಲ್ಲ, ಗೃಹಲಕ್ಷ್ಮಿ ಹಣ 3 ತಿಂಗಳಿಂದ ಬಂದಿಲ್ಲ. ಗ್ಯಾರೆಂಟಿಗಳ ನೆಪದಲ್ಲಿ ಮತದಾರರನ್ನು ನಂಬಿಸಿ ಮೋಸ ಮಾಡಿ ಅಧಿಕಾರ ಹಿಡಿದ ನಯವಂಚಕ ಕಾಂಗ್ರೆಸ್ ಸರ್ಕಾರ ಈಗ ಕನ್ನಡಿಗರ ಕೈಗೆ ದೊಡ್ಡ ಚೊಂಬು ಕೊಟ್ಟಿದೆ ಎಂದಿದ್ದಾರೆ.
ಚುನಾವಣೆಗೂ ಮುನ್ನ 10 ಕೆ.ಜಿ ಅಕ್ಕಿ ಬೇಕೋ ಬೇಡ್ವೋ ಎಂದು ಪುಂಗಿ ಊದಿದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಸಾಹೇಬರು, ಇದೀಗ ಅಕ್ಕಿ ನೀಡದೆ ಮಹಿಳೆಯರ ಕೈಗೆ ಖಾಲಿ ಚಿಪ್ಪು ಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ದೂರಿದೆ. ಕೇಂದ್ರ ಸರ್ಕಾರ ನೀಡುವ 5 ಕೆ.ಜಿ ಅಕ್ಕಿಯನ್ನೇ ತಮ್ಮದು ಎಂದು ಕಿವಿ ಮೇಲೆ ಹೂ ಇಡುವ ಪ್ರಯತ್ನ ಮಾಡಿ, ಕೇವಲ 5 ಕೆ.ಜಿ ಅಕ್ಕಿಗೆ ಮಾತ್ರ ಹಣ ಕೊಡ್ತುತ್ತೇವೆ ಎಂದು ಇದೀಗ ಹಣವನ್ನೂ ಹಾಕದೆ ಬುರುಡೆ ಬಿಟ್ಟಿದೆ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದೆ.












Click it and Unblock the Notifications