KWIN City: ಕರ್ನಾಟಕದ ಈ ಭಾಗಗಳಲ್ಲೂ KWIN ಸಿಟಿ ಸ್ಥಾಪನೆ; ಸಚಿವ ಎಂ.ಬಿ. ಪಾಟೀಲ್
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಹೆಚ್ಚು ತೆರಿಗೆ ಕಟ್ಟುವ ರಾಜ್ಯಕ್ಕೆ ಕೇಂದ್ರದಿಂದ ಸರಿಯಾದ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತದೆ ಎನ್ನುವ ಸಿಟ್ಟು ಕನ್ನಡಿಗರಿಗೆ ಇದೆ. ಆದರೆ ಕರ್ನಾಟಕ ಎಂದು ಬಂದರೆ, ಅಭಿವೃದ್ಧಿ ಬೆಂಗಳೂರು ಕೇಂದ್ರಿತವಾಗಿದ್ದು ಇತರ ಜಿಲ್ಲೆಗಳ ಕಡೆಗಣಿಸುತ್ತಲೇ ಬರಲಾಗಿದೆ. ಇದೀಗ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಬೆಂಗಳೂರಿನ ಸಮೀಪದ ಡಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಕ್ವಿನ್ ಸಿಟಿ (KWIN City- Knowledge, Wellbeing, and Innovation City) ಮಾದರಿಯಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಿನಿ ಕ್ವಿನ್ ಸಿಟಿಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಕ್ವಿನ್ ಸಿಟಿಯ ಮಾದರಿ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಬದ್ಧ
ಸರ್ಜಾಪುರ ಬಳಿ 1000 ಎಕರೆ ವಿಸ್ತೀರ್ಣದಲ್ಲಿ ಸ್ವಿಫ್ಟ್ ಸಿಟಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಎಂಬಿ ಪಾಟೀಲ್ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಬೆಂಗಳೂರು ಬಿಟ್ಟು ಕರ್ನಾಟಕದ ಇತರೆ ಭಾಗಗಳ ಅಭಿವೃದ್ಧಿಗೂ ಹೆಚ್ಚಿನ ಗಮನ ಹರಿಸಿ ಎನ್ನುವ ಕೂಗು ಜೋರಾಗಿದೆ. ಗಿರೀಶ್ ಭಾರಧ್ವಾಜ್ ಎನ್ನುವವರು ಎಕ್ಸ್‌ನಲ್ಲಿ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡಿರುವ ಎಂಬಿ ಪಾಟೀಲ್ ಮಿನಿ ಕ್ವಿನ್ ಸಿಟಿ ನಿರ್ಮಾಣ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ 5 ರಿಂದ 7 ಮಿನಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಹುಬ್ಬಳ್ಳಿ ಮತ್ತು ವಿಜಯಪುರದಲ್ಲಿ ಮಿನಿ ಕ್ವಿನ್ ಸಿಟಿ ನಿರ್ಮಾಣ ಮಾಡಲಾಗುತ್ತದೆ ಎಂದು ಎಂಬಿ ಪಾಟೀಲ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಹಲವು ಯೋಜನೆಗಳನ್ನು 2025ರ ಜನವರಿಯಲ್ಲಿ ಘೋಷಣೆ ಮಾಡಲಿದ್ದೇವೆ. ಯಾವುದೇ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವುದು ನನ್ನ ಉದ್ದೇಶವಾಗಿದೆ. ಮೊದಲು ಯೋಜನೆಯನ್ನು ಕಾರ್ಯಗತಗೊಳಿಸಿ ಬಳಿಕ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅತ್ಯಂತ ಹಳೆಯ ಮತ್ತು ದೊಡ್ಡ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ನನಗೆ ಅಲ್ಲಿನ ಜನರ ನೋವು ಎಲ್ಲರಿಗಿಂತ ಚನ್ನಾಗಿ ಅರ್ಥವಾಗುತ್ತದೆ. ಜನರ ಭಾವನೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ, ಅವರ ಸಂದೇಶಗಳು ಮತ್ತು ನೋವನ್ನು ನಾನು ಟ್ವಿಟ್ಟರ್‌ನಲ್ಲಿ ಓದುತ್ತೇನೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ನಾನು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ ಅದರಲ್ಲಿ ಕೆಲವು ಜನರ ಗಮನಕ್ಕೆ ಬರುತ್ತವೆ ಇನ್ನೂ ಕೆಲವು ಬರುವುದಿಲ್ಲ. ಯೋಜನೆಗಳನ್ನು ಅಂತಿಮಗೊಳಿಸುವವರೆಗೆ ನಾನು ಘೋಷಣೆ ಮಾಡುವುದಿಲ್ಲ ಎಂದಿದ್ದಾರೆ.
ಸಚಿವನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಪ್ರಾದೇಶಿಕ ಸಮತೋಲನ ಬಯಸುವುದರ ಜೊತೆಗೆ ಭಾರತ ಮತ್ತು ಅದರಾಚೆಗಿನ ಅಭಿವೃದ್ಧಿಯ ರೇಸ್‌ನಲ್ಲಿ ರಾಜ್ಯಕ್ಕೆ ಬರುವ ಹೂಡಿಕೆಗಳನ್ನು ಕಳೆದುಕೊಳ್ಳದೇ ಇರುವುದಕ್ಕೆ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
5 ವರ್ಷಗಳ ನಮ್ಮ ಆಡಳಿತ ಮುಗಿದ ನಂತರ ಹಿಂದಿರುಗಿ ನೋಡಿದಾಗ ನನ್ನ ರಾಜ್ಯದ ದೀರ್ಘಾವಧಿಯ ಅಭಿವೃದ್ಧಿಗೆ ನಾನು ಸ್ವಲ್ಪ ಕೊಡುಗೆ ನೀಡಿದ್ದೇನೆ ಎನ್ನುವ ತೃಪ್ತಿ ನನಗೆ ಇರಬೇಕು ಎಂದು ಬಯಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನ್ನ ಕನಸಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications