Milk Price Hike: ಹಾಲಿನ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಏನಂದ್ರು?
ರಾಜ್ಯ ಕಾಂಗ್ರೆಸ್ ಸರ್ಕಾರವು ಹಾಲಿನ ದರ ಏರಿಕೆ ಮಾಡಿರುವ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದ್ದು, ಕೆಎಂಎಫ್‌ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡು ವರ್ಷಗಳ ಸರಣಿ ಸುಲಿಗೆ, ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಎಂದು ಕಿಡಿಕಾರಿದ್ದಾರೆ.
ಹಾಲು ಹಾಲಾಹಲ, 3ನೇ ಸಲ ದರ ಏರಿಕೆ ಮಾಡಿದ್ದೀರಿ. 2023 ಆಗಸ್ಟ್‌ನಲ್ಲಿ ₹3 ರೂಪಾಯಿ. 2024 ಜೂನ್‌ನಲ್ಲಿ ₹2 ಹಾಗೂ 2025 ಮಾರ್ಚ್ ಅಂದರೆ ಈಗ ₹4 ರೂಪಾಯಿ ದರ ಏರಿಸಿದ್ದೀರಿ. ಇನ್ನು ವಿದ್ಯುತ್ ಶಾಕ್ ಕೂಡ ಕೊಟ್ಟಿದ್ದೀರಿ. ಈಗ ಎಲ್ಲರಿಗೂ ಪ್ರತೀ ಯೂನಿಟ್‌ಗೆ ₹36 ಪೈಸೆ ಬರೆ ಹಾಕಿದ್ದೀರಿ. ಮಹಾದೇವಪ್ಪನಿಗೂ ಶಾಕು, ಕಾಕಾ ಪಾಟೀಲಗೂ ಶಾಕು ಎಂದು ವ್ಯಂಗ್ಯವಾಡಿದ್ದಾರೆ.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದ್ದು, ಲಾಭ ಕೆಎಂಎಫ್‌ಗೆ, ಕಂಪನಿ ಆಡಳಿತ ನಡೆಸುತ್ತಿದೆ ಸರ್ಕಾರ ಎಂದಿದ್ದಾರೆ. ಮೊಸರು ದರ ಕೂಡ ₹4 ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಕೇಳಿದ್ದಾರೆ.
ಇದು ಪ್ರಜಾಪ್ರಭುತ್ವ ಸರಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ, ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ, ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ. ಈಸ್ಟ್ ಇಂಡಿಯಾ ಕಾಂಗ್ರೆಸ್ ಎಂದು ಹರಿಹಾಯ್ದಿದ್ದಾರೆ.

ಹಾಲಿನ ದರ ಏರಿಕೆ ಬಗ್ಗೆ ಸಿಎಂ ಹೇಳಿದ್ದೇನು?:
ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು 4 ರೂಪಾಯಿ ಹೆಚ್ಚಳವಾಗಲಿದೆ. ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನ ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ 46 ರೂಪಾಯಿ ಆಗಲಿದ್ದು, ಇದು ಬೇರೆಲ್ಲ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾಡಿನ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರಿ ಎಂಬ ವಿಶ್ವಾಸ ನಮಗಿದೆ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಹೈನುಗಾರರ ನೆರವಿಗೆ ರಾಜ್ಯ ಸರ್ಕಾರವು ಧಾವಿಸಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದೆ. ಕೆಎಂಎಫ್‌ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತೇಜನ ಸಿಗುತ್ತಿದ್ದು, ಇದೀಗ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಹಾಲಿನ ದರವು ನೇರವಾಗಿ ಹೈನುಗಾರರ ಕೈಸೇರುತ್ತಿರುವುದು ಪ್ರೋತ್ಸಾಹಕರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ದರ ಏರಿಕೆಗೆ ಎಲ್ಲೆಡೆಯಿಂದಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
20 ತಿಂಗಳಲ್ಲಿ 9 ರೂಪಾಯಿ ಏರಿಕೆ: ಅಶೋಕ್
ಹಾಲಿನ ದರ ಏರಿಕೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಮೂರನೇ ಬಾರಿಗೆ ಹಾಲಿನ ದರ ಏರಿಕೆಯಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಕೇವಲ 20 ತಿಂಗಳಿನಲ್ಲಿ ಹಾಲಿನ ದರವನ್ನು ಮೂರು ಬಾರಿ ಸೇರಿದಂತೆ ಒಟ್ಟು 9 ರೂಪಾಯಿ ಹೆಚ್ಚಳವಾಗಿದೆ ಎಂದು ಕಿಡಿಕಾರಿದ್ದಾರೆ.
2023ರ ಆಗಸ್ಟ್‌ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ, 2024 ಜೂನ್‌ನಲ್ಲಿ 2 ರೂಪಾಯಿ ಏರಿಕೆ ಆಯಿತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ, ಮತ್ತೊಮ್ಮೆ ನೀವು ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ದೂರಿದ್ದಾರೆ.
ನಿಮಗೆ ಬಡವರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ, ಹೆಚ್ಚಳ ಮಾಡಿರುವ 4 ರೂಪಾಯಿ ಹಣವನ್ನು ನೇರವಾಗಿ ಹಾಲು ಉತ್ಪಾದಕರ ಕೈಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ರೈತರಿಗೂ ಲಾಭವಿಲ್ಲದೆ, ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನ ಬಿಜೆಪಿ ನಿರಂತರ ಪ್ರತಿಭಟಿಸುತ್ತಲೇ ಬರುತ್ತಿದ್ದರೂ, ಈ ಸರ್ಕಾರ ಜನಾಕ್ರೋಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಬೇರೆ ಏನೂ ಉಳಿದಿಲ್ಲ. ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಸರ್ಕಾರ ಅನಾವರಣಗೊಳಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬವೂ ಬಳಸುವ ಹಾಲಿನ ದರವನ್ನು ಏರಿಸಲು ಸಂಪುಟ ನಿರ್ಧರಿಸಿರುವ ಈ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಆಗ್ರಹಿಸಿದ್ದಾರೆ.












Click it and Unblock the Notifications