Middle Class: ರಾಜಕಾರಣಿ "ಜೀವನ ಶೈಲಿಗೆ" ಏನಾದರೂ ವಿನಾಯಿತಿ ಇದೆಯೆ: ರಾಜಾರಾಂ ತಲ್ಲೂರು ಬರಹ
Middle Class: ರಾಜಕಾರಣಿ ಜೀವನ ಶೈಲಿಗೆ ಏನಾದರೂ ವಿನಾಯಿತಿ ಇದೆಯೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಹಠಾತ್ ಸಾವು, ಕುಸಿದು ಬಿದ್ದು ಸಾವು, ಹೃದಯಾಘಾತಗಳಿಗೆ "ಜೀವನ ಶೈಲಿಯೇ ಕಾರಣ ಮತ್ತು ಜೀವನ ಶೈಲಿ ಮಾತ್ರ ಕಾರಣ ಹೊರತು ಬೇರಾವುದೇ ಕಾರಣಗಳಿಲ್ಲ, ಇರಲಿಕ್ಕೆ ಸಾಧ್ಯವೂ ಇಲ್ಲ" ಎಂದು ದೃಢವಾಗಿ, ಭಕ್ತಿಪೂರ್ವಕವಾಗಿ ನಂಬಿರುವ ಎಲ್ಲರಲ್ಲಿ ಒಂದಿಷ್ಟು ಪ್ರಶ್ನೆಗಳಿವೆ. ಅನಾರೋಗ್ಯಕರ ಜೀವನ ಶೈಲಿ ಎಂದರೆ ಏನು? ದೈಹಿಕ ಶ್ರಮ ಇಲ್ಲದ ಬದುಕು, ಕೈಗೆ ಸಿಕ್ಕಿದ ಹಾಳುಮೂಳು ಆಹಾರ, ಕೊಬ್ಬಿನಂಶ ಹೆಚ್ಚಿರುವ ಆಹಾರ, ಸಮಯ ಬದ್ಧವಾದ ದಿನಚರಿ ಇಲ್ಲದೆ ಸಿಕ್ಕಸಿಕ್ಕ ಹೊತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುವುದು, ನಿದ್ದೆಗೇಡು ಬದುಕು, ಯಾವಾಗಲೂ ಮಾನಸಿಕ ಒತ್ತಡ-ಧಾವಂತ, ಧೂಮಪಾನ-ಮದ್ಯಪಾನ- ತಂಬಾಕು... ಹೀಗೆ ಪಟ್ಟಿ ಮಾಡುತ್ತಾ ಹೋಗುತ್ತದೆ ವೈದ್ಯಕೀಯ ವಿಜ್ಞಾನ.

ಇಂತಹ ಜೀವನ ಶೈಲಿ ಇರುವ ಅನೇಕ ವರ್ಗಗಳವರು ಕಳೆದ ಐದಾರು ವರ್ಷಗಳ ಅವಧಿಯಲ್ಲಿ ತಮ್ಮ ಉತ್ಪಾದಕ ವಯೋಮಾನದ ತುತ್ತತುದಿಯಲ್ಲಿರುವಾಗ (35-65 ವರ್ಷ ಪ್ರಾಯ) ಅಕಾರಣವಾಗಿ ಜೀವ ಕಳೆದುಕೊಂಡಿದ್ದಾರೆ. ಅಂತಹವರ ಪ್ರಮಾಣ ಹೆಚ್ಚಾಗಿರುವುದೂ ಹೌದು. ಆದರೆ ಅದರ ಜೊತೆಗೆ ಜಿಮ್‌ಗಳಲ್ಲಿ ವರ್ಕೌಟ್ ಮಾಡುವಾಗ, ನೃತ್ಯ ಮಾಡುವಾಗ, ಓಟದಲ್ಲಿರುವಾಗ, ವಾಹನ ಚಲಾಯಿಸುತ್ತಿರುವಾಗ, ಮರ ಹತ್ತಿರುವಾಗ, ಈಜುತ್ತಿರುವಾಗ... ಹೀಗೆ ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ, ಆರೋಗ್ಯವಂತ ಜೀವನ ಶೈಲಿ ಹೊಂದಿರುವವರೂ ದೊಡ್ಡ ಸಂಖ್ಯೆಯಲ್ಲಿ ಹಠಾತ್ ಸಾವು, ಕುಸಿದು ಬಿದ್ದು ಸಾವು, ಹೃದಯಾಘಾತಗಳಿಗೆ ಬಲಿಯಾಗಿದ್ದಾರೆ.
ರಾಜಕೀಯ ಪಕ್ಷಗಳಿಗಾಗಿ ಹಗಲಿರುಳೂ ಶ್ರಮ ಪಡುವ ಎಲ್ಲ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರೂ ದೊಡ್ಡ ಸಂಖ್ಯೆಯಲ್ಲಿ ಬಲಿ ಆಗಿದ್ದಾರೆ. ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳು ಹೀಗೆ ಬಲಿ ಆದ ಸುದ್ದಿಗಳಿವೆ. ಆದರೆ, ಈವತ್ತಿನ ತನಕ ದೇಶದಲ್ಲಿ ಎಲ್ಲೂ, ಅಂತಹ ಅನಾರೋಗ್ಯಕರ ಜೀವನ ಶೈಲಿಯೇ "ನಾರ್ಮಲ್" ಆಗಿರುವ "ರಾಜಕಾರಣಿಗಳು" (ಶಾಸಕರು, ಸಂಸದರು, ಮಂತ್ರಿಗಳು, ಬೇರೆ ಆಯಕಟ್ಟಿನ ಹುದ್ದೆಗಳಲ್ಲಿ ಇರುವವರು), ಐ ಎ ಎಸ್-ಐ ಪಿ ಎಸ್ ಇತ್ಯಾದಿ ನಾಗರಿಕ ಸೇವಾ ಅಧಿಕಾರಗಳಲ್ಲಿ ಇರುವವರು... ಇಂತಹ ದೇಶಕ್ಕೆ ಅತಿಮುಖ್ಯರಾದ ಮಹನೀಯರು ಹೀಗೆ ಅಕಾಲಿಕವಾಗಿ ಜೀವ ಕಳೆದುಕೊಂಡ ಸುದ್ದಿಗಳು ಬಹುತೇಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಈ "ಅಸಮತೋಲನ" ನನಗೆ ಬಹಳ ಕೌತುಕದ್ದು.
ಎಲ್ಲ ವರ್ಗಗಳ ಎಲ್ಲರೂ ಸಮನಾಗಿ ಕೋವಿಡೋತ್ತರ ಒಳಿತು-ಕೆಡುಕುಗಳನ್ನು ಪಡೆಯುತ್ತಿದ್ದಾರೆ. ಆದರೆ ಮೇಲೆ ಹೇಳಿದ ವರ್ಗಕ್ಕೆ ಮಾತ್ರ ಯಾವುದೇ ಕೋವಿಡ್ ಕೆಡುಕು ತಾಗಿದಂತಿಲ್ಲ. ಅತ್ಯಂತ ನಿರ್ದಯಿ ಕೋವಿಡ್, ಈ ರಾಜಕಾರಣಿಗಳಿಗೆ ಮಾತ್ರ ಯಾಕೆ ದಯೆ ತೋರಿಸುತ್ತಿದೆ. ನಿಜಕ್ಕೂ ಯಾಕೆ ಹೀಗೆ ಆ ಹುದ್ದೆಗಳಿಗೆ ಹೋದಾಗ ದೇಹದಲ್ಲಿ ಏನಾದರೂ ವಿಶೇಷ ಜೀವರಾಸಾಯನಿಕಗಳು ಸ್ರವಿಸಿ, ಅವರು ಈ ಹಠಾತ್ ಘಟನೆಗಳಿಂದ ಇಮ್ಯೂನಿಟಿ ಪಡೆಯುತ್ತಾರೆಯೇ. ಈ ಬಗ್ಗೆ ಒಂದು ವೈದ್ಯಕೀಯ ಸಂಶೋಧನೆ ನಡೆಯಬೇಕು ಅನ್ನಿಸುತ್ತದೆ. ಅವರಲ್ಲಿ ಅಂತಹ ವಿಶೇಷ ಜೀವರಕ್ಷಕಗಳೇನಾದರೂ ಇದ್ದರೆ, ಅದನ್ನು ದೇಶದ ಉದ್ದಗಲಕ್ಕೂ ಅಕಾರಣ, ಅಕಾಲಿಕ ಸಾವು ಕಾಣುತ್ತಿರುವ ಜೀವಗಳ ರಕ್ಷಣೆಗೆ ಅದನ್ನು ಬಳಸಲು ಅವಕಾಶ ಆಗಬೇಕು.
ಕೋವಿಡ್ ಬಂದು ಹೋದ ಬಳಿಕ ನಮ್ಮ ನಿಮ್ಮ ದೇಹದಕ್ಕೂ ಈ ರಾಜಕಾರಣಿಗಳ ದೇಹಕ್ಕೂ ಏನಾದರೂ ವ್ಯತ್ಯಾಸ ಆಗಿದೆಯೆ? ಆಗಿದ್ದರೆ ಯಾವ ಸ್ವರೂಪದ್ದು? ನಮ್ಮಂತಹ ಜನಸಾಮಾನ್ಯರಿಗೆ ಸಿಗದ ವಿಶೇಷ ಲಸಿಕೆ/ಚಿಕಿತ್ಸೆಗಳೇನಾದರೂ ಅವರಿಗೆಲ್ಲ ಸಿಕ್ಕಿದೆಯೇ, ಈ ಪ್ರಶ್ನೆಗಳು ಹಲವು ದಿನಗಳಿಂದ ನನ್ನನ್ನು ಕಾಡುತ್ತಿವೆ.
ಏಕೆಂದರೆ, ದೇಶವನ್ನು ರಾಜ್ಯವನ್ನು ಮುನ್ನಡೆಸುತ್ತಿರುವವರಿಗೆ ಅಕಾರಣ ಸಾಯುತ್ತಿರುವ ಜನರ ಬಗ್ಗೆ ಕಾಳಜಿ ಇದ್ದಿದ್ದರೆ, ಈ ಸಾವು ಯಾಕೆ ಸಂಭವಿಸುತ್ತಿದೆ ಎಂದು ಸಂಶೋಧನೆ ನಡೆಸಿ, ಅನ್ಯಾಯವಾಗಿ ಸಾಯುವ ಜೀವಗಳನ್ನು ಉಳಿಸಿಕೊಳ್ಳಲು ಶ್ರಮ ಹಾಕುತ್ತಿದ್ದರು. ದುರದೃಷ್ಟವಷಾತ್ ಅವರು ಈ ಸಾವುಗಳು ತಮಗೆ ಕಾಣಿಸುತ್ತಿಲ್ಲ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಏಕೆ ? ಇದರ ಹಿಂದೆ ಏನಾದರೂ ಬಲವಾದ ಕಾರಣಗಳಿವೆಯೆ ?
ಬರಹ: ರಾಜಾರಾಂ ತಲ್ಲೂರು














Click it and Unblock the Notifications