Mekedatu Project: ಮೇಕೆದಾಟು ಯೋಜನೆ, ಕರ್ನಾಟಕಕ್ಕೆ ಹಿನ್ನಡೆ
ಬೆಂಗಳೂರು, ಫೆಬ್ರವರಿ 05: ಕೇಂದ್ರ ಬಜೆಟ್ 2025-26ರಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿಲ್ಲ, ಜಿಎಸ್‌ಟಿ ಹಂಚಿಕೆಯಿಂದ ಹಿಡಿದು ವಿವಿಧ ಯೋಜನೆಗಳ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿಯೇ ಮಹತ್ವದ ನೀರಾವರಿ ಯೋಜನೆ ವಿಚಾರವೊಂದರಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.
ಕರ್ನಾಟಕ ಸರ್ಕಾರ ಉದ್ಯಾನ ನಗರಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡುವ ಪ್ರಸ್ತಾವನೆ ತಯಾರು ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಆದರೆ ಈಗ ಮೇಕೆದಾಟು ನೀರಾವರಿ ಯೋಜನೆ ವಿಚಾರದಲ್ಲಿಯೂ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ರಾಜ್ಯಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡುವ ಕುರಿತ ಪ್ರಸ್ತಾವನೆ ಕುರಿತು ಉತ್ತರವನ್ನು ನೀಡಿದೆ.
2025-26ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಒಂದನ್ನು ಹಾಕಿದ್ದರು. ಕೇಂದ್ರ ಬಜೆಟ್ ವಿಚಾರದಲ್ಲಿ ಕರ್ನಾಟಕದ ನಿರೀಕ್ಷೆಗಳೇನು? ಎಂದು ಪಟ್ಟಿ ನೀಡಿದ್ದರು. ಇದರಲ್ಲಿ ಮೇಕೆದಾಟು ಯೋಜನೆ ಕುರಿತು ಅವರು ಪ್ರಸ್ತಾಪ ಮಾಡಿದ್ದರು.
ಸಿದ್ದರಾಮಯ್ಯ ಬೇಡಿಕೆಯಲ್ಲಿ, 'ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರ ಶೀಘ್ರವಾಗಿ ಈ ಯೋಜನೆಗೆ ಅನುಮತಿ ನೀಡಬೇಕು' ಎಂದು ಒತ್ತಾಯಿಸಿದ್ದರು.
ಕೇಂದ್ರ ಸರ್ಕಾರ ಹೇಳಿದ್ದೇನು?; ರಾಜ್ಯಸಭೆ ಸದಸ್ಯ ಎಸ್. ಕಲ್ಯಾಣಸುಂದರಂ ಕೇಳಿದ್ದ ಪ್ರಶ್ನೆಗೆ ಜಲಶಕ್ತಿ ಖಾತೆ ಸಚಿವ ರಾಜ್ ಭೂಷಣ್ ಚೌಧರಿ ಉತ್ತರ ನೀಡಿದ್ದಾರೆ. 'ಕಾವೇರಿ ನದಿಗೆ ಹೊಸ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅನ್ವಯ ಕಾವೇರಿ ನದಿ ಹರಿಯುವ ರಾಜ್ಯಗಳ ಒಪ್ಪಿಗೆ ಬಳಿಕ ಹೊಸ ನೀರಾವರಿ ಯೋಜನೆ ಕೈಗೊಳ್ಳಬಹುದು. ಆದರೆ ಅದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆಯೂ ಅಗತ್ಯವಾಗಿದೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿ 5 ವರ್ಷಗಳು ಕಳೆದಿವೆ. ತಮಿಳುನಾಡು ಸರ್ಕಾರ ಕಾವೇರಿ-ವೆಲ್ಲಾರ್-ಗುಂಡಾರ್ ಯೋಜನೆ ಕೈಗೊಂಡಿದೆ. ಆದರೆ ಇದಕ್ಕೆ ಸಹ ಇನ್ನೂ ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿಲ್ಲ.
ಬಜೆಟ್ ಬಳಿಕ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ನಾವು ಮೇಕೆದಾಟು ಯೋಜನೆಗಾಗಿ ಹಲವಾರು ಬಾರಿ ಒತ್ತಾಯಿಸಿದ್ದೆವು. ಬೆಂಗಳೂರು ಅತಿ ಹೆಚ್ಚು ತೆರಿಗೆಯನ್ನು ಸಂಗ್ರಹಿಸಿಕೊಡುವ ನಗರವಾಗಿದೆ. ಈ ನಗರಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಆಗಬೇಕಾದರೆ ಮೇಕೆದಾಟು ಯೋಜನೆ ಆಗಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಈ ಬಜೆಟ್‌ನಲ್ಲಿ ನಮಗೆ ನಿರಾಸೆ ಉಂಟು ಮಾಡಿದ್ದಾರೆ" ಎಂದು ಹೇಳಿದ್ದರು.












Click it and Unblock the Notifications