Mekedatu Dam: ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಇಲ್ಲಿದೆ!
ಕಾವೇರಿ ಕಿಚ್ಚು ಧಗಧಗಿಸುತ್ತಿದೆ, ಕರ್ನಾಟಕದ ಜಲಾಶಯದಲ್ಲಿ ನೀರು ಇಲ್ಲದೇ ಕನ್ನಡಿಗರು ಪರದಾಡುವಾಗ ನೆರೆ ರಾಜ್ಯ ತಮಿಳುನಾಡು ಕಿರಿಕ್ ತೆಗೆದಿದೆ. ಇನ್ನು ಇಂಥ ಪರಿಸ್ಥಿತಿಯಲ್ಲಿ ತಜ್ಞರು ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಹುಡುಕುವುದು ಹೇಗೆ? ಅನ್ನೋ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಅದೊಂದು ಯೋಜನೆ ಪೂರ್ಣವಾದರೆ ಕನ್ನಡಿಗರ ಕಷ್ಟ ದೂರವಾಗಿ ಹೊಸ ಭರವಸೆ ಮೂಡುವುದು ಗ್ಯಾರಂಟಿ ಅಂತಿದ್ದಾರೆ.
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಕಾವೇರಿ ನದಿಯಲ್ಲಿ ನೀರೇ ಇಲ್ಲ, ಇದೇ ಕಾರಣಕ್ಕೆ ಕಾವೇರಿ ನದಿ ಬತ್ತಿ ಹೋಗುತ್ತಿದೆ. ಕೆಆರ್‌ಎಸ್, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳು ಇನ್ನೇನು ಚಳಿಗಾಲದ ಹೊತ್ತಿಗೆ ಖಾಲಿಯಾಗುವ ಮುನ್ಸೂಚನೆ ಇದೆ. ಹೀಗೆ ಪರಿಸ್ಥಿತಿ ಕಠಿಣವಾಗಿದ್ದು, ಮುಂಬರುವ ಬೇಸಿಗೆ ಹೊತ್ತಿಗೆ ಕರ್ನಾಟಕದ ಜನ ನೀರು ನೀರು ಅಂತಾ ಪರದಾಡಬೇಕಿದೆ. ಆದರೂ ತಮಿಳುನಾಡು ಸರ್ಕಾರ ಕಿರಿಕ್ ಮಾಡಿ ಕರ್ನಾಟಕ & ತಮಿಳುನಾಡು ಜನರ ಮಧ್ಯೆ ನೆಮ್ಮದಿಗೆ ಬೆಂಕಿ ಇಟ್ಟಿದೆ. ಈ ಕಾರಣಕ್ಕೆ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಹೇಳುತ್ತಿದ್ದಾರೆ ಜಲ ತಜ್ಞರು.

ಮೇಕೆದಾಟು ಬಂದರೆ ಎಲ್ಲಾ ಫಿನಿಶ್!
ಹೌದು, ಈಗಿನ ಸ್ಥಿತಿಯಲ್ಲಿ ಮೇಕೆದಾಟು ಡ್ಯಾಂ ಕಟ್ಟಿದರೆ ಸಾಕು ತಮಿಳುನಾಡು ಸರ್ಕಾರ ಪದೇ ಪದೆ ಕಾವೇರಿ ವಿಚಾರದಲ್ಲಿ ಮಾಡುವ ಕಿರಿಕ್ ನಿಂತು ಹೋಗಲಿದೆ. ಹೀಗಾಗಿ ತಕ್ಷಣ ಮೇಕೆದಾಟು ಡ್ಯಾಂ ಕಾಮಗಾರಿ ಆರಂಭ ಮಾಡಬೇಕು ಅಂತಿದ್ದಾರೆ ತಜ್ಞರು. ಕರ್ನಾಟಕ ಈ ಯೋಜನೆ ಪೂರ್ಣಗೊಳಿಸಿದರೆ ಸಾಕಷ್ಟು ಪ್ರಯೋಜನ ಇದೆ. ಇನ್ಮುಂದೆ ತಮಿಳುನಾಡಿಗೂ ಹೆಚ್ಚು ನೀರು ಬಿಡುವ ಜೊತೆಗೆ ಕರ್ನಾಟಕದ ಜನರಿಗೂ ನೀರು ಸಿಗಲಿದೆ ಅಂತಿದ್ದಾರೆ. ಅರೆ ಹಾಗಾದ್ರೆ ಮೇಕೆದಾಟು ಯೋಜನೆಯಿಂದ ಏನೆಲ್ಲಾ ಪ್ರಯೋಜನ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
'ಮೇಕೆದಾಟು' ಬಂದರೆ ಕನ್ನಡಿಗರಿಗೆ ರಿಲೀಫ್!
1) ಮಳೆಗಾಲದಲ್ಲಿ ಸುಖಾಸುಮ್ಮನೆ ವ್ಯರ್ಥವಾಗುವ ನೀರನ್ನು ಕರ್ನಾಟಕದ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳುವುದು.
2) 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾಗುತ್ತಿದೆ, ಇದನ್ನ ತಪ್ಪಿಸುವ ಉದ್ದೇಶ.
3) ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ.
4) 5252 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸುವ ಡ್ಯಾಂಗೆ 3181 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಜಾಗ ಅಗತ್ಯ.
5) ಯೋಜನೆ ಬಳಿಕ ಒಟ್ಟು 5 ಹಳ್ಳಿಗಳು ಮುಳುಗಲಿದ್ದು, 201 ಹೆಕ್ಟೇರ್ ಖಾಸಗಿ ಭೂಮಿ ಕೂಡ ಬೇಕಾಗುತ್ತದೆ.
6) ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಹೊರವಲಯದಲ್ಲಿ ನೀರಿನ ಸಮಸ್ಯೆ ಬಹುತೇಕ ಶಮನ.
7) ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋಗಿರುವ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸ.
8) ರಾಮನಗರ ಸುತ್ತಮುತ್ತಲ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲ ಮಟ್ಟ ಏರಿಕೆ.
9) ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.
10) ಬರದ ಸಂದರ್ಭದಲ್ಲಿ 65-66 ಟಿಎಂಸಿ ಹೆಚ್ಚುವರಿ ನೀರನ್ನು ಬಳಸಿಕೊಂಡು ಮುಂದೆ ತಮಿಳುನಾಡಿಗೂ ಬಿಡಲು ಸಾಧ್ಯವಾಗುತ್ತದೆ.

ತಮಿಳುನಾಡು ಸರ್ಕಾರಕ್ಕೆ ನೆಮ್ಮದಿ ಇಲ್ಲ!
ಅಂದಹಾಗೆ ಇಷ್ಟೆಲ್ಲಾ ಪ್ರಯೋಜನ ಇದ್ದರೂ ತಮಿಳುನಾಡು ಸರ್ಕಾರ ಕರ್ನಾಟಕ ಮತ್ತು ಕನ್ನಡಿಗರಿಗೆ ಮೇಕೆದಾಟು ಡ್ಯಾಂ ಕಟ್ಟಲು ಏಕೆ ಬಿಡ್ತಿಲ್ಲ ಗೊತ್ತಾ? ಸಿಂಪಲ್ ಉತ್ತರ ಅದು ರಾಜಕೀಯ. ಕನ್ನಡ ಮತ್ತು ತಮಿಳು ಭಾಷಿಕರ ನಡುವೆ ಪದೇ ಪದೆ ಬೆಂಕಿ ಹಚ್ಚುವ ಈ ಕಾವೇರಿ ವಿವಾದಕ್ಕೆ ಅಂತ್ಯ ಹಾಡಲು ಸ್ವತಃ ತಮಿಳುನಾಡು ಸರ್ಕಾರ ಸಿದ್ಧವಿಲ್ಲ. ಅರೆರೆ ಯಾಕೆ ಅಂದ್ರಾ? ಯಾಕೆ ಅಂದ್ರೆ ತಮಿಳುನಾಡಿನಲ್ಲಿ ಕಾವೇರಿ ನದಿ ನೀರಿನ ವಿಚಾರ ಬಿಟ್ಟು ರಾಜಕೀಯವೇ ಇಲ್ಲ. ಅಲ್ಲಿ ಯಾವ ಪಕ್ಷವೇ ಅಧಿಕಾರಕ್ಕೆ ಬಂದರೂ ಕಾವೇರಿ ನೀರಿನ ಬಗ್ಗೆ ರಾಜಕೀಯ ಮಾಡೇ ಮಾಡುತ್ತವೆ. ಹೀಗಾಗಿ ಕೆಲ ಕುಂಟು ನೆಪ ಹೇಳುತ್ತಿದೆ ತಮಿಳುನಾಡು ಸರ್ಕಾರ, ಅದನ್ನ ಮುಂದೆ ಓದಿ.
ತಮಿಳುನಾಡು ಸರ್ಕಾರದ ಕುಂಟು ನೆಪಗಳು!
1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ನೀರಿನ ಕೊರತೆ ಎದುರಾಗುವ ಭಯವಿದೆ ಎನ್ನುತ್ತಿದೆ ತಮಿಳುನಾಡು ಸರ್ಕಾರ.
2) ಕೆಆರ್‌ಎಸ್ ಡ್ಯಾಂ ಬಳಿಕ ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣವತಿ ನದಿಗಳು ಕಾವೇರಿ ನದಿಗೆ ಸೇರಿ ಅನಿಯಂತ್ರಿತವಾಗಿ ನದಿ ಹರಿಯುತ್ತದೆ.
3) ತಮಿಳುನಾಡು ಗಡಿ ಭಾಗದಲ್ಲಿ ಡ್ಯಾಂ ನಿರ್ಮಾಣವಾದರೆ ಅನಿಯಂತ್ರಿತವಾಗಿ ನದಿಯ ಹರಿವು ತಡೆದಂತಾಗುತ್ತದೆ ಎಂಬ ವಾದವಿದೆ.
4) ಈಗಾಗಲೇ ತಮಿಳುನಾಡು ಸರ್ಕಾರ ಕೂಡ ಕಾವೇರಿ ನೀರನ್ನೇ ನಂಬಿಕೊಂಡು ಸಾಕಷ್ಟು ಯೋಜನೆ ಕೈಗೆತ್ತಿಕೊಂಡಿದೆ.
5) ಮೇಕೆದಾಟು ಯೋಜನೆ ತಮಿಳುನಾಡಲ್ಲಿ ಬಹುತೇಕ ರಾಜಕೀಯವಾಗಿ ಬದಲಾಗಿದ್ದು, ದೊಡ್ಡ ಸಮಸ್ಯೆ ಎದುರಾಗಿದೆ.

ಕನ್ನಡಿಗರ ಜಾಣ ನಡೆ ಏನು?
ಎರಡೂ ರಾಜ್ಯಗಳ ನಡುವೆ ಮೇಕೆದಾಟು ಯೋಜನೆ ಕಿಚ್ಚು ಹಚ್ಚುವ ಮುನ್ಸೂಚನೆ ನೀಡಿದ್ದು, ಈಗಾಗಲೇ ಕಾವೇರಿ ವಿಚಾರಕ್ಕೆ ಕಿರಿಕ್ ಶುರುವಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರ ಕೂಡ ಜಾಣ ನಡೆ ಮುಂದಿಟ್ಟು, ಕಾವೇರಿ ವಿವಾದಕ್ಕೆ ಪರಿಹಾರ ಹುಡುಕಲು ಮೇಕೆದಾಟು ಯೋಜನೆ ಬೇಕು ಅಂತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೂಡ ಬಜೆಟ್‌ನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿ, ಯೋಜನೆ ಪೂರ್ಣಗೊಳಿಸುವ ಬಗ್ಗೆ ತಿಳಿಸಿದ್ದರು. ಬೆಂಗಳೂರಿಗೆ ಅಗತ್ಯವಿರುವ ನೀರು ತಲುಪಿಸುವ ಮಾತು ಕೊಟ್ಟಿದ್ದಾರೆ. ಹೀಗಿದ್ರೂ ತಮಿಳುನಾಡು ಸರ್ಕಾರ ಕಿರಿಕ್ ಬಿಡುತ್ತಿಲ್ಲ.
400 ಟಿಎಂಸಿ ನೀರು ವೇಸ್ಟ್!
ಕಳೆದ ವರ್ಷ ಅಂದರೆ 2022ರ ಮಳೆಗಾಲದಲ್ಲಿ ತಮಿಳುನಾಡಿನ ಜಲಾಶಯಕ್ಕೆ ಹರಿದಿದ್ದ 400 ಟಿಎಂಸಿಗೂ ಹೆಚ್ಚು ಕಾವೇರಿ ನದಿ ನೀರು ಸಮುದ್ರ ಸೇರಿದೆ. ಮುಂಗಾರು ಮಳೆ ಅಬ್ಬರ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ನೀರನ್ನ ಹೊರಬಿಡಲಾಗಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿ ಆಗಿದೆ. ಇಷ್ಟೆಲ್ಲ ನೀರನ್ನ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರು ಬೇಕು ಅಂತಾ ತಮಿಳುನಾಡು ಸರ್ಕಾರ ಕಿರಿಕ್ ಶುರುಮಾಡಿದೆ.

ಒಟ್ನಲ್ಲಿ ಕಾವೇರಿ ವಿವಾದಕ್ಕೆ ಮೇಕದಾಟು ಯೋಜನೆ ಶಾಶ್ವತ ಪರಿಹಾರ ಹುಡುಕಲಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಪೂರ್ಣಗೊಳಿಸಿ, ಮೇಕೆದಾಟು ಡ್ಯಾಂ ಮೂಲಕ ತಮಿಳುನಾಡು & ಕರ್ನಾಟಕದ ರೈತರು ಸೌಲಭ್ಯ ಪಡೆಯಲಿ ಅಂತಿದ್ದಾರೆ ತಜ್ಞರು. ಆದರೆ ತಮಿಳುನಾಡಿನ ಸರ್ಕಾರಕ್ಕೆ ಇದು ಬೇಕಿಲ್ಲ ಅಂತಾ ಕಾಣುತ್ತದೆ. ಹೀಗಾಗಿ ಮೇಕೆದಾಟು ಯೋಜನೆಯ ಬಗ್ಗೆ ಕಿರಿಕ್ ಜೋರಾಗಿದ್ದು, ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications