ಕೈ ಹಿಡಿಯಲಿದ್ದಾರೆ ಬಿಎಸ್ವೈ ಬಂಟ ಲಕ್ಷ್ಮೀನಾರಾಯಣ!
ಬೆಂಗಳೂರು, ಮಾ. 17 : ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯದೇ ಮುನಿಸಿಕೊಂಡಿದ್ದ ಬಿಎಸ್ ಯಡಿಯೂರಪ್ಪ ಪರಮಾಪ್ತ ಎಂ.ಡಿ.ಲಕ್ಷ್ಮೀನಾರಾಯಣ ಕೈ ಹಿಡಿಯಲು ಸಜ್ಜಾಗಿದ್ದಾರೆ. ಭಾನುವಾರ ಬೆಂಗಲಿಗರ ಸಭೆ ನಡೆಸಿದ ಅವರು, ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ತುಮಕೂರು ಜಿಲ್ಲೆ ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಬಲಿಗ ಎಂ.ಡಿ.ಲಕ್ಷ್ಮೀನಾರಾಯಣ ಕೆಜೆಪಿಯಿಂದ ಯಡಿಯೂರಪ್ಪ ಜೊತೆಗೆ ಬಿಜೆಪಿಗೆ ಮರಳಿದ್ದರು. ಆದರೆ, ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕಿರಲಿಲ್ಲ. [ಬಿಎಸ್ವೈಗೆ ಲಕ್ಷ್ಮೀನಾರಾಯಣ ಪ್ರಶ್ನೆಗಳು]

ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಲಕ್ಷ್ಮೀನಾರಾಯಣ ಅವರು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಬಿಜೆಪಿ ವಿರುದ್ಧ ಯಡಿಯೂರಪ್ಪ ಸಿಡಿದೆದ್ದು ಕೆಜೆಪಿ ಪಕ್ಷವನ್ನು ಕಟ್ಟಿದಾಗಲೂ ಅವರು ಬಿಎಸ್‌ವೈ ಅವರೊಂದಿಗೆ ಕೆಜೆಪಿಗೆ ಆಗಮಿಸಿದ್ದರು. ನಂತರ ಯಡಿಯೂರಪ್ಪ ಜೊತೆ ಬಿಜೆಪಿಗೆ ಮರಳಿ ಸೂಕ್ತ ಸ್ಥಾನಮಾನಕ್ಕಾಗಿ ಕಾಯುತ್ತಿದ್ದರು. ಆದರೆ, ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ದೊರೆಯದ ಕಾರಣ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಬೆಂಬಲಿಗರ ಸಭೆ ನಡೆಸಿದ ಅವರು, ಕಾಂಗ್ರೆಸ್ ಸೇರುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮಾರ್ಚ್ 18ರಂದು ಕಾಂಗ್ರೆಸ್ ಸೇರುವ ಕುರಿತು ಅಧಿಕೃತ ನಿರ್ಧಾರ ಪ್ರಕಟಿಸಲಿರುವ ಅವರು, ಅಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷವನ್ನು ಸೇರುವ ಸಾಧ್ಯತೆ ಇದೆ. ಇದರಿಂದಾಗಿ ವಿ ಧನಂಜಯ್ ಕುಮಾರ್ ನಂತರ ಮತ್ತೊಬ್ಬ ಯಡಿಯೂರಪ್ಪ ಪರಮಾಪ್ತರು ಬಿಜೆಪಿ ತೊರೆಯುವಂತಾಗಿದೆ. [ಧನಂಜಯ್ ಕುಮಾರ್ ಜೆಡಿಎಸ್ ಗೆ]
ಬಿಜೆಪಿಗೆ ಮರಳಲು ಅವಕಾಶ ದೊರೆಯಲಿಲ್ಲ ಎಂಬ ಕಾರಣಕ್ಕೆ ಧನಂಜಯ್ ಕುಮಾರ್ ಜೆಡಿಎಸ್ ಸೇರಿದ್ದರು. ಸದ್ಯ, ಲಕ್ಷ್ಮೀನಾರಾಯಣ ಅವರ ಸರದಿ. ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನಕ್ಕೆ ಆಗ್ರಹಿಸಿ, ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಅವರು, ಬಿಜೆಪಿ ನಾಯಕರೊಂದಿಗೂ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದರು. ಎಲ್ಲವೂ ವಿಫಲವಾದಾಗ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ.












Click it and Unblock the Notifications