NEET: ನೀಟ್ ವಿಚಾರದಲ್ಲಿ ಕಾಂಗ್ರೆಸ್‌ನಿಂದ ರಾಜಕೀಯ: ಕೇಂದ್ರದ ಕ್ರಮ ಹೊರತಾಗಿಯೂ ಇವರದ್ದು ನಾಟಕ: ವಿಜಯೇಂದ್ರ

ಬೆಂಗಳೂರು: NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಂಡಿದೆ. ಆದರೂ ಕಾಂಗ್ರೆಸ್ ಪರಿಸ್ಥಿತಿಯನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು. ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿ ಮುಂದೆ ನಿನ್ನೆ ಪ್ರತಿಭಟನೆ ವೇಳೆ ಬಿಜೆಪಿ ಶಾಸಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

BJP s BY Vijayendra

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಕೇಂದ್ರ ಸರ್ಕಾರ ಏನನ್ನೂ ಮುಚ್ಚಿಡಲಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತನಿಖೆಗೆ ಆದೇಶಿಸಿದರು. ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡು ಪ್ರಧಾನಮಂತ್ರಿಗಳು ಅಗತ್ಯ ಕ್ರಮ ಕೈಗೊಂಡರು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ರಾತ್ರೋರಾತ್ರಿ 13 ಜನರ ಬಂಧಿಸಲಾಗಿದೆ. ಆದರೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜತೆ ಸೇರಿ ಕಾಂಗ್ರೆಸ್ ಈಗ ಪ್ರತಿಭಟನೆ ನಾಟಕ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.

'ದೇಶದ ಭವಿಷ್ಯವೇ ಯುವ ಜನತೆ' ಎಂದು ತಿಳಿಸಿರುವ ಪ್ರಧಾನಿಯವರು, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮುಂದಾದರೂ ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುವುದು ಎಷ್ಟು ಸರಿ?. ನೀಟ್ ಪ್ರಕರಣದ ತನಿಖೆಗಾಗಿ 5 ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಮೂವತ್ತೈದು ದಿನದಲ್ಲಿ ಮರು ಪರೀಕ್ಷೆ

ನೀಟ್ ನಡೆಸಲು ಆರು ತಿಂಗಳು ತಯಾರಿಬೇಕು. ಅಂಥದರಲ್ಲಿ ಕೇಂದ್ರ ಸರ್ಕಾರ ಕೇವಲ ಮೂವತ್ತೈದು ದಿನದಲ್ಲಿ ಮರುಪರೀಕ್ಷೆ ನಡೆಸಿದೆ. ಪರೀಕ್ಷೆ ನಂತರ 25 ದಿನದಲ್ಲಿ ಫಲಿತಾಶ ಹೊರ ಬಿದ್ದಿದೆ. ಇನ್ನು ಮುಂದೆ ಪರೀಕ್ಷೆಯಲ್ಲಿ ಗೊಂದಲಗಳು ಆಗದಂತೆ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸಲು, ಕೃತಕ ಬುದ್ಧಿಮತ್ತೆ ಬಳಸಲು, ಪರೀಕ್ಷೆ ನಿಗಾಕ್ಕೆ ಅತ್ಯಾಧುನಿಕ ಕ್ರಮಗಳಿಗೆ ಕೇಂದ್ರ ಮುಂದಾಗಿದೆ. ಹೀಗಿದ್ದರೂ ಪ್ರತಿಭಟನೆ ಅನಗತ್ಯ ಎಂದು ಅವರು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.

ಇನ್ನೂ ಸಿಜೆಪಿ ನೇತೃತ್ವದಲ್ಲಿ ಧರಣಿ, ಹೋರಾಟ, ಪ್ರತಿಭಟನೆ ನಡೆಯುತ್ತಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವ ಪ್ರತಿಭಟನೆಗೂ ಯಾವುದೇ ಅಡ್ಡಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದೇಶದಲ್ಲಿದ್ದಾಗ ಇಲ್ಲದ ಕಾಳಜಿ ಈಗೇಕೆ?

ರಾಹುಲ್ ಗಾಂಧಿ ಅವರು ಹದಿನೈದು ಇಪ್ಪತ್ತು ದಿನ ವಿದೇಶದಲ್ಲಿದ್ದರು. ಆಗ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರಲಿಲ್ಲ. ಸ್ವದೇಶಕ್ಕೆ ಬಂದ ಕೂಡಲೇ ಅವರಿಗೆ ಕಾಳಜಿ ಉಕ್ಕಿ ಹರಿಯುತ್ತಿದೆ. ಭಾರತಕ್ಕೆ ಬಂದ ಕೂಡಲೇ ಹೈ ಸೆಕ್ಯೂರಿಟಿ ಇವರು ಪ್ರಧಾನಿ ನಿವಾಸದ ಬಳಿ ಧರಣಿ ಮಾಡುತ್ತಿದ್ದಾರೆ ಎಂದು ದೂರಿದರು.

ಯುವಕರ ಭವಿಷ್ಯದ ಜೊತೆ ಕಾಂಗ್ರೆಸ್ ಚೆಲ್ಲಾಟ

ಕಾಂಗ್ರೆಸ್ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ. ಧಾರವಾಡದಲ್ಲಿ ಉದ್ಯೋಗಕ್ಕಾಗಿ ಯುವಕರು ಭಾರಿ ಪ್ರತಿಭಟನೆ ಮಾಡಿದಾಗ ರಾಜ್ಯ ಸರ್ಕಾರ ಅವರ ಮೇಲೆ ಲಾಠಿ ಪ್ರಹಾರ ಮಾಡಿತು. ಚಿನ್ನಸ್ವಾಮಿ ಸ್ಟೇಡಿಯಂ ಕಾಳ್ತುಳಿತದಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಾಗ ಸರ್ಕಾರ ಜವಾಬ್ದಾರಿ ಹೊರದೆ ಅಧಿಕಾರಿಗಳ ಮೇಲೆ ಹೊಣೆ ಹೊರಿಸಿ ಕೈ ತೊಳೆದುಕೊಂಡಿತು ಎಂದು ಕಾಂಗ್ರೆಸ್ ಆಡಳಿತವನ್ನು ವಿಜಯೇಂದ್ರ ನೆನಪಿಸಿದರು.

ಅರಾಜಕತೆ ಸೃಷ್ಟಿಸುವ ಯತ್ನ

ಎನ್‍ಡಿಎ ಅಧಿಕಾರದಲ್ಲಿ ಎಂಬಿಬಿಎಸ್ ಸೀಟ್, ಮೆಡಿಕಲ್ ಕಾಲೇಜು, ವೈದ್ಯಕೀಯ ಪಿಜಿ ಸೀಟುಗಳು, ಐಐಟಿ ಹಾಗೂ ಐಐಎಂ ಸೀಟುಗಳು ಹೆಚ್ಚಳವಾಗಿವೆ. ಯುವಜನತೆಯ ಭವಿದ್ಯ ರೂಪಿಸಲು ಮೋದಿ ಅವರು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದನ್ನೆಲ್ಲ ನೋಡದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ ಮಾಡುತ್ತಿದೆ ಎಂದು ದೂರಿದರು. ರಾಹುಲ್ ಗಾಂಧಿ ಅವರು, ಮೋದಿ ಅವರ ಮನೆ ಮುಂದೆ ಕೂತು ನಾಟಕ ಆಡುವ ಬದಲು ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸಿದರೆ ಉತ್ತರ ಸಿಗಲಿದೆ ಎಂದು ಹೇಳಿದರು.

ಸಿಜೆಪಿ & ರಾಹುಲ್ ಗಾಂಧಿ ಮ್ಯಾಚ್ ಫಿಕ್ಸಿಂಗ್!

ನೀಟ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಚರ್ಚೆಗೆ ಬಾರದೇ ಯಾಕೆ ಪಲಾಯನ ಮಾಡಿದರು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರೀತಿ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದೆ.

ಸಿಜೆಪಿ ಮತ್ತು ರಾಹುಲ್ ಗಾಂಧಿ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಜೆನ್‍ಜಿ ಧಂಗೆ ಆದಾಗ ಕೂಗುತ್ತಿದ್ದ ಘೋಷಣೆಗಳನ್ನೇ ಜಂತರ್ ಮಂತರ್ ಧರಣಿ ವೇಳೆ ಕೂಗುತ್ತಿದ್ದಾರೆ. ಹಾಗಾಗಿ ಇವರ ಏಜೆಂಟ್, ಸೂತ್ರಧಾರ ಸಹ ವಿದೇಶದಲ್ಲಿ ಇದ್ದಾರೆ. ದೇಶವಿರೋಧಿ ಕೃತ್ಯ ನಡೆಸುವ ಸಂಸ್ಥೆಗಳ ಜೊತೆ ರಾಹುಲ್ ಗಾಂಧಿ ಶಾಮೀಲಾಗಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆಯು ನೀಟ್ ರೀತಿ ನೂರಾರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆಗ ಕಾಂಗ್ರೆಸ್ ಸಚಿವ ರಾಜೀನಾಮೆ ನೀಡಿಲ್ಲ. ಕೀಳು ರಾಜಕಾರಣ ಮಾಡುವ ಕಾಂಗ್ರೆಸ್ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+