ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಸಿ.ನಾಣಯ್ಯ ತಟಸ್ಥ, ಕೊಡಗಿನಲ್ಲಿ ಜೆಡಿಎಸ್ ಒಡೆದ ಮನೆ!

By ಬಿ.ಎಂ.ಲವ ಕುಮಾರ್
|
Google Oneindia Kannada News

ಮಡಿಕೇರಿ, ಡಿಸೆಂಬರ್ 21 : ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದರೂ, ಕೊಡಗಿನಲ್ಲಿ ಜೆಡಿಎಸ್ ಒಡೆದ ಮನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಲೇ ಬಂದಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವಾಗಿಲ್ಲ.

ಒಂದು ಕಾಲದಲ್ಲಿ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ನೇತೃತ್ವದಲ್ಲಿ ಒಂದಷ್ಟು ಮುಖಂಡರು ಪಕ್ಷದಲ್ಲಿದ್ದು ಜಿಲ್ಲೆಯಲ್ಲಿ ಕಾರ್ಯಕರ್ತರ ಪಡೆಯೂ ಇತ್ತು. ಟಿ.ಪಿ.ರಮೇಶ್, ಬಿ.ಎ.ಜೀವಿಜಯ, ವಿ.ಪಿ.ಶಶಿಧರ್ ಮೊದಲಾದ ಘಟಾನುಘಟಿ ನಾಯಕರಿದ್ದರು. [ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ!]

mc nanaiah

ಜನತಾದಳ ಹೋಳಾದಾಗ ಒಂದಷ್ಟು ಮಂದಿ ತಟಸ್ಥರಾದರೆ ಮತ್ತೆ ಕೆಲವರು ಬೇರೆ ಪಕ್ಷಗಳಿಗೆ ವಲಸೆ ಹೋದರು. ಈ ಸಂದರ್ಭ ಎಂ.ಸಿ.ನಾಣಯ್ಯ ಅವರು ತಟಸ್ಥರಾಗಿ ಉಳಿದು ಬಿಟ್ಟರು. ಇದರ ನಡುವೆಯೂ ಪಕ್ಷಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದ ವಿ.ಪಿ.ಶಶಿಧರ್ ಇತ್ತೀಚೆಗಷ್ಟೇ ಕಾಂಗ್ರೆಸ್‍ನತ್ತ ಮುಖ ಮಾಡಿದರು. ಸದ್ಯ, ಜೆಡಿಎಸ್‍ನಲ್ಲಿ ಪ್ರಭಾವಿ ನಾಯಕರೇ ಇಲ್ಲದಂತಾಗಿದೆ. ['ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ']

ಕಳೆದ ಬಾರಿ ಎಂ.ಸಿ.ನಾಣಯ್ಯ ಅವರಿಗೆ ವಿಧಾನಪರಿಷತ್‍ನಲ್ಲಿ ಸ್ಥಾನ ನೀಡಲಾಗಿತ್ತು. ಅದರ ಋಣ ತೀರಿಸುವ ಸಲುವಾಗಿ ಎಂ.ಸಿ.ನಾಣಯ್ಯ ಅವರು ಪಕ್ಷಕ್ಕಾಗಿ ಒಂದಷ್ಟು ಕೆಲಸ ಮಾಡಿದ್ದರು. ಈ ಬಾರಿ ಎಂ.ಸಿ.ನಾಣಯ್ಯ ಅವರನ್ನು ಕಡೆಗಣಿಸಲಾಗಿದೆ. ಪರಿಣಾಮ ಜೆಡಿಎಸ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದುವರೆಗೆ ಎಲ್ಲೂ ಕಾಣಿಸಿಕೊಳ್ಳದ ಸಂಕೇತ್ ಪೂವಯ್ಯ ಮುಖ್ಯವಾಹಿನಿಗೆ ಬಂದಿದ್ದು, ಚುನಾವಣೆಗೆ ಟಿಕೆಟ್ ಪಡೆದಿದ್ದಾರೆ. [ಪರಿಷತ್ ಚುನಾವಣೆ : ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ]

ಇದು ಸುಮಾರು 26 ವರ್ಷಗಳ ಕಾಲ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆ ಪಡೆದಿದ್ದ ಎಂ.ಸಿ.ನಾಣಯ್ಯ ಅವರ ಅತೃಪ್ತಿಗೆ ಕಾರಣವಾಗಿದೆ. ಅವರು ಒಂದಷ್ಟು ಅತೃಪ್ತರನ್ನು ಸೇರಿಸಿ ಸಭೆ ನಡೆಸಿ ತಟಸ್ಥರಾಗಿ ಇರಲು ತೀರ್ಮಾನಿಸಿದ್ದಾರೆ. ಇದು ಜೆಡಿಎಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಹಿರಂಗಪಡಿಸಿದೆ.

ಎಂ.ಸಿ.ನಾಣಯ್ಯ ಅವರ ವರ್ತನೆಯಿಂದ ಸಿಡಿಮಿಡಿಗೊಂಡಿರುವ ವಿಧಾನಪರಿಷತ್‍ನ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು, ಎಂ.ಸಿ.ನಾಣಯ್ಯ ಮತ್ತು ಅವರ ಬೆಂಬಲಿಗರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಪಕ್ಷದ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ.

ಜೀವಿಜಯ ಅವರ ವಿಶೇಷ ಪ್ರಯತ್ನದಿಂದಾಗಿ ಜೆಡಿಎಸ್ ಕೊಡಗಿನಲ್ಲಿ ಉಳಿದುಕೊಂಡಿದೆ ಎಂದಿರುವ ಸಂಕೇತ್ ಪೂವಯ್ಯ ಅವರು ಜಿಲ್ಲೆಗೆ ಎಂ.ಸಿ. ನಾಣಯ್ಯ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಜೆಡಿಎಸ್‍ನಲ್ಲಿನ ಒಡಕು ಬಿಜೆಪಿ ಮತ್ತು ಕಾಂಗ್ರೆಸ್‍ಗೆ ವರದಾನವಾಗುವುದಂತು ಖಚಿತ. ಡಿಸೆಂಬರ್ 27ರಂದು ವಿಧಾನಪರಿಷತ್ ಚುನಾವಣೆಗೆ ಮತದಾನ ನಡೆಯಲಿದೆ.

English summary
Former Law Minister and Kodagu JDS leader M.C. Nanaiah remain neutral in Legislative Council election. Sanketh Poovaiah JDS candidate for legislative council election scheduled on December 27, 215.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X