ಅನೈತಿಕ ಸಂಬಂಧದ ಶಂಕೆ, ಕಾರವಾರದ ಮಹಿಳೆಯ ಹತ್ಯೆ
ಕಾರವಾರ, ಜುಲೈ 05 : ಕಾರವಾರದ ವಿವಾಹಿತೆಯೋರ್ವಳು ಅನುಮಾನಾಸ್ಪದವಾಗಿ ಕೊಲೆಯಾಗಿರುವ ಘಟನೆ ಗೋವಾದ ಪೊಂಡಾದಲ್ಲಿ ಮಂಗಳವಾರ ನಡೆದಿದೆ.
ಕಾರವಾರದ ತನುಜಾ ನಾಯ್ಕ (25) ಮೃತಳಾಗಿರುವ ದುರ್ದೈವಿ. ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಹಾಗೆ ಕಾಣಿಸುತ್ತಿದೆ. ದಿಂಬಿನ ಮೇಲೆ 'ಐ ಲವ್ ಯೂ' ಮತ್ತು 'ರೆಸ್ಟ್ ಇನ್ ಪೀಸ್' ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದು, ಕೊಲೆಯ ಹಿಂದೆ ಗಂಡನ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗಂಡ ಯತೀಶ್ ನಾಯ್ಕನೊಂದಿಗೆ ಕಾರ್ಯದ ನಿಮಿತ್ತ ತನುಜಾ ಅವರು ಭಾನುವಾರ ರಾತ್ರಿ ಗೋವಾದ ಮಡಗಾಂವ್ ಗೆ ತೆರಳಿದ್ದರು. ಸೋಮವಾರ ಬೆಳಿಗ್ಗೆ ಪೊಂಡಾದಲ್ಲಿರುವ ಗಂಡನ ಮನೆಗೆ ಮರಳಿದ್ದ ತನುಜಾ ಕೋಣೆಯಲ್ಲಿ ಮಲಗಿದ್ದಳು.
ಮಧ್ಯಾಹ್ನ ಊಟ ಮಾಡಿ ಹೋಗಿದ್ದ ಯತೀಶ್ ನಾಯ್ಕ ಮನೆಗೆ ಸಂಜೆಯಾದರೂ ಮರಳಿರಲಿಲ್ಲ. ಹೀಗಾಗಿ ಅನುಮಾನಗೊಂಡ ಯತೀಶನ ಕುಟುಂಬದವರು ದಂಪತಿಯ ಕೋಣೆಗೆ ತೆರಳಿದಾಗ ತನುಜಾ ಮೃತಳಾಗಿದ್ದಳು. ತಕ್ಷಣವೇ ಕುಟುಂಬದವರು ತಮಗೆ ಮಾಹಿತಿ ರವಾನಿಸಿದ್ದು, ಶವ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಕೋಣೆಯ ಬಾಗಿಲು ಹೊರಗಿನಿಂದ ಮುಚ್ಚಲ್ಪಟ್ಟಿತ್ತು. ಜತೆಗೆ ಪತಿ ಯತೀಶ್ ಪತ್ತೆಯಿರದ ಕಾರಣ ಆತನೇ ಕೊಲೆಮಾಡಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರವಾರದ ನಿವಾಸಿಯಾಗಿದ್ದ ತನುಜಾಳಿಗೆ ಮರ್ಗಾಂವ್ನಲ್ಲಿ ಓದುತ್ತಿರುವಾಗ ಯತೀಶ್ ನಾಯ್ಕ ಅವರ ಪರಿಚಯವಾಗಿತ್ತು. ಅಲ್ಲಿಯೇ ಪ್ರೀತಿಸಿದ್ದ ಅವರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಯತೀಶ್ ವೃತ್ತಿಯಲ್ಲಿ ಕ್ಯಾಟರರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ತನುಜಾಳಿಗೆ ಅಕ್ರಮ ಸಂಬಂಧವಿತ್ತು ಎಂದು ಶಂಕಿಸಿ ಆಕೆಯ ಪತಿ ಯತೀಶ್ ತಲೆದಿಂಬಿನ(ಪಿಲ್ಲೋ) ಮೂಲಕ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಯತೀಶನಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications