ಈ ಲಗ್ನ ಸಾಧ್ಯವಿಲ್ಲ, ಏಕೆಂದ್ರೆ ಅವಳು ಅವಳಲ್ಲ ಅವನು!

Posted By:
Subscribe to Oneindia Kannada

ಕೊಪ್ಪಳ, ಜೂನ್ 24 : "ನಾನು ಸಾಯುವ ತನಕ ರಾಧಿಕಾಳಿಗಾಗಿ ಬದುಕುತ್ತೇನೆ. ಅವಳ ಹೊರತಾಗಿ ನಾನು ಯಾರೊಂದಿಗೂ ಬದುಕಲು ಇಷ್ಟಪಡುವುದಿಲ್ಲ. ಆದರೆ ಅವರು ನಮ್ಮಿಬ್ಬರನ್ನು ಬಲವಂತವಾಗಿ ಬೇರೆ ಮಾಡುತ್ತಿದ್ದಾರೆ" ಎಂದು ಶಿವಕುಮಾರ್ ಹೇಳುವಾಗ ಆತನ ಕಂಗಳಲ್ಲಿ ಕಂಬನಿ ಮಿಡಿಯುತ್ತದೆ.

ಇದು ಇಬ್ಬರು 'ವಿಶಿಷ್ಟ'ವಾದ ಪ್ರೇಮಿಗಳ ವಿಭಿನ್ನವಾದ ಗೋಳಿನ ಕಥೆ. ಅವರಿಬ್ಬರ ಸ್ನೇಹ ಎರಡೂ ಮನೆಯವರಿಗೆ ತಿಳಿದಿತ್ತು. ಅವರು ಆ ಸ್ನೇಹಕ್ಕೆ ಎಂದೂ ಅಡ್ಡಿ ಬಂದಿರಲಿಲ್ಲ. ಆದರೆ, ಅಡ್ಡಿಯಾಗಿದ್ದು ಅವರ ಮದುವೆಗೆ. ಯಾಕೆಂದರೆ, ಅವಳು ಅವಳಲ್ಲ ಅವನು! [ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]

ವಸ್ತುಸ್ಥಿತಿ ಹೀಗಿರುವಾಗ, ಕೊಪ್ಪಳ ಜಿಲ್ಲೆಯವರಾದ ಅವರಿಬ್ಬರು ಕೇವಲ ಮೂರು ದಿನಗಳ ಹಿಂದೆ ಹಸೆಮಣೆಯೇರಿದ್ದಾರೆ. ಕೊಪ್ಪಳದ ಸದಾಶಿವನಗರದಲ್ಲಿರುವ ಸಂತೋಷಿಮಾ ದೇವರೆದಿರು ರಾಧಿಕಾಳ ಮನೆಯವರು ಅವರಿಬ್ಬರ ಲಗ್ನ ನೆರವೇರಿಸಿದ್ದಾರೆ. ಆದರೆ, ಎರಡೇ ದಿನದಲ್ಲಿ ಶಿವಕುಮಾರ್ ಮನೆಯವರು ಆತನನ್ನು ಎಳೆದುಕೊಂಡು ಹೋಗಿದ್ದಾರೆ. [ಮಂಗಳಮುಖಿಯನ್ನು ಪ್ರೀತಿಸಿ ರೈಲಿಗೆ ತಲೆಕೊಟ್ಟ ಯುವಕ]

Married couple separated, as she is not she

ಲಂಬಾಣಿ ಸಮುದಾಯದವರಾದ ಇಬ್ಬರ ಬಾಳಲ್ಲೂ ಈಗ ಕಾರ್ಮೋಡ ಕವಿದಿದೆ. ಮದುವೆಯಾಗಿ ಶಿವಕುಮಾರ್ ಜೊತೆ ಸಂಸಾರ ಹೂಡುವ ಕನಸು ಕಾಣುತ್ತಿದ್ದ 19 ವರ್ಷದ ರಾಧಿಕಾಳ ಬಾಳಲ್ಲಿ ಕಣ್ಣೀರು ಭೋರ್ಗರೆಯುತ್ತಿದೆ. ಆಕೆಯ ಗಲ್ಲಕ್ಕೆ ಹಚ್ಚಿದ ಅರಿಷಿಣ ಇನ್ನೂ ಹಸಿಯಾಗಿರುವಾಗಲೇ ಅರಿಷಿಣದ ಕೊಂಬನ್ನು ಕಿತ್ತುಕೊಂಡು ಹೋಗಿದ್ದಾರೆ.

"ಕಳೆದ ಒಂದು ವರ್ಷದಿಂದ ನಮ್ಮಿಬ್ಬರ ನಡುವೆ ಇದ್ದ ಸ್ನೇಹ ಇಬ್ಬರ ಮನೆಯವರಿಗೆ ತಿಳಿದಿತ್ತು. ಆದರೆ, ಮದುವೆಯಾಗುವುದು ಶಿವಕುಮಾರ್ ಮನೆಯವರಿಗೆ ಬೇಡವಾಗಿದೆ" ಎಂದು ಪುರುಷನಾಗಿ ಹುಟ್ಟಿದ್ದರೂ ಒಂದು ವರ್ಷದ ಹಿಂದೆ ಸ್ತ್ರೀಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ರಾಧಿಕಾ ಅಳಲು ತೋಡಿಕೊಳ್ಳುತ್ತಾಳೆ.

ಇಬ್ಬರ ನಡುವೆ ಸಿನಿಮೀಯವಾಗಿ ಸ್ನೇಹ ಮತ್ತು ಪ್ರೀತಿ ಚಿಗುರೊಡೆದಿದೆ. ಶಿವಕುಮಾರ್ ಕೊಪ್ಪಳ ರೈಲು ನಿಲ್ದಾಣದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದಾನೆ. ರಾಧಿಕಾ ಮಂಗಳಮುಖಿಯಾಗಿ ಪರಿವರ್ತನೆಯಾದ ನಂತರ ಅಲ್ಲಿ ಹಣ ಕೇಳಲು ಹೋಗುತ್ತಿದ್ದಳು. ಆಗ ಇಬ್ಬರ ಕಣ್ಣುಕಣ್ಣು ಬೆಸೆದು, ಮನಸುಮನಸುಗಳು ಒಂದಾಗಿವೆ. ['ನಾವು ಮನುಷ್ಯರು, ನಮ್ಮನ್ನು ಘನತೆಯಿಂದ ಬದುಕಲು ಬಿಡಿ']

ಇಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ. ನಮಗೆ ಮಕ್ಕಳಾಗುವುದು ಸಾಧ್ಯವಿಲ್ಲ ಎಂದು ರಾಧಿಕಾ ಹೇಳಿದಾಗ, ನನಗೆ ಮಕ್ಕಳು ಬೇಡ ನಿನ್ನ ಸಂಗವೊಂದಿದ್ದರೆ ಸಾಕು ಎಂದು ಶಿವಕುಮಾರ್ ಆಕೆಯನ್ನು ಮದುವೆಯಾಗಲು ಒಪ್ಪಿದ್ದಾನೆ. ಅಷ್ಟರಲ್ಲಾಗಲೆ, ಆತನ ಸೋದರ ಸಂಬಂಧಿಯೊಡನೆ ಮದುವೆ ನಿಶ್ಚಯವಾಗಿತ್ತು. ಅದು ಶಿವಕುಮಾರ್‌ನಿಗೆ ಒಲ್ಲದ ಲಗ್ನವಾಗಿತ್ತು.

ನ್ಯಾಯ ದೊರಕಿಸಿಕೊಡಬೇಕೆಂದು ರಾಧಿಕಾ ಪೊಲೀಸ್ ಸ್ಟೇಷನ್ನಿಗೆ ಹೋದಾಗ, ಮಹಿಳಾ ಪೊಲೀಸ್ ಪೇದೆ, "ನೀನಾಗಲೆ ಸುಳ್ಳು ಹೇಳಿದ್ದಿ. ನೀನು ಸ್ತ್ರೀಯಲ್ಲ ಪುರುಷ. ಸೀರೆಯುಟ್ಟುಬಿಟ್ಟರೆ ಪುರುಷನಾಗಿಬಿಡುತ್ತಿಯಾ? ಯಾಕೆ ಅವನ ಜೀವನ ಹಾಳು ಮಾಡುತ್ತಿದ್ದೀಯಾ" ಎಂದು ಹೇಳಿ ರಾಧಿಕಾಳನ್ನು ದಬಾಯಿಸಿ ಕಳಿಸಿದ್ದಾಳೆ. [ಗಂಡ ಬೇಕು, ಪರರ ಸಂಗ ಬೇಕು, ವಿಚ್ಛೇದನ ಬೇಡ!]

ರಾಧಿಕಾ ಮನೆಯವರು ಕೂಡ ಅಧಿಕೃತವಾಗಿ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು ನಮ್ಮ ಜೊತೆ ಮಾತನಾಡಲು ಸಿದ್ಧರಿದ್ದರೆ ದೂರನ್ನು ನೀಡುತ್ತೇವೆ. ದೂರ ನೀಡಲು ಹೋದರೆ, ನಮ್ಮ ಮೇಲೆ ಭಾರತೀಯ ದಂಡ ಸಂಹಿತೆಯ 377 ಸೆಕ್ಷನ್ ಅಡಿ ಕೇಸು ಹಾಕುತ್ತೇವೆ ಎಂದು ಪೊಲೀಸರು ಬೆದರಿಸುತ್ತಿದ್ದಾರೆ ಎಂದು ರಾಧಿಕಾ ಮನೆಯವರು ಹೇಳುತ್ತಿದ್ದಾರೆ.

ಈಗ ಅವರಿಬ್ಬರು ಏನು ಮಾಡಬೇಕು? ಸಮಾಜ ಮತ್ತು ಕಾನೂನನ್ನು ಧಿಕ್ಕರಿಸಿ ಪ್ರೀತಿಗೆ ಬೆಲೆ ಕೊಟ್ಟು ಒಟ್ಟಿಗೆ ಜೀವಿಸಬೇಕಾ? ಕಾನೂನು ಮತ್ತು ಸಮಾಜದ ನಿಂದನೆಗೆ ಹೆದರಿ ಬೇರೆಬೇರೆಯಾಗಬೇಕಾ? ಇಂಥ ಮದುವೆಗೆ ನಮ್ಮ ಸಮಾಜದಲ್ಲಿ ಅವಕಾಶವಿದೆಯಾ? (ಚಿತ್ರಸುದ್ದಿ : ದಿ ನ್ಯೂಸ್ ಮಿನಿಟ್) [ನಿರ್ದೇಶಕ ಬಿ.ಎಸ್.ಲಿಂಗದೇವರು ವಿಶೇಷ ಸಂದರ್ಶನ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is a classic love story turned tragedy. Shivakumar married Radhika knowing that she is transgender. But, his family, which knew about their love affair, is not ready for their marriage. Radhika is knocking on police station door, only to be rejected there also.
Please Wait while comments are loading...