ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ಬ್ರೇಕ್, ಉಲ್ಲಂಘಿಸಿದರೆ ಕ್ರಮ; ಮಾರ್ಗಸೂಚಿಗಳೇನೇನು?
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾಡುಗಳ ಸಾಹಿತ್ಯ ಮೊದಲಿನಂತಿಲ್ಲ. ಅಶ್ಲೀಲವಾಗಿರುತ್ತವೆ, ನಕಾರಾತ್ಮಕವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಇಂಥಹ ಹಾಡುಗಳನ್ನೇ ಮಕ್ಕಳು ಕೇಳಿಸಿಕೊಳ್ಳುತ್ತಾರೆ. ಸಾಲದ್ದಕ್ಕೆ ಶಾಲೆಗಳಲ್ಲಿ ವಾರ್ಷಿಕೋತ್ಸವ, ಇನ್ನಿತರ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅವುಗಳನ್ನೆ ಹಾಡುತ್ತಾರೆ, ಆ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಇದಕ್ಕೆಲ್ಲ ಪ್ರಾಥಮಿಕ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಹೊಸ ನಿಯಮಗಳಡಿ ಶಾಲಾ ಕಾರ್ಯಕ್ರಮಗಳಲ್ಲಿ ಇಂತಹ ಅಶ್ಲೀಲ ಹಾಡುಗಳಿಗೆ ನಿಷೇಧಿಸಿ ಮಂಗಳವಾರ (ಏ.28) ಸುತ್ತೋಲೆ ಹೊರಡಿಸಿದೆ.
ಶಾಲಾ ವಾರ್ಷಿಕೋತ್ಸವ ಅಥವಾ ಇನ್ನಿತರ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅಸಭ್ಯ, ಅಶ್ಲೀಲ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವದನ್ನು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ. ಎಂಥಹ ಹಾಡುಗಳು ಇರಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಯಾರು ಹೊಣೆ ಎಂಬುದಕ್ಕೆಲ್ಲ ನಿಯಮ ರೂಪಿಸಿ ಮಾರ್ಗಸೂಚಿ ನೀಡಿದೆ.

ಸರ್ಕಾರಿ ಶಾಲೆಗಳು ಮಾತ್ರವಲ್ಲದೇ ಖಾಸಗಿ ಶಾಲೆಗಳಿಗೆ ಅನ್ವಯವಾಗಲಿದೆ. ಎಲ್ಲ ಶಾಲೆಗಳು ವಾರ್ಷಿಕೋತ್ಸವ, ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ನಕಾರಾತ್ಮಕ ಅಂಶಗಳನ್ನು ಬೀರುವ, ಅಶ್ಲೀಲ, ಅಸಭ್ಯ ಹಾಡುಗಳನ್ನು ಹಾಡುವುದು, ಅವುಗಳಿಗೆ ಮಕ್ಕಳು ನೃತ್ಯ ಮಾಡುವಂತಿಲ್ಲ. ಹಾಗೇನಾದರೂ ಆದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.
ಇಂತಹ ಆದೇಶ ನೀಡಿದ್ದೇಕೆ?
ವಾರ್ಷಿಕೋತ್ಸವ, ಪ್ರತಿಭಾ ಕಾರಂಜಿ, ಇನ್ನಿತರ ಕಾರ್ಯಕ್ರಮಗಳಲ್ಲಿ ಸಿನಿಮಾ ಶೈಲಿಯ ಅಸಭ್ಯ ಹಾಡುಗಳಿಗೆ ನೃತ್ಯ ಮಾಡುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಇದು ವಿದ್ಯಾರ್ಥಿಗಳ ನೈತಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಅಶಿಸ್ತು ಮೂಡಿದಂತಾಗುತ್ತದೆ. ಶಿಕ್ಷಣದ ಪಾವಿತ್ರ್ಯತೆಗೆ ಧಕ್ಕೆ ತಂದಂತಾಗುತ್ತದೆ ಎಂದು ಶಿಕ್ಷಣ ತಜ್ಞರು, ಕೆಲವು ಪೋಷಕರು ಕಳವಳ ವ್ಯಕ್ತಪಡಿಸಿದ್ದರು. ಇದೆಲ್ಲ ಪರಿಗಣಿಸಿ ಆದೇಶಿಸಲಾಗಿದೆ.
ಎಂತಹ ಹಾಡುಗಳಿಗೆ ಅನುಮತಿ
ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲ. ಮಕ್ಕಳು ಬೆಳವಣಿಗೆ, ಜ್ಞಾನಾರ್ಜನೆ ಇಲ್ಲಿಂದಲೆ ಆರಂಭ. ಒಳ್ಳೆಯ ನಡತೆ, ಅವರ ಮಾನಸಿಕ ಸ್ಥಿತಿ, ಆರೋಗ್ಯ ಸ್ಥಿತಿ, ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಯಾಗಿ ಹೊರ ಹೊರಮ್ಮುವುದು ಇಲ್ಲಿಂದಲೇ. ಹೀಗಾಗಿ ಶಾಲಾ ಕಾರ್ಯಕ್ರಮಗಳಲ್ಲಿ ಸ್ಪೂರ್ತಿದಾಯಕ, ರಾಷ್ಟ್ರಾಭಿಮಾನ, ನಾಡಿನ ಹಿರಿಮೆ, ಸಾಂಸ್ಕೃತಿಕ, ಸಂಸ್ಕಾರ, ನೈತಿಕತೆ ಎತ್ತಿ ಹಿಡಿಯುವಂತಹ ಹಾಡುಗಳು ಸೇರಿದಂತೆ ಒಟ್ಟಾರೆ ಸಕಾರಾತ್ಮಕ ಅಂಶಗಳನ್ನು ಬೀರುವ ಹಾಡುಗಳನ್ನು ಮಾತ್ರ ಆಯ್ಕೆ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಾಡುಗಳ ಆಯ್ಕೆ ಹೇಗೆ?
ಹಾಡುಗಳು, ನೃತ್ಯಗಳ ಆಯ್ಕೆಯಲ್ಲಿ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಜವಾಬ್ದಾರಿ ವಹಿಸಬೇಕು. ಮಕ್ಕಳ ಶಾಲಾ ಕಾರ್ಯಕ್ರಮಗಳಲ್ಲಿ ಈ ಮೇಲೆ ತಿಳಿಸಿದ ಹಾಡುಗಳನ್ನು ಪರಿಶೀಲಿಸಿ ಆಯ್ಕೆ ಮಾಡಬೇಕು. ಮಕ್ಕಳು ಉಡುಪು ಸಭ್ಯವಾಗಿರಬೇಕು ಎಂದು ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಿಗೆ ಇಲಾಖೆ ಸೂಚಿಸಲಾಗಿದೆ.













Click it and Unblock the Notifications