ಮುಂಗಾರು ಮುನ್ನ ಪ್ರವಾಹ ನಿರ್ವಹಣೆಗೆ ಅಧಿಕಾರಿಗಳ ತಂಡ ರಚನೆ: ಎಚ್ಚೆತ್ತ ನಗರ ಪಾಲಿಕೆ
ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಸಾಕು ಪ್ರವಾರ, ರಸ್ತೆ ಸಂಚಾರ ಸಮಸ್ಯೆಗಳು ಉದ್ಭವಿಸಿ ಬಿಡುತ್ತವೆ. ಬೇಸಿಗೆ ಮಧ್ಯೆ ಆಗಾಗ ಮಳೆ ಶುರುವಾಗಿದೆ. ಇದೀಗ ಮುಂಗಾರು ಮಳೆ ಮುನ್ನವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪೂರ್ವ ನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಪ್ರವಾಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಯುವ ಹಾಗೂ ಪ್ರವಾಹ ಪರಿಸ್ಥಿತಿಗಳಿಗೆ ತುರ್ತಾಗಿ ಪ್ರತಿಕ್ರಿಯಿಸುವ ಉದ್ದೇಶದಿಂದ ಎಲ್ಲಾ ಉಪವಿಭಾಗಗಳಲ್ಲಿ ತಕ್ಷಣದಿಂದಲೇ ಉಪವಿಭಾಗ ಮಟ್ಟದ ನಗರ ಪ್ರವಾಹ ನಿರ್ವಹಣಾ ತಂಡಗಳನ್ನು ರಚಿಸಿದೆ. ಇವುಗಳ ಕೆಸಲವೇನು? ಈ ತಂಡಗಳಲ್ಲಿ ಯಾವೆಲ್ಲ ಇಲಾಖೆ ಅಧಿಕಾರಿಗಳು ಇರುತ್ತಾರೆ ಎಂಬ ಮಾಹಿತಿ ಇಲ್ಲಿದೆ.
ಇಂದು ಮಂಗಳವಾರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ಹಾಗೂ ವಿವಿಧ ಇಲಾಖೆಗಳ ಅಧಕಾರಿಗಳ ನಡುವೆ ಸಮನ್ವಯ ಸಭೆ ನಡೆಯಿತು. ಪ್ರತಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ನೇತೃತ್ವದಲ್ಲಿ ಈ ತಂಡಗಳು ಕಾರ್ಯನಿರ್ವಹಿಸಲಿವೆ. ಪೂರ್ವಸಿದ್ಧತೆ, ಪ್ರವಾಹ ತಡೆ, ತುರ್ತು ಪರಿಸ್ಥಿತಿ ನಿರ್ವಹಣೆ ಹಾಗೂ ಮೂಲಸೌಕರ್ಯ ಪುನಃಸ್ಥಾಪನೆಗೆ ಪ್ರಮುಖ ಕ್ಷೇತ್ರ ಮಟ್ಟದ ಘಟಕಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಆಯುಕ್ತರು ತಿಳಿಸಿದರು.

ಬಹು ಇಲಾಖೆಗಳನ್ನು ಒಳಗೊಂಡ ಸಮನ್ವಯ ತಂಡ
ಸಂಬಂಧಿತ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಟ್ಟಾರೆ ನೋಡಲ್ ಅಧಿಕಾರಿಯಾಗಿದ್ದು, ಉಪವಿಭಾಗದ ಕಿರಿಯ/ ಸಹಾಯಕ ಎಂಜಿನಿಯರ್, ಬಿಡಬ್ಲ್ಯೂಎಸ್ಎಸ್ಬಿಯ ಉಪವಿಭಾಗ ಮಟ್ಟದ ಪ್ರತಿನಿಧಿ, ಬೆಸ್ಕಾಂನ ಉಪವಿಭಾಗ ಮಟ್ಟದ ಪ್ರತಿನಿಧಿ, ಉಪವಿಭಾಗ ವ್ಯಾಪ್ತಿಯ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್/ಸಬ್-ಇನ್‌ಸ್ಪೆಕ್ಟರ್,ಅರಣ್ಯ ಅಧಿಕಾರಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ವಿಪತ್ತು ನಿರ್ವಹಣೆ/ ತುರ್ತು ಪ್ರತಿಕ್ರಿಯೆ ನೋಡಲ್ ಅಧಿಕಾರಿ, ನಿಯಂತ್ರಣ ಕೊಠಡಿ/ಐಟಿ/ಸಂವಹನ ನೋಡಲ್ ಅಧಿಕಾರಿ, ರೈಲ್ವೆ ಇಲಾಖೆಯ ನೋಡಲ್ ಅಧಿಕಾರಿ, (ರೈಲ್ವೆ ಕೆಳಸೇತುವೆ / ರೈಲು ಕಾರಿಡಾರ್ ವ್ಯಾಪ್ತಿಯಲ್ಲಿ) ಹಾಗೂ ಎಇಇ ಅಗತ್ಯವಿರುವ ಇತರ ಸಹ-ಆಯ್ಕೆ ಅಧಿಕಾರಿಗಳು ತಂಡದಲ್ಲಿರಲಿದ್ದಾರೆ.
ಉಪವಿಭಾಗ ಸಮಿತಿ ಅಧಿಕಾರಿಗಳ ಪಾತ್ರವೇನು?
ಉಪವಿಭಾಗದಲ್ಲಿನ ಎಲ್ಲಾ ಪ್ರವಾಹ ನಿರ್ವಹಣಾ ಕಾರ್ಯಗಳಿಗೆ ಸಂಬಂಧಿಸಿದಂತೆ ಯೋಜನೆ, ಮೇಲ್ವಿಚಾರಣೆ, ಸಮನ್ವಯ, ಮತ್ತು ತುರ್ತು ಪ್ರತಿಕ್ರಿಯೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ. ಅವರು ಸಮಸ್ಯೆಗಳು ಹಾಗೂ ಪರಿಹಾರಗಳನ್ನು ಖಚಿತಪಡಿಸಿಕೊಳ್ಳುತ್ತಾರೆ. ಮಳೆಗಾದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ತಂಡದ ಅಧಿಕಾರಿಗಳ ಜವಾಬ್ದಾರಿ ಏನು? ಪ್ರಮುಖಾಂಶಗಳು ಇಲ್ಲಿವೆ.
* ಎಲ್ಲಾ ಪ್ರವಾಹ ಪೀಡಿತ ರಸ್ತೆಗಳು, ಜಂಕ್ಷನ್‌ಗಳು, ಅಂಡರ್‌ಪಾಸ್‌ಗಳು, ಚರಂಡಿಗಳು, ಕೆರೆಗಳು, ಕಲ್ವರ್ಟ್‌ಗಳು ಮತ್ತು ತಗ್ಗು ಪ್ರದೇಶಗಳನ್ನು ವಿವರಗಳನ್ನು ಹೊಂದಿರುವ ಉಪವಿಭಾಗದ ಪ್ರವಾಹ ದುರ್ಬಲತೆ ವಹಿಯನ್ನು ಸಿದ್ಧಪಡಿಸುವುದು.
* ಪ್ರಮುಖ ರಾಜಕಾಲುವೆಗಳು, ದ್ವಿತೀಯ ಚರಂಡಿಗಳು, ರಸ್ತೆಬದಿಯ ಚರಂಡಿಗಳು, ಕಲ್ವರ್ಟ್‌ಗಳು, ಒಳಹರಿವಿನ ಮತ್ತು ಹೊರಹರಿವಿನ ಸ್ಥಳಗಳು ಮತ್ತು ಕೆರೆ-ಸಂಬಂಧಿತ ಕಾಲುವೆಗಳನ್ನು ಒಳಗೊಂಡ ಒಳಚರಂಡಿಗಳನ್ನು ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳುವುದು.

* ಮಳೆಗಾಲಕ್ಕೆ ಮುಂಚಿತವಾಗಿ ಎಲ್ಲಾ ಪ್ರಮುಖ ಕಾಲುವೆಗಳು ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿನ ಹೂಳು ತೆಗೆಯುವಿಕೆ ಮತ್ತು ತೆರವು ಕಾರ್ಯ ಪೂರ್ಣಗೊಳಿಸುವುದು.
* ಉಪವಿಭಾಗದಲ್ಲಿ ಬಾಕಿ ಇರುವ ಮತ್ತು ನಡೆಯುತ್ತಿರುವ ಎಲ್ಲಾ ಚರಂಡಿ ಕಾಮಗಾರಿ ತ್ವರಿತವಾಗಿ ಮುಗಿಸುವುದು.
* ನಿಯಮಿತ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸುವುದು ಮತ್ತು ಪಂಪ್‌ಗಳು ಮತ್ತು ನಿರ್ಜಲೀಕರಣ ಉಪಕರಣಗಳ ನಿಯೋಜನೆ.
* ಎಲ್ಲಾ ನಿರ್ಣಾಯಕ ಪ್ರವಾಹ ಪ್ರದೇಶಗಳಿಗೆ ಉಪವಿಭಾಗವಾರು ಸೂಕ್ಷ್ಮ ಯೋಜನೆಗಳನ್ನು ಸಿದ್ಧಪಡಿಸುವುದು.
* ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಸಂಚಾರ ಪೊಲೀಸ್, ರೈಲ್ವೆ, ಅರಣ್ಯ/ತೋಟಗಾರಿಕೆ, ಸರೋವರ ವಿಭಾಗ, ಕಂದಾಯ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು.
* ಕ್ಷೇತ್ರ ಕಾರ್ಯಗಳ ದೈನಂದಿನ ಮೇಲ್ವಿಚಾರಣೆ ಮತ್ತು ಪ್ರಗತಿ ವರದಿಗಳನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವುದು.
* ಎಲ್ಲಾ ತಂಡಗಳು ಸಂಪೂರ್ಣವಾಗಿ ನಿಯೋಜಿಸಲ್ಪಟ್ಟಿವೆ ಮತ್ತು ಎಲ್ಲಾ ಉಪಕರಣಗಳು ಸಿದ್ಧ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳುವುದು.
* ನಿರ್ಣಾಯಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಕ್ಷೇತ್ರ ತಪಾಸಣೆ ನಡೆಸುವುದು ಮತ್ತು ಸಂಪರ್ಕ ಮತ್ತು ಎಸ್ಕಲೇಷನ್ ಮ್ಯಾಟ್ರಿಕ್ಸ್ ಅನ್ನು ನಿರ್ವಹಿಸುವುದು ಇವರ ಕೆಲಸವಾಗಿರುತ್ತದೆ.
ಬಿಡಬ್ಲ್ಯೂಎಸ್ಎಸ್ಬಿ ನೋಡಲ್ ಅಧಿಕಾರಿಗಳ ಕಾರ್ಯ
* ಜಲಮಂಡಳಿ ಕೊಳವೆ ಮಾರ್ಗದಲ್ಲಿನ ಕಂದಕ-ಕತ್ತರಿಸಿದ ಪ್ರದೇಶಗಳು, ಪೈಪ್‌ಲೈನ್ ಕ್ರಾಸಿಂಗ್‌ಗಳು, ಮ್ಯಾನ್‌ಹೋಲ್‌ಗಳು ಮತ್ತು ಚರಂಡಿಗಳು ಅಥವಾ ರಸ್ತೆಗಳ ಮೇಲೆ ಪರಿಣಾಮ ಬೀರುವ ಯುಟಿಲಿಟಿ ಅಡಚಣೆಗಳನ್ನು ಗುರುತಿಸುವುದು ಹಾಗೂ ಸರಿಪಡಿಸುವುದು.
* ಕಂದಕಗಳ ಪುನಃಸ್ಥಾಪನೆ ವಿಳಂಬವಿಲ್ಲದೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.
* ಪೈಪ್‌ಲೈನ್ ಕಾಮಗಾರಿಯಿಂದ ಹಾನಿಗೊಳಗಾದ ರಸ್ತೆಬದಿಯ ಚರಂಡಿಗಳನ್ನು ಪುನರ್ನಿರ್ಮಿಸುವುದು ಅಥವಾ ಪುನಃಸ್ಥಾಪಿಸುವುದು.
* ಮಾನ್ಸೂನ್ ಸಿದ್ಧತೆಯ ಅವಧಿಯಲ್ಲಿ ಯಾವುದೇ ರಸ್ತೆಯನ್ನು ಅಗೆಯುವ ಮೊದಲು ಉಪವಿಭಾಗದ ಎಇಇ ಜೊತೆ ಸಮನ್ವಯ ಸಾಧಿಸುವುದು.
* ವಿದ್ಯುತ್ ಸಂಪರ್ಕ ವೈಫಲ್ಯದಿಂದ ಉಂಟಾಗುವ ಜಲಾವೃತ ಪ್ರದೇಶಗಳಲ್ಲಿ ತುರ್ತು ಪ್ರತಿಕ್ರಿಯೆಗಾಗಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸುವುದು.
ಬೆಸ್ಕಾಂ, ಸಂಚಾರ ಪೊಲೀಸ್ ಠಾಣೆ, ಅರಣ್ಯಾಧಿಕಾರಿಗಳು, ಜಲಮಮಂಡಳಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಂಡದಲ್ಲಿದ್ದಾರೆ. ಅವರು ತಮ್ಮ ವ್ಯಾಪ್ತಿಯಲ್ಲಿ ನಿಗದಿ ಮಾಡಿದ ಮಳೆ, ಪ್ರವಾಹ ಸಮಸ್ಯೆ ಕುರಿತ ಕೆಲಸಗಳನ್ನು ಮಾಡಲಿದ್ದಾರೆ.













Click it and Unblock the Notifications