ಹಿಜಾಬ್ ಪರ ಪ್ರತಿಭಟನೆ, 58 ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್
ಬೆಂಗಳೂರು, ಫೆಬ್ರವರಿ 20: ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇನ್ನೂ ನಡೆದಿದೆ. ಈ ನಡುವೆ ಶಾಲಾ, ಕಾಲೇಜು ಆವರಣದಲ್ಲಿ ಹಿಜಾಬ್ ಪರ ಪ್ರತಿಭಟನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗುತ್ತಿದೆ.
ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ. ಹಿಜಾಬ್, ಬುರ್ಖಾ ತೆಗೆದರಷ್ಟೆ ತರಗತಿಗೆ ಅವಕಾಶ ಎಂದು ಕಾಲೇಜು ಆಡಳಿತ ಮಂಡಳಿಗಳು ಪಟ್ಟು ಹಿಡಿದಿವೆ. ಆದರೆ, ಕೆಲವೆಡೆ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಿದ್ದಾರೆ.
ಈ ಮಧ್ಯೆ ಶಿರಾಳಕೊಪ್ಪದ ಪದವಿಪೂರ್ವ ಕಾಲೇಜು ಮುಂದೆ ಹಿಜಾಬ್ ಪರ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ. ಸುಮಾರು 58 ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸದಂತೆ ಅಮಾನತುಗೊಳಿಸಲಾಗಿದ್ದು, ಪ್ರಕರಣವನ್ನು ಎದುರಿಸಬೇಕಾಗಿದೆ.

''ಕಾಲೇಜಿಗೆ ಆಗಮಿಸಿ ಘೋಷಣೆಗಳನ್ನು ಕೂಗಿ ಹಿಜಾಬ್ ಧರಿಸುವ ಹಕ್ಕು ನೀಡುವಂತೆ ಒತ್ತಾಯಿಸಿವರಿಗೆ ಕಾಲೇಜು ಗೇಟಿನಿಂದ ಒಳಗೆ ಬಿಡುತ್ತಿಲ್ಲ, ನಾವು ಇಲ್ಲಿಗೆ ಬಂದಿದ್ದೇವೆ ಆದರೆ ಪ್ರಾಂಶುಪಾಲರು ನಮಗೆ ಎಲ್ಲರನ್ನು ಅಮಾನತುಗೊಳಿಸಿದ್ದಾರೆ ಮತ್ತು ಕಾಲೇಜಿಗೆ ಬರುವ ಅಗತ್ಯವಿಲ್ಲ ಎಂದು ಹೇಳಿದರು, ಪೊಲೀಸರು ಸಹ ಕಾಲೇಜಿಗೆ ಬರಬೇಡಿ ಎಂದು ಹೇಳಿದರು ಆದರೆ ನಾವು ಇಲ್ಲಿಗೆ ಬಂದಿದ್ದೇವೆ. ಇಂದು ಯಾರೂ ನಮ್ಮೊಂದಿಗೆ ಮಾತನಾಡಿಲ್ಲ,'' ಎಂದು ವಿದ್ಯಾರ್ಥಿನರು ದೂರಿದ್ದಾರೆ.
ತುಮಕೂರಿನಲ್ಲಿ 10 ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್
ಫೆಬ್ರವರಿ 17ರಂದು ತುಮಕೂರಿನ ಬಾಲಕಿಯರ ಎಂಪ್ರೆಸ್ ಸರ್ಕಾರಿ ಪಿಯು ಕಾಲೇಜಿನ ಹೊರಗೆ ಹಿಜಾಬ್ ನಿಯಮವನ್ನು ವಿರೋಧಿಸಿದ ಮತ್ತು ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ಹೊರಡಿಸಲಾದ ನಿಷೇಧಾಜ್ಞೆ ಉಲ್ಲಂಘಿಸಿದ ಕನಿಷ್ಠ 10 ವಿದ್ಯಾರ್ಥಿನಿಯರ ವಿರುದ್ಧ ಐಪಿಸಿ ಸೆಕ್ಷನ್ 143, 145, 149 ಮತ್ತು 188 ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ
ಸರ್ಕಾರಿ ಆದೇಶ ಮತ್ತು ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶದ ಹೊರತಾಗಿಯೂ ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್ ಅಥವಾ ಕೇಸರಿ ಸ್ಕಾರ್ಫ್‌ಗಳನ್ನು ಧರಿಸುವುದನ್ನು ನಿರ್ಬಂಧಿಸಿದ್ದರೂ, ಹುಡುಗಿಯರು ತಲೆ ಸ್ಕಾರ್ಫ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಎಸ್‌ಜೆವಿಪಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಹುಡುಗಿಯರಿಗೆ ಪ್ರವೇಶ ನಿರಾಕರಿಸಲಾಗಿದೆ. ವಿದ್ಯಾರ್ಥಿಗಳು ಸ್ಕಾರ್ಫ್ ಇಲ್ಲದೆ ಒಳಗೆ ಹೋಗಲು ನಿರಾಕರಿಸಿದ್ದಾರೆ. ಇದು ಶಿಕ್ಷಣದಷ್ಟೇ ಮುಖ್ಯ ಮತ್ತು ಅವರು ತಮ್ಮ ಹಕ್ಕನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಅನಿರ್ದಿಷ್ಟ ಅವಧಿಗೆ ರಜೆ
ಬೆಳಗಾವಿ ಜಿಲ್ಲೆಯ ವಿಜಯ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಯಿಂದಾಗಿ ಸಂಸ್ಥೆಗೆ ಅನಿರ್ದಿಷ್ಟ ಅವಧಿಗೆ ರಜೆ ಘೋಷಿಸಲಾಗಿದೆ. ತಲೆಗೆ ಮುಸುಕು ಹಾಕದೆ ನಾವು ಕುಳಿತುಕೊಳ್ಳುವುದಿಲ್ಲ, ನಮ್ಮ ಶಿಕ್ಷಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾಲೇಜು ಅರಿತುಕೊಳ್ಳಲಿ, ಪ್ರಾಂಶುಪಾಲರು ನಮ್ಮ ಮಾತು ಕೇಳುತ್ತಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ, ವಿವಾದ ಭುಗಿಲೆದ್ದ ದಿನದಿಂದ ಪ್ರತಿಭಟನೆಗೆ ಸಾಕ್ಷಿಯಾಗುತ್ತಿರುವ ಸರಳಾದೇವಿ ಕಾಲೇಜಿನೊಳಗೆ ಬಾಲಕಿಯರ ಗುಂಪಿಗೆ ಪ್ರವೇಶ ನೀಡಲಿಲ್ಲ ಮತ್ತು ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಬಟ್ಟೆಗಳನ್ನು ಯಾರೂ ಧರಿಸಬಾರದು ಎಂದು ಸರ್ಕಾರ ಆದೇಶಿಸಿತ್ತು.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರ್ಕಾರಿ ಕಾಲೇಜಿನಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಕಾಲೇಜಿಗೆ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲ. ರಾಮನಗರ ಜಿಲ್ಲೆಯ ಕುದೂರು ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳು ತರಗತಿಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.












Click it and Unblock the Notifications