Toxic: ಟಾಕ್ಸಿಕ್ ಸಿನಿಮಾದಲ್ಲಿ ತನ್ನ ಬೋಲ್ಡ್ ದೃಶ್ಯ ತೆಗೆಯುವಂತೆ ಬೇಡಿಕೆ: ಇದು 'ಅಪ್ಪಟ ಸುಳ್ಳು' ಎಂದ ಕಿಯಾರಾ ಅಡ್ವಾಣಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಅನೌನ್ಸ್ ಆದ ದಿನದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಇತ್ತೀಚೆಗೆ ಈ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಅವರು ಸಿನಿಮಾದ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಚಿತ್ರದ ಬೋಲ್ಡ್ ದೃಶ್ಯಗಳನ್ನು ತೆಗೆದುಹಾಕುವಂತೆ ನಿರ್ದೇಶಕರಿಗೆ ಮನವಿ ಮಾಡಿರುವುದಾಗಿ ವದಂತಿ ಹಬ್ಬಿತ್ತು. ಈ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಸ್ಪಷ್ಟನೆ ನೀಡಿದ್ದಾರೆ.
ಬೋಲ್ಡ್ ದೃಶ್ಯ ಬೇಡ ಅಂದಿದ್ರಾ ಕಿಯಾರಾ?
ಕಿಯಾರಾ ಅವರು ಟಾಕ್ಸಿಕ್ ಚಿತ್ರದ ಅಂತಿಮ ಎಡಿಟಿಂಗ್ ನೋಡಿದ ನಂತರ, ಯಶ್ ಅವರೊಂದಿಗಿನ ಕೆಲವು ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಕರಿಗೆ ಮತ್ತು ಯಶ್ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಕೆಲವು ಬೋಲ್ಡ್ ದೃಶ್ಯಗಳನ್ನು ಚಿತ್ರಿಸಲು ಅವರು ಒಪ್ಪಿಕೊಂಡಿದ್ದರು. ಆದರೆ ಅಂತಿಮ ಔಟ್‌ಪುಟ್ ನೋಡಿದ ನಂತರ ಅವರು ತಮ್ಮ ನಿರ್ಧಾರ ಬದಲಿಸಿ ಈ ದೃಶ್ಯಗಳನ್ನು ತೆಗೆದುಹಾಕಲು ಕೇಳಿಕೊಂಡಿದ್ದರು ಎಂದು ವರದಿಯಾಗಿತ್ತು.

ಈ ವದಂತಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಿಯಾರಾ ಅಡ್ವಾಣಿ, ಈ ಕುರಿತಾದ ವರದಿಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು "Absolute nonsense" (ಅಪ್ಪಟ ಸುಳ್ಳು) ಎಂದು ಬರೆಯುವ ಮೂಲಕ ಈ ಎಲ್ಲ ಸುದ್ದಿಗಳು ಕೇವಲ ವದಂತಿಗಳು ಮತ್ತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಟಾಕ್ಸಿಕ್' ಸಿನಿಮಾವು ಪ್ರಸ್ತುತ ರಿಲೀಸ್‌ಗೆ ರೆಡಿಯಾಗಿದ್ದು, ಬಿಡುಗಡೆಯ ದಿನಾಂಕವು ಮುಂದೂಡಲ್ಪಟ್ಟ ಕಾರಣ ಹೊಸ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿರುವ ಈ ಚಿತ್ರವು ಯಶ್ ಅವರ ಪ್ಯಾನ್ ಇಂಡಿಯಾ ಸ್ಟಾರ್‌ಡಮ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಸ್ಪಷ್ಟನೆಯ ಮೂಲಕ ಕಿಯಾರಾ ಅವರು ಸಿನಿಮಾದ ಕಥೆ ಅಥವಾ ದೃಶ್ಯಗಳ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂಬುದು ಅಧಿಕೃತವಾಗಿ ತಿಳಿದುಬಂದಿದೆ.
ವದಂತಿ ಹಬ್ಬಿದ್ದೇಕೆ?
ಕಿಯಾರಾ ಅವರು ತಾಯಿಯಾದ ನಂತರ ತಮ್ಮ ಸ್ಕ್ರೀನ್ ಇಮೇಜ್ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ ಮತ್ತು ಅಂತಿಮ ಫೂಟೇಜ್ ನೋಡಿದ ನಂತರ ಕೆಲವು ರೋಮ್ಯಾಂಟಿಕ್ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಈ ಹಿಂದೆ ವದಂತಿಗಳು ಹರಡಿದ್ದವು. ಈಗ ಈ ಬಗ್ಗೆ ಸ್ವತಃ ಕಿಯಾರಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರವು ಆಕ್ಷನ್ ಗ್ಯಾಂಗ್‌ಸ್ಟರ್ ಕಥೆಯಿಂದ ಕೂಡಿದ್ದು, ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಯಾರಾ ಅಡ್ವಾಣಿ 'ನಾದಿಯಾ' ಎಂಬ ಪಾತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬೃಹತ್ ಬಜೆಟ್‌ನ ಕನ್ನಡ-ಇಂಗ್ಲಿಷ್ ಚಿತ್ರ ನಿರ್ಮಾಣವಾಗುತ್ತಿದೆ.
ಚಿತ್ರದ ಬಿಡುಗಡೆಯು ಹಲವು ಬಾರಿ ಮುಂದೂಡಲ್ಪಟ್ಟಿದೆ. ಈ ಹಿಂದೆ ಜೂನ್ 4ಕ್ಕೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಸದ್ಯಕ್ಕೆ ಯಾವುದೇ ಅಧಿಕೃತ ದಿನಾಂಕವನ್ನು ಘೋಷಿಸಲಾಗಿಲ್ಲ. ಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.













Click it and Unblock the Notifications