ಮಂಡ್ಯ: ಮಕ್ಕಳ ಹೊಟ್ಟೆಗೆ ವಿಷಪ್ರಾಶನ? ಮನ್‌ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ 6 ಅಧಿಕಾರಿಗಳ ವಿರುದ್ಧ ಬಿತ್ತು FIR
ಮಂಡ್ಯದ ಮನ್‌ಮುಲ್ ಅಥವಾ ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇದೀಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿದೆ. ಶಾಲಾ ಮಕ್ಕಳಿಗೆ ನೀಡಲಾಗುವ ಹಾಲಿನ ಪುಡಿಯಲ್ಲಿ ಕಲಬೆರಕೆ ಮಾಡಿರುವ ಗಂಭೀರ ಆರೋಪದ ಮೇಲೆ ಆರು ಮಂದಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಳೆಯ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಜೊತೆ ಚೆಲ್ಲಾಟವಾಡಿರುವ ಈ ಪ್ರಕರಣ ಇದೀಗ ಜಿಲ್ಲೆಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

ಕ್ಷೀರಭಾಗ್ಯ ಯೋಜನೆಯಡಿ ಕಳಪೆ ಹಾಲಿನ ಪುಡಿ ವಿತರಣೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸುವ ನಿಟ್ಟಿನಲ್ಲಿ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ. ಆದರೆ, 2016-17ನೇ ಸಾಲಿನಿಂದ ಹಿಡಿದು ಪ್ರಸಕ್ತ 2026-27ನೇ ಸಾಲಿನವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾದ ಹಾಲಿನ ಪುಡಿಯಲ್ಲಿ ಭಾರಿ ಕಲಬೆರಕೆ ನಡೆದಿದೆ ಎಂಬುದು ತನಿಖೆಯಿಂದ ಬಯಲಾಗಿದೆ.
ಈ ಅವ್ಯವಹಾರದ ಬಗ್ಗೆ ಲೋಕಾಯುಕ್ತಕ್ಕೆ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ರಘು ಅವರು ಅಧಿಕೃತವಾಗಿ ಮಾಹಿತಿ ಒದಗಿಸಿದ್ದಾರೆ.
ಲೋಕಾಯುಕ್ತ ತನಿಖೆ: 6 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಲೋಕಾಯುಕ್ತ ಪೊಲೀಸರ ತಂಡವು ಮನ್‌ಮುಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಾಲಿನ ಪುಡಿ ಕಲಬೆರಕೆ ಆಗಿರುವುದು ದೃಢಪಟ್ಟಿತ್ತು. ಈ ಬಗ್ಗೆ ಅಧಿಕಾರಿಗಳು ಉಪ ಲೋಕಾಯುಕ್ತರಿಗೆ ವಿಸ್ತೃತ ವರದಿಯನ್ನ ಸಲ್ಲಿಸಿದ್ದರು. ವರದಿಯ ಆಧಾರದ ಮೇಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಆದೇಶದ ಮೇರೆಗೆ ಇದೀಗ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿಗಳಾದ ಮನ್‌ಮುಲ್‌ನ ಗುಣಮಟ್ಟ ಭರವಸೆ ವಿಭಾಗದ ವ್ಯವಸ್ಥಾಪಕ ಟಿ. ರಾಮಕೃಷ್ಣ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶ್ರೀಕಾಂತ್, ಎಫ್‌ಜಿಎಸ್ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ಜಾಧವ್, ಜಿಲ್ಲಾ ಪದಾಂಗಿತ ಅಧಿಕಾರಿ ಶಶಿಧರ್, ಆಹಾರ ಸುರಕ್ಷಾ ಅಧಿಕಾರಿ ಶಿವಕುಮಾರ್ ಹಾಗೂ ಮದ್ದೂರು ಪೊಲೀಸ್ ನಿರೀಕ್ಷಕ ನವೀನ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಇದಲ್ಲದೆ, ಐದು ಮಂದಿ ಅಧಿಕಾರಿಗಳಿಗೆ ಅಕ್ಟೋಬರ್ 27 ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ವಾಹನ ಟೆಂಡರ್ ಪ್ರಕ್ರಿಯೆಯಲ್ಲೂ ಭಾರಿ ಅಕ್ರಮ
ಹಾಲಿನ ಪುಡಿ ಕಲಬೆರಕೆ ಮಾತ್ರವಲ್ಲದೆ, ವಾಹನಗಳ ಟೆಂಡರ್ ಪ್ರಕ್ರಿಯೆಯಲ್ಲೂ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮತ್ತು ಬಿಎಂಸಿಗಳಿಂದ ಹಾಲು ಸಾಗಿಸುವ ಟ್ಯಾಂಕರ್‌ಗಳು, ಮಾರ್ಕೆಟಿಂಗ್ ವಾಹನಗಳು ಸೇರಿದಂತೆ ಇತರೆ ವಾಹನಗಳ ಟೆಂಡರ್ ಪ್ರಕ್ರಿಯೆಯಲ್ಲಿ ಕೆಎಂಎಫ್ ನಿಗದಿಪಡಿಸಿದ್ದ ಕನಿಷ್ಠ ಬೆಲೆಗಿಂತ ಅತಿ ಹೆಚ್ಚಿನ ದರವನ್ನು ನಮೂದಿಸಿದವರಿಗೆ ಟೆಂಡರ್ ನೀಡಲಾಗಿದೆ.
ಯಾವುದೇ ರೀತಿಯ ನೆಗೋಷಿಯೇಷನ್ (ಚೌಕಾಸಿ) ನಡೆಸದೆ, ಕೇವಲ ಸ್ವಜನ ಪಕ್ಷಪಾತದ ಉದ್ದೇಶದಿಂದ ಹೆಚ್ಚಿನ ದರಕ್ಕೆ ಟೆಂಡರ್ ಅಂತಿಮಗೊಳಿಸಿ ಸಂಸ್ಥೆಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ಈ ಭಾರಿ ಹಗರಣದ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಮಂಡ್ಯ ಜಿಲ್ಲಾಧಿಕಾರಿ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗಿದೆ. ಈ ನ್ಯೂನತೆಗಳು ಹಾಗೂ ಅಕ್ರಮಗಳ ಕುರಿತು ಪೂರಕ ದಾಖಲಾತಿಗಳೊಂದಿಗೆ ಸಮಗ್ರ ವರದಿಯನ್ನು ಶೀಘ್ರವೇ ಲೋಕಾಯುಕ್ತಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ.


Click it and Unblock the Notifications
