ಮಂಗಳೂರು ಚಲೋ : ಸಿದ್ದರಾಮಯ್ಯ ಹೇಳುವುದೇನು?
ಬೆಂಗಳೂರು, ಸೆಪ್ಟೆಂಬರ್ 04 : 'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಥಾ ನಡೆಸಲು ಅವಕಾಶವಿದೆ. ಕಾನೂನು ಚೌಕಟ್ಟು ಮೀರಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಸಿದ್ದರಾಮಯ್ಯ ಮಂಗಳೂರು ಚಲೋ ಬಗ್ಗೆ ಪ್ರತಿಕ್ರಿಯೆ ನೀಡಿದರು. 'ಬಿಜೆಪಿ ಮಂಗಳೂರು ಚಲೋ ಮೂಲಕ ಮತ್ತೊಮ್ಮೆ ಕರಾವಳಿಯಲ್ಲಿ ಗಲಭೆ ಸೃಷ್ಟಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನದಲ್ಲಿದೆ' ಎಂದು ಆರೋಪಿಸಿದರು.

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಜಾಥಾ ನಡೆಸಲು ಅವಕಾಶವಿದೆ. ಇದು ಕಾನೂನು ಚೌಕಟ್ಟು ಮೀರದಂತೆ ಇರಬೇಕು. ಕಾನೂನು ಮೀರಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
'ಬೈಕ್ ಜಾಥಾ ಕುರಿತು ಇಂದು ಪೊಲೀಸರ ಜೊತೆ ವಿಶೇಷ ಸಭೆ ನಡೆಸಲಿದ್ದೇನೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ' ಎಂದರು.
ಖಾದರ್ ಕಿಡಿ : ಬಿಜೆಪಿ ಯುವ ಮೋರ್ಚಾದ ಮಂಗಳೂರು ಚಲೋ ಬಗ್ಗೆ ಆಹಾರ ಸಚಿವ ಯು.ಟಿ.ಖಾದರ್ ಕಿಡಿ ಕಾರಿದರು. 'ಈ ಜಾಥಾದ ಉದ್ದೇಶ ಏನೆಂದು? ಮೊದಲು ಬಿಜೆಪಿ ಸ್ಪಷ್ಟಪಡಿಸಲಿ. ಕರಾವಳಿಯಲ್ಲಿ ಶಾಂತಿ ನೆಲೆಸಿದೆ. ಇದನ್ನು ಕೆಡಿಸಲು ಬಿಜೆಪಿ ಮುಂದಾಗಿದೆ. ಮತ್ತಷ್ಟು ಯುವಕರನ್ನು ಬಲಿಕೊಡಲು ಪಕ್ಷ ಮುಂದಾಗಿದೆ' ಎಂದು ಅವರು ದೂರಿದರು.
ಜಾಥಾ ನಡೆಯಲಿದೆ : 'ಸರ್ಕಾರದ ವಿರೋಧವಿದ್ದರೂ ಮಂಗಳೂರು ಚಲೋ ನಡೆಯಲಿದೆ. ವಿವಿಧ ವಿಚಾರ ಮುಂದಿಟ್ಟುಕೊಂಡು ಜಾಥಾ ನಡೆಸಲಾಗುತ್ತಿದೆ. ಜಾಥಾ ತಡೆಯುವ ಉದ್ದೇಶ ಪ್ರಜಾತಂತ್ರ ವಿರೋಧಿ ಕ್ರಮ' ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.












Click it and Unblock the Notifications