ಸಂಸದೆ ರಮ್ಯಾ ರಗಳೆ: ಕೆಪಿಸಿಸಿ ಅಧ್ಯಕ್ಷರಿಗೆ ದೂರು
ಬೆಂಗಳೂರು, ನ. 7: ಆಗಾಗ ಒಂದಲ್ಲಾ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮಂಡ್ಯ ಸಂಸದೆ ಕಮ್ ನಟಿ ರಮ್ಯಾ ರಗಳೆ ಇನ್ನೂ ಮುಗಿದಿಲ್ಲ.
ಸಾರ್ವಜನಿಕ ಜೀವನದಲ್ಲಿರುವಾಗ ಒಂದಷ್ಟು ಸಂಯಮ ಮೆರೆಯಬೇಕು ಎಂಬುದನ್ನು ಮರೆತಂತಿರುವ ರಮ್ಯಾ ಮೇಡಂ ಚಿತ್ರೋದ್ಯಮದಲ್ಲಿ 'ನೀರ್ ದೋಸೆ' ಗೊಡವೆಯಿಂದ ಹೊರಬಂದಿಲ್ಲ. ಈ ಮಧ್ಯೆ, ಸ್ವಕ್ಷೇತ್ರದಲ್ಲಿ ರಾಜಕೀಯವಾಗಿಯೂ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಸಿನಿಮಾ ಡೈಲಾಗ್ ಹೊಡೆಯುವಂತೆ ಎದುರಿಗೆ ಸಿಕ್ಕಿದ ಹಿರಿಯ ಅಧಿಕಾರಿಗೆ stupid ಎಂದು ಗದರಿಕೊಂಡಿದ್ದ ರಮ್ಯಾ, ಅದೇ ವೇಳೆ ತಮ್ಮ ಪಕ್ಷದ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಗ್ರಾಮ ಭಾರತವನ್ನು ಕಾಣಲು ಹೊರಟಿದ್ದ ಸಂಸದೆ ದಿವ್ಯಸ್ಪಂದನ ಅವರು ತಮ್ಮ ಆತ್ಮೀಯ ಗೆಳತಿಯೊಬ್ಬರ ಪತಿ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಾರೆಂದು ಅವರನ್ನು ಅಭಿನಂದಿಸಲು ಅವರ ಮನೆಗೆ ತೆರಳಿದ್ದರು. ಆ ವೇಳೆ, ಅಲ್ಲಿ ಕಾಣಿಸಿಕೊಂಡ ತಮ್ಮ ಪಕ್ಷದ ಕಾರ್ಯಕರ್ತರನ್ನು ಮೇಡಂ ಕ್ಯಾರೇ ಎಂದಿಲ್ಲ. ಇದು ನನ್ನ ಪರ್ಸನಲ್ ಭೇಟಿ. ನಿಮ್ಮನ್ನು ನಾನ್ಯಾಕೆ ಮಾತನಾಡಿಸಬೇಕು ಎಂದು ಜೋರು ಮಾಡಿದ್ದಾರೆ.
ಇದರಿಂದ ಕೆರಳಿದ ಕಾರ್ಯಕರ್ತರು ಇದೆಲ್ಲಾ ಸರಿಯಾಗಾಕಿಲ್ಲ. ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಎಂದು ಹಿರಿಯರು ಹೇಳಿದ್ದಾರೆ. ಆದರೆ ಮೇಡಂ ನೀವೂ ಬೇಡ, ನಿಮ್ಮ ಸಹವಾಸವೂ ಎಂದು ಗುಂಪಿನಿಂದ ವಿಮುಖರಾದವರೇ ಏನಿದ್ದರೂ ಮಂಡ್ಯದಲ್ಲಿರುವ ನನ್ನ ಕಚೇರಿಗೆ ಬಂದು ಕಾಣಿ ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದು ಕಾರ್ಯಕರ್ತರು ಅಲವತ್ತುಕೊಂಡಿದ್ದಾರೆ.
ಮತ್ತು ಇದನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ತಮ್ಮನ್ನು ರಮ್ಯಾ ಅಗೌರವದಿಂದ ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿದ್ದ ಬಿಜೆಪಿ ನಾಯಕಿ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ರಮ್ಯಾ ಅವರ ಈ ನಡುವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಬುಧವಾರ ಡಾ. ಪರಮೇಶ್ವರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸಾಹೇಬರು ಗರಂ ಆಗಿದ್ದಾರೆ. 'ಸಾರ್ವಜನಿಕ ಸೇವೆಯಲ್ಲಿರುವಾಗ ಹೀಗೆಲ್ಲಾ ನಡೆದುಕೊಳ್ಳಬಾರದು. ಅವರಿನ್ನೂ ಹೊಸಬರು. ಅವರಿಗೆ ಕರೆದು ಬುದ್ಧಿಮಾತು ಹೇಳುತ್ತೇನೆ' ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.












Click it and Unblock the Notifications