ಮಂಡ್ಯದ ರಮ್ಯಾ ಎಲ್ಲಿ ದಣಿವಾರಿಸಿಕೊಳ್ತಿದ್ದಾರೆ ಗೊತ್ತಾ?
ಮಂಡ್ಯ, ಮೇ 5: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಚುನಾವಣಾ ಪ್ರಯಾಸದ ದಣಿವಾರಿಸಿಕೊಳ್ಳಲು ಲಂಡನ್ ಪ್ರವಾಸ ಮಾಡಿದ್ದಾರೆ. ಮಂಡ್ಯದ ಚುನಾವಣಾ ಕಾವಿನಲ್ಲಿ ಬೆಂದಿದ್ದ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಮಂಡ್ಯದಲ್ಲಿ ಮುಂದುವರಿದ ಬಿಸಿಲ ಝಳಕ್ಕೆ ಬೆದರಿ ಸೀದಾ ಲಂಡನ್ನಿಗೆ ಹಾರಿದ್ದಾರೆ.
ಅಂದಹಾಗೆ ಲಂಡನ್ ಈಗ ಶೈತ್ಯಾಗಾರವಾಗಿದೆ. ಅಂದರೆ ಅಲ್ಲಿ ಟೆಂಪರೇಚರ್ 5-6 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಅದೇ ಮಂಡ್ಯ ತಾಪಮಾನ 35 ಡಿಗ್ರಿಯಷ್ಟಿದೆ.
ಕಳೆದ ತಿಂಗಳೇ ರಮ್ಯಾ ಮಂಡ್ಯಾ ಬಿಟ್ಟಿದ್ದಾರೆ. 'ವಿಶ್ರಾಂತಿಯಲ್ಲಿದ್ದೇನೆ; ಡೋಂಟ್ ಡಿಸ್ಟರ್ಬ್!' ಎಂದು ಒಕ್ಕಣೆ ಸೇರಿಸಿ ಲಂಡನ್ ತಲುಪಿದ್ದಾರೆ. ಇತ್ತ ಮಂಡ್ಯ ಜಿಲ್ಲೆಯ ಜನ ಮಾತ್ರ 'ಯಾರು ಬಂದರೂ ಯಾರು ಬಿಟ್ಟರೂ ನಮ್ಮ ಬವಣೆ ತಪ್ಪಿದ್ದಲ್ಲ' ಎಂದು ಬೇಸಿಗೆಯಲ್ಲಿ ಎಂದಿನಂತೆ ತಮ್ಮ ಜೀವನ ನಡೆಸಿದ್ದಾರೆ.

ಫೇಸ್ ಬುಕ್, ಟ್ವಿಟ್ಟರಿನಲ್ಲಿ ರಾರಾಜಿಸುತ್ತಿದ್ದ ರಮ್ಯಾ
ಗಮನಾರ್ಹವೆಂದರೆ ಚುನಾವಣೆ ವೇಳೆ ತಾವು ಆಡಿದ ಕ್ರಿಕೆಟ್ ಆಟದಿಂದ ಹಿಡಿದು ಪ್ರತಿಯೊಂದನ್ನೂ ಫೇಸ್ ಬುಕ್, ಟ್ವಿಟ್ಟಟ್ ಮೂಲಕ ತಮ್ಮ ರಾಜಕೀಯ ಏಳುಬೀಳುಗಳನ್ನು ಮಹಾಜನತೆಗೆ ತಲುಪಿಸುತ್ತಿದ್ದ ರಮ್ಯಾಗೆ ಲಂಡನ್ ತಲುಪುತ್ತಿದ್ದಂತೆ ಮಂಡ್ಯ ಜನತೆ ಮರೆತುಹೋದಂತಿದೆ. ಸೌಜನ್ಯಕ್ಕಾದ್ರೂ ಒಂದು ಫೋಟೋ/ಮಾಹಿತಿಯನ್ನು ನೀಡಿಲ್ಲ. ಏಪ್ರಿಲ್ 27ರ ನಂತರ ಅವರ ಟ್ವಿಟ್ಟರ್ ಖಾತೆ ಬ್ಲಾಂಕ್ ಆಗಿದೆ.

'ನಮ್ಮ ರಮ್ಯಾಗೆ ದೀರ್ಘ ವಿಶ್ರಾಂತಿ ಅತ್ಯಗತ್ಯವಾಗಿತ್ತು'
ಸಂಸದೆ ರಮ್ಯಾ ಎಲ್ಲಾ ಸಂಪರ್ಕಗಳನ್ನು ಕಡಿದು ಹಾಕಿ ಲಂಡನ್ನಿನಲ್ಲಿ ದಣಿವಾರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರು (ರಮ್ಯಾ) ಪ್ರಚಾರದ ವೇಳೆಯೇ ಸಾಕಷ್ಟು ಸುಸ್ತಾಗಿದ್ದರು. ದೀರ್ಘ ಕಾಲದ ವಿಶ್ರಾಂತಿ ಅಗತ್ಯವಾಗಿ ಬೇಕಿತ್ತು. ಹಾಗಾಗಿ ಲಂಡನ್ನಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಹುಲ್ ಕರೆಗೆ ಓಗೊಟ್ಟು ಉತ್ತರ ಭಾರತಕ್ಕೆ ಹೋಗಿಲ್ಲ
ರಾಹುಲ್ ಗಾಂಧಿ ಅವರು ನನ್ನನ್ನು ಉತ್ತರ ಭಾರತದ ಚುನಾವಣಾ ಪ್ರಚಾರಕ್ಕೆ ಕರೆದಿದ್ದಾರೆ. ಸ್ಟಾರ್ ಕ್ಯಾಂಪೇನರ್ ಆಗಿ ಹೋಗುತ್ತಿದ್ದೇನೆ ಎಂದು ಚುನಾವಣೆ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ರಮ್ಯಾ ಅದ್ಯಾವ ಮಾಯದಲ್ಲಿ ಲಂಡನ್ನಿಗೆ ಹೋದರೋ ಮಂಡ್ಯ ಜನಕ್ಕೆ ಗೊತ್ತಾಗಿಲ್ಲ.

ರಮ್ಯಾ ಲಂಡನ್ನಿನಲ್ಲಿರುವುದಕ್ಕೆ ಇಲ್ಲೊಂದು ಕುರುಹು
ಅಂದಹಾಗೆ ಕನ್ನಡದ ಮೋಹಕ ನಟಿ ರಮ್ಯಾ ಅವರು ಲಂಡನ್ ತಲುಪಿರುವುದಕ್ಕೆ ಟ್ವಿಟ್ಟರಿನಲ್ಲಿ ಇದೊಂದೇ ಕುರುಹು ಬಿಟ್ಟಿರುವುದು.

ಅಂಬರೀಷ್ ಊಟಿಯಲ್ಲಿ ಚಳಿ ಚಳಿ ತಾಳೆನು...
ಇನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರು ಪಕ್ಕದ ಮೈಸೂರು ಜಿಲ್ಲೆಯ ಮೂಲಕ ಬಂಡಿಪುರ ಮಾರ್ಗವಾಗಿ ಊಟಿ ತಲುಪಿಕೊಂಡಿದ್ದಾರೆ. ಅಲ್ಲಿಗೆ ವಿಶ್ರಾಂತಿಗೆ ತೆರಳಿದ್ದಾರೆ. ಪತ್ನಿ ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲಿ ಬೆಂಡಾಗಿದ್ದ ಅಂಬರೀಷ್ ಆನಂತರ ಒಂದಷ್ಟು ಚುನಾವಣಾ ಪ್ರಚಾರದಲ್ಲೂ ಕಾಣಿಸಿಕೊಂಡಿದ್ದರು. ಅದಾದನಂತರ ಆಪ್ತಮಿತ್ರ ರಜನಿಕಾಂತ್ ಅವರ ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದವರೇ ವಿಶ್ರಾಂತಿ ಬಯಸಿ ಊಟಿ ತಲುಪಿಕೊಂಡಿದ್ದಾರೆ.












Click it and Unblock the Notifications