ಕೊನೆಗೂ ಈಡೇರದ ಉಮೇಶ್ ಕತ್ತಿಯ ಇನ್ನೊಂದು ಬಯಕೆ!
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತಮ್ಮದೇ ವಿಶೇಷ ಛಾಪನ್ನು ಹೊಂದಿದ್ದ, ಬೆಳಗಾವಿಯ ಪ್ರಭಾವಿ ಲಿಂಗಾಯತ ಸಮುದಾಯದ ಮುಖಂಡ ಉಮೇಶ್ ಕತ್ತಿಯವರು, ಸೆಪ್ಟಂಬರ ಆರರ ತಡರಾತ್ರಿ ನಿಧನರಾಗಿದ್ದಾರೆ.
ತಂದೆ ವಿಶ್ವನಾಥ ಕತ್ತಿಯವರ ಅಕಾಲಿಕ ನಿಧನದ ನಂತರ ತಮ್ಮ 25ನೇ ವಯಸ್ಸಿನಲ್ಲಿ ಶಾಸಕರಾಗಿ ಆಯ್ಕೆಯಾದ ಉಮೇಶ್ ಕತ್ತಿ, ಆನಂತರ ಹಿಂದಿರುಗಿ ನೋಡಲೇ ಇಲ್ಲ. ಮೊದಲು ಜನತಾ ಪರಿವಾರ ನಂತರ ಬಿಜೆಪಿಯಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು.
ತಮ್ಮ ವಿವಾದೀತ ಹೇಳಿಕೆಯಿಂದಲೇ ಹೆಚ್ಚು ಮುನ್ನಲೆಗೆ ಬರುತ್ತಿದ್ದ ಉಮೇಶ್ ಕತ್ತಿ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಬೇಕೆಂದು ಧ್ವನಿ ಎತ್ತಿದವರು. ಅವರ ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು.
2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದ ಉಮೇಶ್ ಕತ್ತಿ ಅದನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಉತ್ತರ ಕರ್ನಾಟಕದ ಅಭಿವೃದ್ದಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಎನ್ನುವ ವಾದವನ್ನು ಆವಾಗಾವಾಗ ಮಂಡಿಸುತ್ತಿದ್ದರು. ಅವರ ಈಡೇರದ ಇನ್ನೊಂದು ಬಯಕೆ.

ಆಹಾರ ಮತ್ತು ಅರಣ್ಯ ಖಾತೆಯ ಸಚಿವ ಉಮೇಶ್ ಕತ್ತಿ
ಕಳೆದ ತಿಂಗಳು ಮಂಡ್ಯದಲ್ಲಿ ಮಾತನಾಡುತ್ತಿದ್ದ ಆಹಾರ ಮತ್ತು ಅರಣ್ಯ ಖಾತೆಯ ಸಚಿವರೂ ಆಗಿದ್ದ ಉಮೇಶ್ ಕತ್ತಿ, "ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೇವಲ ಊಹಾಪೋಹ ಅಷ್ಟೇ. ಯಡಿಯೂರಪ್ಪನವರ ನಂತರ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆ ವೇಳೆ ನಾನು ಸಹ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ" ಎಂದು ಉಮೇಶ್ ಕತ್ತಿ ಹೇಳಿದ್ದರು.

ಯಡಿಯೂರಪ್ಪ ಬದಲಾವಣೆಗಾಗಿ ರಾಜ್ಯ ಬಿಜೆಪಿಯಲ್ಲಿ ಗುಸುಗುಸು
ಜುಲೈ ತಿಂಗಳಲ್ಲಿ (2021) ಬೆಳಗಾವಿಯಲ್ಲಿ ಮಾತನಾಡುತ್ತಿದ್ದ ಉಮೇಶ್ ಕತ್ತಿಯವರು ಮತ್ತೆ ತಮ್ಮ ಸಿಎಂ ಸ್ಥಾನದ ಆಕಾಂಕ್ಷೆಯನ್ನು ಹೊರಗೆಡವಿದ್ದರು. "ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗಾಗಿ ರಾಜ್ಯ ಬಿಜೆಪಿಯಲ್ಲಿ ಗುಸುಗುಸು ನಡೆಯುತ್ತಿರುವಾಗಲೇ, ಸಿಎಂ ಬದಲಾವಣೆ ಮಾಡಿದರೆ ಮುಂದಿನ ಅಭ್ಯರ್ಥಿ ನಾನೇ" ಎನ್ನುವ ಹೇಳಿಕೆಯನ್ನು ಉಮೇಶ್ ಕತ್ತಿ ನೀಡಿದ್ದರು. ಯಡಿಯೂರಪ್ಪ ಬದಲಾವಣೆ ವಿಚಾರ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿತ್ತು. ಹಾಗಾಗಿ, ಕತ್ತಿಯವರ ಅಂದಿನ ಹೇಳಿಕೆ, ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು.

ಉಮೇಶ್ ಕತ್ತಿ ಸಾಕಷ್ಟು ಬಾರಿ ಪಕ್ಷಕ್ಕೆ ಮುಜುಗರವನ್ನೂ ತಂದಿದ್ದರು
ಪ್ರತ್ಯೇಕ ಕರ್ನಾಟಕ ಮತ್ತು ಮುಖ್ಯಮಂತ್ರಿ ಆಕಾಂಕ್ಷೆಯ ಬಗ್ಗೆ ಹಲವು ಬಾರಿ ಹೇಳಿಕೆಯನ್ನು ನೀಡಿದ್ದ ಉಮೇಶ್ ಕತ್ತಿ ಸಾಕಷ್ಟು ಬಾರಿ ಪಕ್ಷಕ್ಕೆ ಮುಜುಗರವನ್ನೂ ತಂದಿದ್ದರು. ನಾನು ಕೂಡಾ ಮುಖ್ಯಮಂತ್ರಿ ಹುದ್ದೆಗೆ ಸಮರ್ಥ, ನಾನು ಕೂಡಾ ರಾಜಕಾರಣಿ ಸನ್ಯಾಸಿಯಲ್ಲ. ಸಿಎಂ ಸ್ಥಾನ ಬೇಕೆಂದು ಬಯಸುವುದರಲ್ಲಿ ತಪ್ಪೇನು ಎಂದು ಉಮೇಶ್ ಕತ್ತಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದ ಉಮೇಶ್ ಕತ್ತಿ
ಬಿಪಿಎಲ್ ಕಾರ್ಡ್ ರದ್ದು ವಿಚಾರದಲ್ಲಿ, ರೈತನಿಗೆ ಸತ್ತೋಗು ಎಂದು ಉಮೇಶ್ ಕತ್ತಿ ನೀಡಿದ್ದ ಹೇಳಿಕೆ ವೈರಲ್ ಆಗಿದ್ದವು. ಸೆಪ್ಟಂಬರ್ ಆರರ ತಡರಾತ್ರಿ ತೀವ್ರ ಹೃದಯಾಘಾತದಿಂದ ಉಮೇಶ್ ಕತ್ತಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಕತ್ತಿಯವರು ಹುಕ್ಕೇರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.












Click it and Unblock the Notifications