ಲಿಖಿತ ಪರೀಕ್ಷೆ ನಕಲು ಯತ್ನ; ಬಿಜೆಪಿ ಸರ್ಕಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದಲ್ಲಿ ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆ ಅಕ್ರಮದ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಇಎ ನಡೆಸಿದ ನಿಗಮ-ಮಂಡಳಿ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುವ ಪ್ರಯತ್ನ ನಡೆದಿದೆ. ಈ ಪ್ರಕರಣದ ಸಂಬಂಧ 10 ಜನರನ್ನು ಬಂಧಿಸಲಾಗಿದೆ.
ಭಾನುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಟ್ವೀಟ್‌ವೊಂದನ್ನು ಮಾಡಿದ್ದಾರೆ. 'ಹಿಂದಿನ ಸರ್ಕಾರದಲ್ಲಿ ಆದಂತಹ ನೇಮಕಾತಿ ಪರೀಕ್ಷೆಗಳ ಅಕ್ರಮಗಳು ಪುನರಾವರ್ತನೆ ಆಗದಂತೆ ತಡೆಯಲು ನಮ್ಮ ಸರ್ಕಾರ ಆದ್ಯತೆ ಮೇರೆಗೆ ಮುಂಜಾಗೃತಾ ಕ್ರಮಗಳನ್ನು ವಹಿಸಿದೆ' ಎಂದು ಹೇಳಿದ್ದಾರೆ.

ಸಚಿವರ ಟ್ವೀಟ್ ವಿವರ; ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್‌ನಲ್ಲಿ 28 ಅಕ್ಟೋಬರ್ ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುತ್ತಿದ್ದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶವಾಗದ ರೀತಿಯಲ್ಲಿ ಕಲಬುರ್ಗಿ ಜಿಲ್ಲೆಯ ಎಲ್ಲಾ 17 ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.
* ಪರೀಕ್ಷಾ ಕೇಂದ್ರಗಳ ಸುತ್ತಾ ಜನರ ಓಡಾಟಕ್ಕೆ ನಿರ್ಬಂಧ
* ಜೊತೆಗೆ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲಾ ಲಾಡ್ಜ್ ಗಳ ಪೂರ್ವಭಾವಿ ತಪಾಸಣೆ
* ಪರೀಕ್ಷೆ ನಡೆಯುವ ವೇಳೆ ಕೇಂದ್ರಗಳ ಸುತ್ತಮುತ್ತಲೂ ಸಂಶಯಾಸ್ಪದ ವಾಹನ ತಪಾಸಣೆ
* ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲಿನ ಎಲ್ಲಾ ಝೆರಾಕ್ಸ್ ಹಾಗೂ ಇತರೆ ಅಂಗಡಿ ಬಂದ್
* ಪರೀಕ್ಷೆಗೆ ಹಾಜರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿಯರುಗಳಿಗೆ HHMD (ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್) ಮೂಲಕ ಪೊಲೀಸ್ ಸಿಬ್ಬಂದಿಗಳಿಂದ ತಪಾಸಣೆ ನಡೆಸಿದ ಕೇಂದ್ರದ ಒಳಗೆ ಹೋಗಲು ಅನುಮತಿ.
ಈ ರೀತಿ ಹಲವಾರು ಮುಂಜಾಗೃತಾ ಕ್ರಮಗಳನ್ನು ವಹಿಸಿದ ಪರಿಣಾಮ ಅಫಜ್ಲಪುರ್ ಪಟ್ಟಣದಲ್ಲಿರುವ ಮಹಾಂತೇಶ್ವರ ವಿದ್ಯಾವರ್ಧಕ ಸಂಘ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನವೇ ಅಕ್ರಮ ಎಸಗಲು ತಯಾರಿ ನಡೆಸಿ ಬಂದಿದ್ದ 3 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ.
ಜೊತೆಗೆ ಕಲಬುರ್ಗಿ ನಗರದಲ್ಲಿ ಶರಣಬಸವೇಶ್ವರ ಯುನಿವರ್ಸಿಟಿ ಹಾಗೂ ಕಲಬುರ್ಗಿ ಯುನಿವರ್ಸಿಟಿ ಕಾಮರ್ಸ್ ವಿಭಾಗ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳ ನಿರ್ದೇಶಕರ ದೂರಿನ ಮೇರೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
28 ಅಕ್ಟೋಬರ್ ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುತ್ತಿದ್ದ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶವಾಗದ ರೀತಿಯಲ್ಲಿ ಕಲಬುರ್ಗಿ ಜಿಲ್ಲೆಯ ಎಲ್ಲಾ 17 ಪರೀಕ್ಷಾ ಕೇಂದ್ರಗಳಲ್ಲಿ
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 29, 2023
- ಪರೀಕ್ಷಾ ಕೇಂದ್ರಗಳ ಸುತ್ತಾ ಜನರ ಓಡಾಟಕ್ಕೆ ನಿರ್ಬಂಧ
- ಜೊತೆಗೆ ಪರೀಕ್ಷಾ ಕೇಂದ್ರಗಳ ಹತ್ತಿರದಲ್ಲಿರುವ ಎಲ್ಲಾ…
ಇಷ್ಟೇ ಅಲ್ಲದೇ ಈ ಅಕ್ರಮಕ್ಕೆ ಕುಮ್ಮಕ್ಕು, ಸಹಾಯ ಹಾಗೂ ತಯಾರಿ ನೀಡಿದ್ದ ಆರೋಪಿಗಳ ವಿರುದ್ಧವೂ FIR ದಾಖಲಿಸಿ ಕಾನೂನು ಪ್ರಕಾರ ಕ್ರಮ ವಹಿಸಲಾಗಿದೆ. ನಮ್ಮ ಸರ್ಕಾರ ತನ್ನ ಮುಂಜಾಗೃತಾ ಕ್ರಮ ವಹಿಸಿದ್ದರಿಂದಲೇ ಈ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೂ ಪರೀಕ್ಷಾ ಅಕ್ರಮಕ್ಕೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನೇಮಕಾತಿ ಪರೀಕ್ಷೆಗಳ ಪವಿತ್ರತೆ ಕಾಪಾಡಲು ಹಾಗೂ ನಮ್ಮ ಯುವಕರ ಉಜ್ವಲ ಭವಿಷ್ಯಕ್ಕೆ ಯಾವುದೇ ತೊಂದರೆಯಾಗದಂತೆ ಸಕಲ ಕ್ರಮವಹಿಸಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಿದೆ ಎಂದು ಸಚಿವರು ವಿವರಿಸಿದ್ದಾರೆ.
10 ಜನರ ಬಂಧನ; ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಲಿಖಿತ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯಲು ಮುಂದಾಗಿದ್ದ ಹಾಗೂ ಅದಕ್ಕೆ ಸಹಕಾರ ನೀಡಿದ್ದ 10 ಜನರನ್ನು ಶನಿವಾರ ಬಂಧಿಸಲಾಗಿದೆ. ಕಲಬುರಗಿಯ ಅಶೋಕ ನಗರ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಫಜಲಪುರದಲ್ಲಿ ಮೂವರು ಅಭ್ಯರ್ಥಿಗಳು ಮತ್ತು ಅಕ್ರಮಕ್ಕೆ ಸಹಕರಿಸಿದ ನಾಲ್ವರು ಸೇರಿದಂತೆ 7 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನೂ ಒಬ್ಬ ಪರಾರಿಯಾಗಿದ್ದು, ಹುಡುಕಾಟ ನಡೆದಿದೆ. ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ಹಗರಣದಲ್ಲಿ ಬ್ಲೂಟೂತ್ ಮೂಲಕ ಉತ್ತರ ಹೇಳಿಸಿದ ಆರೋಪದಲ್ಲಿ ಬಂಧಿತನಾಗಿದ್ದ ಕಲಬುರಗಿ ಜಿಲ್ಲೆ ಅಫಜಲಪುರದ ಆರ್. ಡಿ. ಪಾಟೀಲ ಕೈವಾಡ ಇದರದಲ್ಲಿ ಇದೆ ಎಂದು ಅಭ್ಯರ್ಥಿಯೊಬ್ಬರು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications