SSLC: ನನ್ನ ಹತ್ತನೇ ತರಗತಿ ನೆನಪು: ಹೋಂ ಸಿಕ್ ಆದರೂ ಸೆಕೆಂಡ್ ಕ್ಲಾಸ್ ಬಂದಿದ್ದೆ: ಮಲ್ಲಿಕಾರ್ಜುನ ಹೊಸಪಾಳ್ಯ ಬರಹ
SSLC: ನನ್ನ ಹತ್ತನೇ ತರಗತಿ ನೆನಪು: ಹೋಂ ಸಿಕ್ ಆದರೂ ಸೆಕೆಂಡ್ ಕ್ಲಾಸ್ ಬಂದಿದ್ದೆ: ಮಲ್ಲಿಕಾರ್ಜುನ ಹೊಸಪಾಳ್ಯ ಅವರ ಬರಹ ಇಲ್ಲಿದೆ.
ನಾನು ಹೈಸ್ಕೂಲ್ ಓದಿದ್ದು ತುಮಕೂರಿನ ಸಿದ್ದಗಂಗಾ ಮಠದಲ್ಲಿ. 1985ರಿಂದ 87ರವರೆಗೆ. ಹೊಸಪಾಳ್ಯದಲ್ಲಿ ನಮ್ಮದು ಒಂಟಿ ಮನೆ. ಆ ವಾತಾವರಣದಲ್ಲಿ ಬೆಳೆದವನಿಗೆ ಮಠದ ಜೀವನಕ್ಕೆ ಒಗ್ಗಿಕೊಳ್ಳಲು ತುಂಬಾ ಕಷ್ಟವಾಯಿತು. ಅಷ್ಟೊಂದು ಹುಡುಗರು, ಆಪಾಟಿ ಗದ್ದಲ, ಬೆಳಗಿನ ಜಾವಕ್ಕೇ ಏಳುವುದು, ನಮ್ಮ ಬಟ್ಟೆ ನಾವೇ ಒಗೆದುಕೊಳ್ಳುವುದು ಮುಂತಾದ ಅನೇಕ ಕಾರಣಗಳಿಂದ ಓದಿನಲ್ಲಿ ಹಿಂದೆ ಬಿದ್ದೆ. ಹೋಂ ಸಿಕ್ ಆವರಿಸಿಬಿಟ್ಟಿತ್ತು. ಬೇಜಾರಾದಾಗಲೆಲ್ಲಾ ಊರಿಗೆ ಹೋಗುತ್ತಿದ್ದೆ. ವಾರ, ಹತ್ತು ದಿನಗಳ ನಂತರ ಅಪ್ಪ ಮತ್ತೆ ಮಠಕ್ಕೆ ತಂದು ಬಿಡುತ್ತಿದ್ದರು.

ತುಂಬಾ ಆಬ್ಸೆಂಟ್ ಬೀಳುತ್ತಿದ್ದವು. ಎಂಟು ಮತ್ತು ಒಂಭತ್ತನೇ ತರಗತಿಯಲ್ಲಿ ಆಂತರಿಕ ಪರೀಕ್ಷೆಯಾದ್ದರಿಂದ ಹೇಗೋ ನಡೆಯಿತು. ಆದರೆ ಹತ್ತನೇ ತರಗತಿಯಲ್ಲಿ ಪಬ್ಲಿಕ್ ಎಗ್ಸಾಂ ಅಂತ ಎಲ್ಲರೂ ಹೆದರಿಸುತ್ತಿದ್ದರು. ಆದರೆ ಆ ವರ್ಷವೂ ನನ್ನ ಮನೆ ಗೀಳು ಕಡಿಮೆಯಾಗಲಿಲ್ಲ. ಮಠದಲ್ಲಿ ನನ್ನ ತಂದೆಯ ಪರಿಚಯದವರ ಒಂದು ಅಂಗಡಿ ಇತ್ತು. ಅವರಿಗೆ ನನ್ನನ್ನು ಪರಿಚಯಿಸಿ "ತಿನ್ನಲು ಏನಾದರೂ ಕೇಳಿದರೆ ಕೊಡಿ" ಅಂತ ಹೇಳಿದ್ದರು. ನಾನು ದಿನಾಲೂ ಕ್ಲಾಸ್ ಮುಗಿದ ಮೇಲೆ ಅವರ ಅಂಗಡಿ ಬಳಿ ಹೋಗುತ್ತಿದ್ದೆ. ಅವರು ಹೋಟಲ್ಲಿಂದ ಕಾಫಿ ತರಲು ಹೇಳುತ್ತಿದ್ದರು. ನಂತರ ಬಾಳೆ ಹಣ್ಣೋ ಅಥವಾ ಪೆಪ್ಪರಮೆಂಟನ್ನೋ ಕೈಗಿಡುತ್ತಿದ್ದರು. ಜೊತೆಗೆ "ನೀನು ಹತ್ತನೇ ಕ್ಲಾಸ್ ಆಗುವುದೇ ಇಲ್ಲ" ಅಂತ ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿದ್ದರು.
ಹತ್ತನೇ ತರಗತಿಯಲ್ಲೂ ತುಂಬಾ ಗೈರು ಹಾಜರಾಗಿದ್ದುದರಿಂದ ನಮ್ಮ ಕ್ಲಾಸ್ ಟೀಚರ್ ಎಷ್ಟೋ ದಿನ ನನಗೆ ಪರೀಕ್ಷೆಯ ಹಾಲ್ ಟಿಕೆಟ್ ಕೊಟ್ಟಿರಲೇ ಇಲ್ಲ. ದಿನಾ ಹೋಗಿ ಅವರ ಎದುರು ನಿಂತುಕೊಳ್ಳುತ್ತಿದ್ದೆ. ಕೊನೆಗೆ ಅವರಿಗೆ ರೋಸಿ ಹೋಗಿ "ನಮ್ಮಪ್ಪನಾಣೆ ನೀನು ಪಾಸಾಗುವುದಿಲ್ಲ ಕಣಲೇ" ಎಂದು ಷರಾ ಬರೆದು ಹಾಲ್ ಟಿಕೆಟ್ ಕೊಟ್ಟು ಕಳಿಸಿದ್ದರು. ಒಂದನೇ ತರಗತಿಯಿಂದ ಏಳರವರೆಗೂ ನಾನು ಚೆನ್ನಾಗಿಯೇ ಓದುತ್ತಿದ್ದೆ. ಸ್ಫುಟವಾಗಿ ಓದುವುದು, ತಪ್ಪಿಲ್ಲದೆ ಬರೆಯುವುದು, ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಎಲ್ಲಾ ಟೀಚರುಗಳಿಗೂ ಇಷ್ಟವಾಗಿತ್ತು. ಪ್ರತಿ ಶನಿವಾರ ಪಿಟಿ ಪೀರಿಯಡ್ ನಲ್ಲಿ ನನ್ನಷ್ಟು ಶಿಸ್ತಾಗಿ ಡ್ರಿಲ್ ಮಾಡುವವರು ಯಾರೂ ಇರಲಿಲ್ಲ. ಹಾಗಾಗಿಯೇ ನನ್ನನ್ನು ಪೀಟಿ ಮಾಸ್ತರು ಹುಡುಗರ ಎದುರಿಗೆ ನಿಲ್ಲಿಸಿ "ಇವನನ್ನು ನೋಡಿ ಹಾಗೆಯೇ ಕಲಿಯಿರಿ" ಎಂದು ಹೇಳುತ್ತಿದ್ದರು. ಡ್ರಿಲ್ ಮಾಡುವಾಗ ಒಂದು ಇಂಚೂ ಅತ್ತಿತ್ತ ಅಲುಗಾಡುತ್ತಿರಲಿಲ್ಲ.
ಅಂತಹ ನಾನು ಹೈಸ್ಕೂಲಿನಲ್ಲಿ ತೀರಾ ಮಂಕಾಗಿ ಹೋಗಿದ್ದೆ. ಪರೀಕ್ಷೆಗಳು ಬಂದವು. ಪಬ್ಲಿಕ್ ಪರೀಕ್ಷೆಯ ಸೆಂಟರ್ ಗಳು ಮಠದಲ್ಲಿಯೇ ಇದ್ದವು. ಹಾಗಾಗಿ ಬೇರೆ ಕಡೆ ಹೋಗುವಂತಿರಲಿಲ್ಲ. ಏನು ಬರೆದೆನೋ, ಏನು ಬಿಟ್ಟೆನೋ ಗೊತ್ತಿಲ್ಲ. ಲಾಸ್ಟ್ ಪೇಪರ್ ಹಿಂದಿ ಇತ್ತು. ನಾನು ಹಿಂದಿನ ದಿನವೇ ಟ್ರಂಕ್ ರೆಡಿ ಇಟ್ಟಿದ್ದೆ. ಪರೀಕ್ಷೆ ಮುಗಿದಿದ್ದೇ ತಡ. ಸೀದಾ ರೂಮಿಗೆ ಓಡಿ ಟ್ರಂಕು ಎತ್ತಿಕೊಂಡು ಊರಿಗೆ ಹೋಗಿಬಿಟ್ಟೆ.
ರಿಸಲ್ಟ್ ಇಂತಾ ದಿನ ಬರುತ್ತದೆ ಎಂದು ಗೊತ್ತಾಯಿತು. ಎರಡು ದಿನ ಮೊದಲೇ ಮಠಕ್ಕೆ ಹೋದೆ. ಉಳಿದವರೂ ಸಹ ಬಂದಿದ್ದರು. ರಿಸಲ್ಟ್ ಬಂತು. ನೋಟೀಸ್ ಬೋರ್ಡಿನಲ್ಲಿ ಹಾಕಿದ್ದರು. ಅಳುಕುತ್ತಲೇ ಹೋಗಿ ನೋಡಿದೆ. ನನಗೇ ಶಾಕ್ ಆಗುವಂತೆ ಸೆಕೆಂಡ್ ಕ್ಲಾಸ್ ಬಂದುಬಿಟ್ಟಿತ್ತು. 600ಕ್ಕೆ 304 ಅಂಕ. ಆಗ ಇಡೀ ಶಾಲೆಗೆ ಐದೋ ಆರೋ ಹುಡುಗರು ಫಸ್ಟ್ ಕ್ಲಾಸ್ ಬಂದಿದ್ದರು. ಸುಮಾರು 15 ಸೆಕಂಡ್ ಕ್ಲಾಸ್. ಅದರಲ್ಲಿ ನಾನೂ ಒಬ್ಬ. ಕನ್ನಡದಲ್ಲಿ 93. ಇಂಗ್ಲಿಷ್ ನಲ್ಲಿ 40, ಹಿಂದಿ 20, ಮ್ಯಾಥ್ಸ್ ಬರೀ 36, ಸೋಷಿಯಲ್ 60 ಹಾಗೂ ಸೈನ್ಸ್ 55 ಅಂಕ ಬಂದಿದ್ದವು.
ಅಂದು ಯಾವ-ಯಾವ ಮಾಸ್ತರು ಸಿಕ್ಕಿದ್ದರು ಎಂಬುದು ಮರೆತಿದೆ. ಅಂಗಡಿ ಬಳಿ ಹೋದಾಗ ನನ್ನ ರಿಸಲ್ಟ್ ಕೇಳಿ ಅವರಿಗೆ ದಿಕ್ಕೇ ತೋಚದಾಯಿತು. "ಹೋಗಿ ಬುದ್ದಿಯವರ (ಹಿರಿಯ ಸ್ವಾಮೀಜಿಗಳು) ಕಾಲಿಗೆ ಬಿದ್ದು ಆಶೀರ್ವಾದ ತಗೋ, ಉದ್ಧಾರ ಆಗ್ತೀಯಾ" ಅಂತ ಹೇಳಿ ಕಳಿಸಿದರು. ಅವರ ಸಿಟ್ಟು ಮಾತಲ್ಲಿ ಕಾಣುತ್ತಿತ್ತು.
ನನಗೆ ಈಗಲೂ ಒಂದರಿಂದ 7ನೇ ತರಗತಿವರೆಗೆ ಪಾಠ ಮಾಡಿದ ಹಲವು ಮಾಸ್ತರುಗಳ ಹೆಸರು ನೆನಪಿದೆ. ಪದ್ಮನಾಭ ಶಾಸ್ತ್ರಿಗಳು, ಮಲ್ಲಪ್ಪ ಮೇಷ್ಟ್ರು, ರೆಡ್ಡಿ ಮೇಷ್ಟ್ರು, ಮುತ್ತರಾಯಪ್ಪ, ರಾಮಯ್ಯ ಮೇಷ್ಟ್ರು.. ಹೀಗೆ. ಆದರೆ ಹೈಸ್ಕೂಲಿನ ಯಾವ ಮಾಸ್ತರ ಹೆಸರುಗಳೂ ನೆನಪಿಲ್ಲ. ಅದು ಯಾಕೋ ಕಾಣೆ. ಮನೆ ಹತ್ತಿರದ ಹೈಸ್ಕೂಲಿಗೆ ಹೋಗಿದ್ದರೆ ನನ್ನ ಬದುಕಿನ ದಿಕ್ಕೇ ಬದಲಾಗುತ್ತಿತ್ತೇನೋ ಅನಿಸುತ್ತದೆ. ಮಕ್ಕಳನ್ನು ದೂರದ ಊರುಗಳಿಗೆ ಓದಲು ಕಳಿಸುವ ಪೋಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನನಗನ್ನಿಸುತ್ತದೆ.
ಬರಹ: ಮಲ್ಲಿಕಾರ್ಜುನ ಹೊಸಪಾಳ್ಯ
ಮಲ್ಲಿಕಾರ್ಜುನ ಹೊಸಪಾಳ್ಯ ಹಿನ್ನೆಲೆ
ಕನ್ನಡ ಪತ್ರಿಕೋದ್ಯಮದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಹತ್ತಾರು ವರ್ಷಗಳಿಂದ ಬರೆಯುತ್ತಿರುವ ಮಲ್ಲಿಕಾರ್ಜುನ ಹೊಸಪಾಳ್ಯ ಗ್ರಾಮೀಣ ಪ್ರದೇಶಗಳ ನಾಡಿಮಿಡಿತ ಅರಿತವರು. ಹತ್ತಾರು ಸರ್ಕಾರೇತರ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿ, ಕೃಷಿ ಕುರಿತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ.












Click it and Unblock the Notifications