• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖರ್ಗೆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭ: ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 26: ಇಂದಿನಿಂದ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಿರಿಯ ಅನುಭವಿ ರಾಜಕಾರಣಿ, ಅತ್ಯಂತ ಪ್ರಮುಖ ಸಂಸದೀಯ ಪಟು ಹಾಗೂ ಪಕ್ಷ ನಿಷ್ಠೆಯಲ್ಲಿ ಹೆಸರು ಮಾಡಿರುವಂತಹ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.

ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 'ನನ್ನ ಪ್ರಕಾರ ಇಡೀ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಹಾಗೂ ಈಗ ಅಧಿಕಾರ ಹಸ್ತಾಂತರ ಮಾಡಿರುವ ಸೋನಿಯಾ ಗಾಂಧಿ ಹಾಗೂ ಇತರ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬಲಿಷ್ಠವಾಗಿ ಬೆಳೆದು ಮುಂದಿನ ರಾಜ್ಯ ಹಾಗೂ ರಾಷ್ಟ್ರ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂಬುದಾಗಿ ನಂಬಿದ್ದೇನೆ' ಎಂದು ಹೇಳಿದರು.

 ಬುದ್ಧ, ಬಸವ, ಗಾಂಧಿ ವಿಚಾರಧಾರೆಗಳಲ್ಲಿ ಖರ್ಗೆ ನಂಬಿಕೆ

ಬುದ್ಧ, ಬಸವ, ಗಾಂಧಿ ವಿಚಾರಧಾರೆಗಳಲ್ಲಿ ಖರ್ಗೆ ನಂಬಿಕೆ

'ಮಲ್ಲಿಕಾರ್ಜುನ ಖರ್ಗೆಯವರು ಬಸವ, ಬುದ್ಧ ಹಾಗೂ ಮಹಾತ್ಮ ಗಾಂಧಿ ಅವರ ವಿಚಾರಧಾರೆ ಮೇಲೆ ನಂಬಿಕೆ ಇಟ್ಟಿರುವಂತಹ ರಾಜಕಾರಣಿ. ಭಾರತ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಿಕೊಂಡು ಬಂದಿರುವ ಅತ್ಯಂತ ಹಿರಿಯ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಮತ್ತೊಂದೆಡೆ ಸರ್ವಾಧಿಕಾರಿ ಪ್ರವೃತ್ತಿ, ನಾಥುರಾಮ್ ಗೋಡ್ಸೆ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟಿರುವಂತಹ ಮೋದಿಯವರು. ಆರ್ಥಿಕತೆ ನಿರುದ್ಯೋಗ ಸಮಸ್ಯೆ ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ವಿಚಾರದಲ್ಲಿ ನರೇಂದ್ರ ಮೋದಿಯವರು ವೈಫಲ್ಯ ಅನುಭವಿಸಿದ್ದಾರೆ' ಎಂದು ತಿಳಿಸಿದರು.

'ಮತ್ತೊಂದು ವಿಚಾರ ಎಂದರೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಮೊನ್ನೆ ಮೋದಿ ಅವರು ಮಾಡಿದ ಭಾಷಣದಲ್ಲಿ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಭಾಗದಲ್ಲಿ ಹಾಗೂ ರಾಜ್ಯದಲ್ಲಿ ವಾಲ್ಮೀಕಿ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇವರ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ' ಎಂದು ಪ್ರಶ್ನಿಸಿದರು.

 ಶೋಷಣೆ ರಹಿತ ಸಮಾಜ ಕಟ್ಟಲು ಬಿಜೆಪಿಯವರಿಂದ ಸಾಧ್ಯವಿಲ್ಲ

ಶೋಷಣೆ ರಹಿತ ಸಮಾಜ ಕಟ್ಟಲು ಬಿಜೆಪಿಯವರಿಂದ ಸಾಧ್ಯವಿಲ್ಲ

'ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಸ್ಮಾರಕ ನಿರ್ಮಾಣ ಮಾಡುತ್ತಿಲ್ಲ ಏಕೆ? ಸತ್ಯಮೇವ ಜಯತೆ ಹಾಗೂ ರಾಮನ ಆದರ್ಶಗಳೇ ನನ್ನ ಆದರ್ಶ ಎಂದು ಮೋದಿ ಅವರು ಹೇಳಿದ್ದಾರೆ. ಆದರೆ ಶ್ರೀರಾಮ, ರಾವಣನ ವಿರುದ್ಧ ಯುದ್ಧ ಮಾಡಿದ್ದು ತನ್ನ ಹೆಂಡತಿಯ ರಕ್ಷಣೆಗಾಗಿ. ಆದರೆ ಮೋದಿಯವರು ತಮ್ಮ ಪತ್ನಿಯನ್ನು ವಿವಾಹವಾಗುವ ಸಂದರ್ಭದಲ್ಲಿ ಕಷ್ಟ ಹಾಗೂ ಸುಖದಲ್ಲಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ವಾಗ್ದಾನ ಮಾಡಿದ್ದರು. ಆದರೆ ನಂತರ ತಮ್ಮ ಪತ್ನಿಯನ್ನು ದೂರ ಮಾಡಿದ್ದು ಯಾಕೆ ಇದು ರಾಮನ ಆದರ್ಶವೇ' ಎಂದು ಕೇಳಿದರು.

'ಮೋದಿಯವರೇ ಶ್ರೀರಾಮ ನುಡಿದಂತೆ ನಡೆದ ಆದರ್ಶ ವ್ಯಕ್ತಿ. ನೀವು ಶ್ರೀ ರಾಮನ ಆದರ್ಶವನ್ನು ಪಾಲಿಸುವುದಾದರೆ 2014ರಲ್ಲಿ ನೀವು ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದೀರಿ. ಈಗ ಎಂಟು ವರ್ಷಗಳ ನಂತರ 70,000 ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುತ್ತಿದ್ದೀರಿ. ಬೆಲೆ ಏರಿಕೆ ಕಡಿಮೆ ಮಾಡುವುದಾಗಿ ಹೇಳಿದ್ದೀರಿ. ಆದರೆ ಇಂದು ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಒಂದು ಕಡೆ ನಿರುದ್ಯೋಗ ಮತ್ತೊಂದು ಕಡೆ ಬಡತನ ಹಾಗೂ ದೇಶದಲ್ಲಿ ಸಾಮಾಜಿಕ ಸಾಮರಸ್ಯ ನಾಶವಾಗುತ್ತಿದೆ. ಮೋದಿಯವರೇ ಇದೇನಾ ನೀವು ಪಾಲಿಸುತ್ತಿರುವ ಶ್ರೀರಾಮಚಂದ್ರನ ಆದರ್ಶ' ಎಂದು ಪ್ರಶ್ನಿಸಿದರು.

'ಬಿಜೆಪಿಯ ಎಷ್ಟು ನಾಯಕರು ರಾಮಾಯಣವನ್ನು ಓದಿದ್ದಾರೆ? ರಾಮಾಯಣದ ಅಯೋಧ್ಯ ಕಾಂಡದಲ್ಲಿ ಇದರಲ್ಲಿ ರಾಮ ಹಾಗೂ ಭರತನ ಸಂಭಾಷಣೆಯಲ್ಲಿ ರಾಮ ತಮ್ಮ ತಮ್ಮನಿಗೆ ನನ್ನ ಉಪಸ್ಥಿತಿಯಲ್ಲಿ ಹದಿನಾಲ್ಕು ವರ್ಷ ರಾಜ್ಯವನ್ನು ಆಳ್ವಿಕೆ ಮಾಡು ಎಂದು ಹೇಳುತ್ತಾನೆ. ಆಗ ರಾಜ್ಯ, ರಾಜ್ಯದ ಮಂತ್ರಿಮಂಡಲ, ಬಜೆಟ್, ತೆರಿಗೆ ಹೇಗೆ ಹಾಕಬೇಕು, ವೇತನ, ಬೇಹುಗಾರಿಕೆ ಸೇರಿದಂತೆ ಎಲ್ಲಾ ವಿಚಾರವನ್ನು ತ್ರೇತಾಯುಗದಲ್ಲಿ ಪ್ರಸ್ತಾಪಿಸಲಾಗಿದೆ. ಮೋದಿಯವರೇ ಈ ವಿಚಾರವನ್ನು ನೀವು ಯಾವತ್ತಾದರೂ ವಿಮರ್ಶೆ ಮಾಡಿದ್ದೀರಾ' ಎಂದು ಕೇಳಿದರು.

'ಕೇವಲ ಮತದಾನಕ್ಕಾಗಿ ರಾಮನ ಜಪ ಮಾಡುವುದನ್ನು ಬಿಟ್ಟು, ರಾಮನ ಆದರ್ಶವನ್ನು ಯಥಾವತ್ತಾಗಿ ಜೀವನದಲ್ಲಿ ಅಳವಡಿಸಿಕೊಂಡರೆ, ಮಹಾತ್ಮ ಗಾಂಧಿ ಹಾಗೂ ನಮ್ಮ ಸಂವಿಧಾನ ಬಯಸಿದಂತಹ ಜಾತಿ ರಹಿತ ವರ್ಗ ರಹಿತ ಹಾಗೂ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಆದರೆ ಬಿಜೆಪಿಯವರು ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿಲ್ಲ. ಈ ಬಗ್ಗೆ ದೇಶದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದಾಗಿ ನಾನು ಭಾವಿಸಿದ್ದೇನೆ' ಎಂದು ಹೇಳಿದರು.

'ಇನ್ನು ಶಿವಮೊಗ್ಗದಲ್ಲಿ ಮತ್ತೆ ಕೋಮು ಸಂಘರ್ಷ ಆರಂಭವಾಗಿದೆ. ಈ ರಾಜ್ಯದಲ್ಲಿ ಸರ್ಕಾರ ಆಡಳಿಸುತ್ತಿದೆಯೇ ಅಥವಾ ಇಲ್ಲವೇ? ರಾಜ್ಯದಲ್ಲಿ ಗುಪ್ತಚರ ಇಲಾಖೆ ಬದುಕಿದೆಯೋ ಅಥವಾ ಸತ್ತಿದಿಯೋ ಎಂದು ಕೇಳಲು ಬಯಸುತ್ತೇನೆ. ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಈ ಬಗ್ಗೆ ಕ್ರಮ ಜರುಗಿಸಲು ಸರ್ಕಾರ ವಿಫಲವಾಗಿರುವುದು ಏಕೆ? ಗಲಾಟೆಗಳಾಗಲಿ ಎಂಬ ಉದ್ದೇಶದಿಂದಲೇ ಈ ರೀತಿ ನಿರ್ಲಕ್ಷ ಸರ್ಕಾರ ವಹಿಸುತ್ತಿದೆಯೇ' ಎಂದು ಕೇಳಿದರು

'ಕುವೆಂಪು ಅವರಿಗೆ, ಶಾಂತವೇರಿ ಗೋಪಾಲಗೌಡರಿಗೆ ಜನ್ಮ ನೀಡಿದ ಜಿಲ್ಲೆ ಇಂದು ಮತಿಯವಾದಿಗಳ ಕೇಂದ್ರ ಸ್ಥಾನ ಆಗಿರುವುದು ನೋವಿನ ಸಂಗತಿಯಾಗಿದೆ. ಇದನ್ನು ನಿಯಂತ್ರಿಸುವುದು ಹಾಗೂ ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರಗಿಸಿ, ಈ ಬೆಳವಣಿಗೆ ಬಗ್ಗೆ ತನಿಖೆ ನಡೆಸಿ ಇದರ ಹಿಂದಿರುವ ಶಕ್ತಿಗಳು ಯಾರೆಂದು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂಬುದಾಗಿ ಹೇಳಲು ಬಯಸುತ್ತೇನೆ' ಎಂದು ತಿಳಿಸಿದರು.

 ಬಿಜೆಪಿಯ ಆನಂದ್‌ ಸಿಂಗ್‌ ಮೇಲೆ ಐಟಿ ದಾಳಿ ನಡೆಯಲ್ಲ

ಬಿಜೆಪಿಯ ಆನಂದ್‌ ಸಿಂಗ್‌ ಮೇಲೆ ಐಟಿ ದಾಳಿ ನಡೆಯಲ್ಲ

ಇದೇ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌.ಎಂ.ರೇವಣ್ಣ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರು ಮಾಡಿರುವ ಕಾರ್ಯಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ ಎಂದು ಹೇಳಿದರು

'ಬಿಜೆಪಿ ಅಧಿಕಾರಕ್ಕೆ ಬರಲು ಕೋಟ್ಯಂತರ ರೂಪಾಯಿ ಹಣ ಪಡೆದು ಪಕ್ಷಾಂತರ ಮಾಡಿ ಇಂದು ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತ್ತೆ ತಮಗೆ ಜನ ದೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ನಗರಸಭೆ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರುಗಳಿಗೆ ದೀಪಾವಳಿ ಉಡುಗೊರೆ ಹೆಸರಿನಲ್ಲಿ 2,65,99,000 ನಗದು, ಪುರುಷರಿಗೆ ರೇಷ್ಮೆ ಪಂಚೆ, ಮಹಿಳೆಯರಿಗೆ ರೇಷ್ಮೆ ಸೀರೆ, ಬೆಳ್ಳಿ ನಾಣ್ಯ, ಒಂದು ಕೆಜಿ ಹಾಗೂ ಅರ್ಧ ಕೆಜಿ ಬೆಳ್ಳಿ ನೀಡಲಾಗಿದೆ' ಎಂದು ಆರೋಪಿಸಿದರು

'ಹೊಸಪೇಟೆ ನಗರಸಭೆ ಸದಸ್ಯರಿಗೆ ತಲಾ 1 ಕೆಜಿ ಬೆಳ್ಳಿ, 1.44 ಲಕ್ಷ ನಗದು, ರೇಷ್ಮೆ ಪಂಚೆ ಹಾಗೂ ರೇಷ್ಮೆ ಸೀರೆ ನೀಡಲಾಗಿದ್ದು ಇದಕ್ಕಾಗಿ 79.60 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ' ಎಂದು ಆರೋಪಿಸಿದರು.

'ಕಮಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 1 ಲಕ್ಷ ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 35.65 ಲಕ್ಷ ವೆಚ್ಚ ಮಾಡಲಾಗಿದೆ' ಎಂದು ಹೇಳಿದರು.

ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 22,000 ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 1.40 ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆ ಈ ಮೂರು ಪಂಚಾಯತಿಗಳ ಸದಸ್ಯರಿಗೆ 2.65 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು

ಇಷ್ಟೆಲ್ಲಾ ಕೊಡುಗೆ ನೀಡುವ ಕಾರ್ಯ ನೋಡಿದರೆ ಈ ರಾಷ್ಟ್ರದಲ್ಲಿ ಕೇವಲ ವಿರೋಧ ಪಕ್ಷದವರ ಮೇಲೆ ಮಾತ್ರ ಇಡಿ ಆದಾಯ ತೆರಿಗೆ ದಾಳಿ ನಡೆಯುತ್ತದೆ ಎಂದು ಖಚಿತವಾಗುತ್ತದೆ ಎಂಬುದಾಗಿ ಹೇಳಿದರು.

ಬಿಜೆಪಿ ನಾಯಕರಿಗೆ ಯಾವುದೇ ತನಿಖೆ ಇಲ್ಲವಾಗಿದೆ. ಇದು ಕೇವಲ ಒಂದು ಉದಾಹರಣೆಯಾಗಿದ್ದು ಸರ್ಕಾರದಲ್ಲಿರುವ ಅನೇಕ ಸಚಿವರು ಈ ರೀತಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಟೀಕಿಸಿದರು.

ಇಂದು ಸರ್ಕಾರ ಎಲ್ಲಾ ಮಂತ್ರಿಗಳಿಗೆ ಗ್ರಾಮೋತ್ಸವ ಮಾಡಲು ಹೇಳುತ್ತಿದ್ದು ವಿಜಯನಗರದಲ್ಲಿ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯ ಮಾಡಿದ್ದಾರೆ ಅಲ್ಲಿರುವ ನ್ಯೂನ್ಯತೆ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಆದರೆ ಸಚಿವರ ಮಗ ಗ್ರಾಮ ವಾಸ್ತವ್ಯ ಮಾಡಿದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

 ವೈಫಲ್ಯ ಮುಚ್ಚಿ ಹಾಕಲು ಆನಂದ್‌ ಸಿಂಗ್ ಉಡುಗೊರೆ

ವೈಫಲ್ಯ ಮುಚ್ಚಿ ಹಾಕಲು ಆನಂದ್‌ ಸಿಂಗ್ ಉಡುಗೊರೆ

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ವೆಂಕಟರಾವ್ ಗೋರ್ಪಡೆ, 'ಆನಂದ್ ಸಿಂಗ್ ಅವರಿಂದ ಈ ಉಡುಗೊರೆಯನ್ನು ಕೆಲವರು ಪಡೆದಿದ್ದರೆ ಮತ್ತೆ ಕೆಲವರು ಪಡೆದಿಲ್ಲ. ಆನಂದ್ ಸಿಂಗ್ ಅವರು ಕಳೆದ 15 ವರ್ಷಗಳಿಂದ ಹೊಸಪೇಟೆಯಿಂದ ಪ್ರತಿನಿಧಿಸಿದ್ದರು ಅಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ರಸ್ತೆಗಳು ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ತುಂಗಭದ್ರಾ ಅಣೆಕಟ್ಟು ಇದ್ದರೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಆನಂದ್ ಸಿಂಗ್ ಅವರು ಇಂತಹ ಆಮಿಷಗಳನ್ನು ನೀಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತಾ ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಬೇರೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಈ ಉಡುಗೊರೆಯ ಹಣದ ಮೂಲ ಎಲ್ಲಿಂದ ಬಂದಿದೆ ಎಂಬುದು ಬಹಿರಂಗವಾಗಬೇಕು ಎಂದು ನಾವು ಆಗ್ರಹಿಸುತ್ತೇವೆ' ಎಂದು ತಿಳಿಸಿದರು.

ಆನಂದ್ ಸಿಂಗ್ ಅವರು ಈ ಉಡುಗೊರೆ ನೀಡಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ ಅವರು, 'ಈ ಬಗ್ಗೆ ಪ್ರಮುಖ ಮಾಧ್ಯಮಗಳಲ್ಲಿ ವರದಿ ಬಂದಿವೆ. ಆನಂದ್ ಸಿಂಗ್ ಅವರು ಈ ಉಡುಗೊರೆಯನ್ನು ನೀಡದಿದ್ದರೆ, ಈ ವರದಿ ಬಂದ ನಂತರ ಇದನ್ನು ತಿರಸ್ಕರಿಸಲಿಲ್ಲ ಏಕೆ? ಇದು ಪರೋಕ್ಷವಾಗಿ ಆನಂದ್ ಸಿಂಗ್ ಅವರು ಒಪ್ಪಿಕೊಳ್ಳುತ್ತಿರುವುದಕ್ಕೆ ಸಾಕ್ಷಿ' ಎಂದರು.

'ಆನಂದ್ ಸಿಂಗ್ ಅವರು ನಮ್ಮ ಭಾರತ್ ಜೋಡ ಯಾತ್ರೆ, ಬಳ್ಳಾರಿಯಲ್ಲಿ ನಡೆದ ಸಾರ್ವಜನಿಕ ಸಭೆಗೆ ಸಿಕ್ಕ ಜನ ಬೆಂಬಲ, ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ನಡಿಗೆ ಯಲ್ಲಿ ಸೇರಿದ್ದ ಜನಸಾಗರ ಕಂಡು, ಸಿದ್ದರಾಮಯ್ಯನವರ ಜನ್ಮ ದಿನ ಕಾರ್ಯಕ್ರಮದಲ್ಲಿ ಸೇರಿದ್ದ ಜನಸಾಗರ ಕಂಡು ಆನಂದ್ ಸಿಂಗ್ ಅವರು ವಿಚಲಿತರಾಗಿದ್ದಾರೆ. ಅವರ ಸೋಲು ಸ್ಪಷ್ಟವಾಗಿದ್ದು, ಮತದಾರರ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ಇದು ಕಾನೂನಿನ ಉಲ್ಲಂಘನೆಯಾಗಿದ್ದು, ಇಂದು ಆನಂದ್ ಸಿಂಗ್ ಅವರು ಜನಪ್ರತಿನಿಧಿಗಳನ್ನು ಖರೀದಿಸಲು ಮುಂದಾಗಿದ್ದಾರೆ. ಮೂಲಕ ವಿಜಯನಗರ ಮತದಾರರ ಸ್ವಾಭಿಮಾನ ಖರೀದಿ ಮಾಡಲು ಆನಂದ್ ಸಿಂಗ್ ಪ್ರಯತ್ನಿಸಿದ್ದಾರೆ. ಆನಂದ್ ಸಿಂಗ್ ಅವರೇ ಕೆಲವು ದಿನಗಳ ಹಿಂದೆ ನೀವು ಪರಿಶಿಷ್ಟ ಜಾತಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ನಿಮ್ಮ ಮೇಲೆ ದಾಖಲಾಗಿದೆ. ಈಗ ಈ ರೀತಿಯ ಅಂಶಗಳನ್ನು ನೀಡಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದೀರಿ. ನಿಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದರೆ ನೀವು ಜನತೆಯ ಮುಂದೆ ಬೇಸರ ಕ್ಷಮೆ ಕೋರಬೇಕು. ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತನಿಖೆ ನಡೆಸಬೇಕು. ಯಾವುದೇ ವ್ಯಕ್ತಿ 5,000 ಕ್ಕಿಂತ ಹೆಚ್ಚು ಹಣವನ್ನು ಉಡುಗೊರೆಯಾಗಿ ಪಡೆದರೆ, ಅದು ಘೋಷಣೆ ಆಗಬೇಕು ಎಂದು ಕಾನೂನು ಹೇಳುತ್ತದೆ. ಹೀಗಾಗಿ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು. ಅಲ್ಲದೆ ಇಲಾಖೆ ಕೂಡ ಈ ವಿಚಾರದಲ್ಲಿ ತನಿಖೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ' ಎಂದರು.

English summary
Karantaka Congress press meet on newly Elected AICC President Mallikarjun Kharge. Revanna Ugrappa Press Meet in Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X