ಬಂಡೀಪುರ, ನಾಗರಹೊಳೆಯಲ್ಲಿ ವನ್ಯಮೃಗಗಳ ದಹನ!
ಚಾಮರಾಜನಗರ, ಮಾ.14: ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡ ಕಾಡ್ಗಿಚ್ಚು ಶುಕ್ರವಾರವೂ ಮುಂದುವರೆದಿದ್ದು, ನೂರಾರು ಎಕರೆಯಷ್ಟು ಕಾಡು ನಾಶವಾಗಿರುವುದಲ್ಲದೆ ಲೆಕ್ಕವಿಲ್ಲದ್ದಷ್ಟು ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ನಡೆದಿದೆ.
ಕಿಡಿಗೇಡಿಗಳು ನಿರ್ಲಕ್ಷ್ಯದಿಂದ ಒಣಗಿದ ಬಿದಿರಿಗೆ ಬೆಂಕಿ ಹೊತ್ತಿಕೊಂಡಿದ್ದು ಸಾಕಷ್ಟು ಪ್ರಮಾಣದ ಕಾಡು ನಾಶವಾಗಿದೆ. ನಾಗರಹೊಳೆ ಅಭಯಾರಣ್ಯದ ಏಳು ವನ್ಯಜೀವಿ ವಲಯಗಳಲ್ಲಿ ತಿತಿಮತಿ ಸಮೀಪದ ಆನೆಚೌಕೂರು ವನ್ಯಜೀವಿ ವಲಯದಲ್ಲಿರುವ ಮತ್ತಿಗೋಡು ಸಾಕಾನೆ ಶಿಬಿರ ಸಮೀಪ ಗುರುವಾರ ಬೆಳಗ್ಗೆ 10ಕ್ಕೆ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಆದರೆ, ಮಧ್ಯಾಹ್ನ 12 ಗಂಟೆಗೆ ಪರಿಸ್ಥಿತಿಯ ಗಂಭೀರತೆ ಅರಿತ ಅರಣ್ಯಾಧಿಕಾರಿಗಳು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು.
ನಾಗರಹೊಳೆಯಲ್ಲಿ ಗೋಣಿಕೊಪ್ಪಲಿನಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದರೂ, ಬೆಂಕಿಯ ಪ್ರಖರತೆಯಿಂದಾಗಿ ಕಾಡಿಗೆ ತೆರಳಲಾಗಲಿಲ್ಲ. ನಾಗರಹೊಳೆಯ 7 ಅರಣ್ಯ ವಲಯದಿಂದಲೂ ಅರಣ್ಯ ಸಿಬ್ಬಂದಿ, ಫೈರ್ ವಾಚರ್ಸ್ ಹಾಗೂ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಲು ಸುಮಾರು 200ಕ್ಕೂ ಅಧಿಕ ಜನರ ತಂಡ ಕಾರ್ಯಾಚರಣೆ ನಡೆಸಿತು. ಆದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.

ಕರ್ನಾಟಕ ಅರಣ್ಯದಲ್ಲಿ ವನ್ಯಮೃಗಗಳಿಗೆ ರಕ್ಷಣೆ ಇಲ್ಲ
ವನ್ಯ ಪ್ರಾಣಿಗಳು, ಮೊಲ, ಕಾಡುಕೋಳಿ, ಉರಗ, ಉಡ, ಜಿಂಕೆ, ಮಂಗ ಇತ್ಯಾದಿ ಜೀವಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿರುವ ಸಾಧ್ಯತೆ ಇದೆ. ಅಲ್ಲದೆ, ಸಾಕಾನೆ ಶಿಬಿರದಲ್ಲಿ ಸುಮಾರು 33 ಆನೆಗಳಿದ್ದು, ಇತ್ತೀಚೆಗೆ ಸಕಲೇಶಪುರ, ಹಾಸನದ ಪುಂಡಾನೆಗಳನ್ನೂ ಪಳಗಿಸುವ ಸಲುವಾಗಿ ಮತ್ತಿಗೋಡು ಶಿಬಿರಕ್ಕೆ ಕರೆತರಲಾಗಿತ್ತು. ಹೀಗಾಗಿ ಸಾಕಾನೆ ಶಿಬಿರದಿಂದ ಆನೆಗಳನ್ನು ಕಾಡಿಗಟ್ಟಲು ಇದೀಗ ಅಸಾಧ್ಯವಾಗಿದೆ ಎಂದು ಅರಣ್ಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಂಡೀಪುರ ಹೆಚ್ಚಿನ ಪ್ರಮಾಣದ ಉದ್ಯಾನದಲ್ಲಿ ನಾಶ
ಬೆಂಕಿಯ ಆರ್ಭಟಕ್ಕೆ ಬಂಡೀಪುರ ಅರಣ್ಯದ ಹಲವಾರು ಎಕರೆ ಪ್ರದೇಶ ಕಾಡು ಕೂಡ ನಾಶವಾಗಿದೆ. ಬಂಡೀಪುರ ಪೂರ್ವದ ಮಂಗಲ ಗ್ರಾಮದ ಬಳಿಯಿರುವ ಕಾರೇಮಾಳ ಬಳಿ ಸಂಜೆ 5ಕ್ಕೆ ಈ ಬೆಂಕಿ ಕಾಣಿಸಿಕೊಂಡಿದ್ದು, 300 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ. ಬಂಡೀಪುರ ಅರಣ್ಯ ಜೊತೆಗೆ ಗೋಪಾಲಸ್ವಾಮಿ ಬೆಟ್ಟದ ಕೆಲವೆಡೆ ಬೆಂಕಿ ಬಿದ್ದಿದೆ.

ವನ್ಯ ಜೀವಿಗಳನ್ನು ಕಳೆದುಕೊಳ್ಳುವ ದುರಂತ
ಓಂಕಾರ ಅರಣ್ಯ ವಲಯದಲ್ಲಿಯೂ ಗುರುವಾರವೇ ಕೆಲ ಕಡೆ ಬೆಂಕಿ ಬಿದ್ದಿದೆ. ಇವೆರಡು ಕಡೆ ಬೆಂಕಿ ನಂದಿಸಲಾಗಿದೆ. ಬೆಂಕಿ ಜತೆಗೆ ವ್ಯಾಪಕವಾಗಿ ಹೊಗೆ ಆವರಿಸಿದ್ದು ವನ್ಯಜೀವಿಗಳು ಉಸಿರುಗಟ್ಟಿದ ವಾತಾವರಣದಿಂದ ರಕ್ಷಣೆ ಪಡೆಯಲು ಕಷ್ಟಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸೂಕ್ತ ಮುಂಜಾಗರೂಕತಾ ಕ್ರಮಗಳು, ರಕ್ಷಣಾ ಕಾರ್ಯಗಳ ವಿಳಂಬದಿಂದ ಅರಣ್ಯ, ವನ್ಯ ಜೀವಿಗಳನ್ನು ಕಳೆದುಕೊಳ್ಳುತ್ತಿರುವುದು ದುರಂತವಾಗಿದೆ.

ದಟ್ಟ ಕಾನನಕ್ಕೆ ಬೆಂಕಿ ಇಟ್ಟವರು ಯಾರು?
ಮಂಗಳ ಗ್ರಾಮದ ಬಳಿಯಿರುವ ಕೆರೆಯಲ್ಲಿ ಗುರುವಾರ ಮದ್ಯಾಹ್ನ ಮೀನು ಹಿಡಿಯುವ ಮಂದಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕೆರಯಿಂದ ಹೊರಗಡೆ ಕಳುಹಿಸಿದ್ದರು. ಇದರಿಂದ ಮೀನು ಹಿಡಿಯಲು ಬಿಡದ ಕೋಪಕ್ಕೆ ಬೆಂಕಿ ಹಾಕಿದ್ದಾರೆ ಎಂದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ನಿಯೋಜಿತ ದುಷ್ಕೃತ್ಯ
ಇನ್ನೂ ಕೆಲವರ ಪ್ರಕಾರ ಅರಣ್ಯದಲ್ಲಿ ಕಳ್ಳ ನಾಟದವರು, ರೆಸಾರ್ಟ್ ಗೆ ಬಂದವರು ನಿರ್ಲ್ಷಕ್ಯದಿಂದ ಕಾಡ್ಗಿಚ್ಚು ಹತ್ತುವುದು ಬೇಸಿಗೆಯಲ್ಲಿ ಮಾಮೂಲಿ ಸಂಗತಿಯಾಗಿದೆ. ಆದರೆ, ಈ ರೀತಿ ವ್ಯಾಪಕವಾಗಿ ಹಬ್ಬಿರುವುದು ಪೂರ್ವ ನಿಯೋಜಿತ ದುಷ್ಕೃತ್ಯದಂತೆ ಕಂಡು ಬರುತ್ತಿದೆ ಎನ್ನಲಾಗಿದೆ.












Click it and Unblock the Notifications