Border Row : ಗಡಿ ವಿವಾದ, ಸಿಎಂ ಜೊತೆ ಏಕನಾಥ್ ಶಿಂಧೆ ಮಾತುಕತೆ
ಬೆಂಗಳೂರು, ಡಿಸೆಂಬರ್ 06; ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಮಂಗಳವಾರ ಬೃಹತ್ ಹೋರಾಟ ನಡೆಸಿವೆ.
ಮಂಗಳವಾರ ಸಂಜೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಈ ಕುರಿತು ಬಸವರಾಜ ಬೊಮ್ಮಾಯಿ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಎರಡೂ ರಾಜ್ಯಗಳಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಚರ್ಚಿಸಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎರಡೂ ರಾಜ್ಯಗಳ ಜನರು ನಡುವೆ ಉತ್ತಮ ಬಾಂಧವ್ಯವಿದೆ. ಗಡಿ ವಿಚಾರದಲ್ಲಿ ನಮ್ಮ ನಿಲುವು ಅಚಲ ಮತ್ತು ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಚಿವರು ಭೇಟಿ ನೀಡಬೇಕಿತ್ತು; ಗಡಿ ವಿವಾದದ ನಡುವೆಯೇ ಮಂಗಳವಾರ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ಮತ್ತು ಮಹಾರಾಷ್ಟ್ರದ ಗಡಿತಜ್ಞ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಬೆಳಗಾವಿಗೆ ಭೇಟಿ ನೀಡಬೇಕಿತ್ತು.
Maharashtra Chief Minister Shri Eknath Shinde had telephonic discussion with me, we both agreed that there should be peace and law and order to be maintain in both the states.
— Basavaraj S Bommai (@BSBommai) December 6, 2022
1/2
ಆದರೆ ಕನ್ನಡ ಪರ ಸಂಘಟನೆಗಳು ಈ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದವು. ಮಹಾರಾಷ್ಟ್ರದ ಸಚಿವರು, ಸಂಸದರು ಬೆಳಗಾವಿಗೆ ಬಂದು ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಟೇಲ್ ಸಚಿವರು, ಸಂಸದರು ಡಿಸೆಂಬರ್ 6ರಂದು ಬೆಳಗಾವಿಗೆ ಭೇಟಿ ನೀಡದಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. 144 (3) ಸಿಆರ್‌ಪಿಸಿ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನಲೆ ಬೆಳಗಾವಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಕನ್ನಡ ಪರ ಸಂಘಟನೆಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಮಹಾರಾಷ್ಟ್ರ ಕರ್ನಾಟಕಕ್ಕೆ ಬಸ್ ಸೇವೆ ಸ್ಥಗಿತಗೊಳಿಸಿದೆ.












Click it and Unblock the Notifications