ಮಹಾ ಕುಂಭಮೇಳ: ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರು ಕನ್ನಡಿಗರ ಮೃತದೇಹ ಇಂದು ಬೆಳಗಾವಿಗೆ
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ್ದು. ಈ ದುರಂತದಲ್ಲಿ ನಾಲ್ವರು ಕನ್ನಡಿಗರು ಮೃತಪಟ್ಟಿದ್ದಾರೆ. ಮೃತಪಟ್ಟವರ ಮೃತದೇಹವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಬರಲಾಗಿದೆ. ಅಲ್ಲಿಂದ ಬೆಳಗಾವಿಗೆ ನಾಲ್ವರ ಮೃತದೇಹಗಳನ್ನು ತೆಗೆದುಕೊಂಡು ಬರುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪ್ರಯಾಗ್ ರಾಜ್‌ನಿಂದ ಆ್ಯಂಬುಲೆನ್ಸ್ ಮೂಲಕ ದೆಹಲಿಗೆ ಮೃತದೇಹಗಳನ್ನು ತೆಗೆದುಕೊಂಡು ಬರಲಾಗಿದೆ. ಇನ್ನು ಈ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯ ಬಗ್ಗೆ ಸಚಿವ ಕೃಷ್ಣಭೈರೇಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಜನ ಸೇರಿದ್ದಾರೆ. ಪುಣ್ಯ ಸ್ನಾನ ಮಾಡುವ ಸಂದರ್ಭದಲ್ಲಿ ಲಕ್ಷಾಂತರ ಜನ ಒಂದೇ ಕಡೆ ಸೇರಿದ್ದು, ನೂಕುನುಗ್ಗಲು ಆಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದರೆ. ಹಲವರು ಗಾಯಗೊಂಡಿದ್ದಾರೆ. ಒಟ್ಟಾರೆ ಕಾಲ್ತುಳಿತದಲ್ಲಿ 30ಕ್ಕೂ ಹೆಚ್ಚು ಜನ ಭಕ್ತಾದಿಗಳು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟ ನಾಲ್ವರು ಕನ್ನಡಿಗರನ್ನು ಜ್ಯೋತಿ ಹತ್ತರವಾಠ್, ಮೇಘಾ ಹತ್ತರವಾಠ್, ಮಹಾದೇವಿ ಬಾವನೂರ ಹಾಗೂ ಅರುಣ್ ಕೋಪರ್ಡೆ ಎಂದು ಗುರುತಿಸಲಾಗಿದೆ.

ಅಲ್ಲದೆ ಮಹಾ ಕುಂಭಮೇಳ ಕಾಲ್ತುಳಿತದಲ್ಲಿ ಕನ್ನಡಿಗರಾದ ಸರೋಜಿನಿ ನಡುವಿನಹಳ್ಳಿ ಹಾಗೂ ಕಾಂಚನ್ ಕೋರ್ಪಡೆ ಎನ್ನುವವರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮಹಾ ಕುಂಭಮೇಳದಲ್ಲಿ ಗಾಯಗೊಂಡವರು ಸಹ ವಿಮಾನದ ಮೂಲಕ ಬೆಳಗಾವಿಗೆ ಬರಲಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯಿಂದ ವಿಮಾನ ಹಾರಾಟ ಪ್ರಾರಂಭಿಸಲಿದ್ದು. ಸಂಜೆ 5.30ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಈ ಸಂಬಂಧ ಈಗಾಗಲೇ ಕರ್ನಾಟಕದ ಮೂವರು ನೋಡಲ್ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರ ನೇಮಿಸಿದ್ದು. ಇವರೆಲ್ಲ ದೆಹಲಿಗೆ ತಲುಪಿದ್ದಾರೆ.
ಇನ್ನು ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಕೃಷ್ಣಭೈರೇಗೌಡ ಅವರು, ಮಹಾ ಕುಂಭಮೇಳ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕದಿಂದ ಹೋಗಿರುವವರ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಸಂಬಂಧ ಉತ್ತರ ಪ್ರದೇಶದ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಕರ್ನಾಟಕದ ಐಪಿಎಸ್ ಅಧಿಕಾರಿ ಹರಿರಾಮ್ ಶಂಕರ್ ಅವರು ಕುಂಭಮೇಳ ಸ್ಥಳಕ್ಕೆ ಈಗಾಗಲೇ ಹೋಗಿದ್ದಾರೆ.
ದೆಹಲಿಯಿಂದ ಇಂಡಿಗೋ ವಿಮಾನದ ಮೂಲಕ ಮೃತದೇಹಗಳನ್ನು ಬೆಳಗಾವಿಗೆ ತೆಗೆದುಕೊಂಡು ಬರಲಾಗುತ್ತಿದೆ. ಅಲ್ಲದೆ ಅವರ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬರುವುದಕ್ಕೂ ಕರ್ನಾಟಕ ಸರ್ಕಾರದಿಂದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಮಹಾ ಕುಂಭಮೇಳದಲ್ಲಿ ಕನ್ನಡಿಗರು ಗಾಯಗೊಂಡಿರುವುದು ಇಲ್ಲವೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿಲ್ಲ. ಯಾವುದೇ ಆಸ್ಪತ್ರೆಗಳಲ್ಲಿ ಇನ್ನೂ ಯಾರಾದರೂ ಗಾಯಗೊಂಡಿರುವವರು ಇದ್ದಾರೆ ಎನ್ನುವುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕದ ನೋಡಲ್ ಅಧಿಕಾರಿ, ಐಎಎಸ್ ಹರ್ಷಲ್ ಭೊಯರ್ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಅವರು ಹೇಳಿದ್ದಾರೆ.












Click it and Unblock the Notifications