ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಸಿಸಿ ತರಬೇತಿ ನನ್ನನ್ನು ಕಾಪಾಡಿತು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ

|
Google Oneindia Kannada News

ಬೆಂಗಳೂರು, ಫೆ. 15: ವಿದ್ಯಾರ್ಥಿ ಜೀವನದಲ್ಲಿ ಪಡೆದಿದ್ದ ಎನ್‌.ಸಿ.ಸಿ ತರಬೇತಿ ನನ್ನ ಜೀವ ಉಳಿಸಿತು ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರು ಸೆಷನ್ಸ್ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿಯೇ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಮೇಲೆ ನಡೆದಿದ್ದ ಹತ್ಯಾಯತ್ನ ಪ್ರಕರಣದ ವಿಚಾರಣೆ ಬೆಂಗಳೂರಿನ ಜಿಲ್ಲಾ ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿದೆ. ಬಹುಶಃ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಒಬ್ಬರು ಸೆಷನ್ ಕೋರ್ಟ್‌ ಕಟಕಟೆಯಲ್ಲಿ ವಿಚಾರಣೆ ಎದುರಿಸಿ, ಸಾಕ್ಷಿ ನುಡಿದಿದ್ದಾರೆ. ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಎನ್‌.ಸಿ.ಸಿ ತರಬೇತಿ ಪಡೆದಿದ್ದರಿಂದ ಆರೋಪಿಯಿಂದ ಸಾಧ್ಯವಾದಷ್ಟು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಸಾಕ್ಷಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿ ತೇಜರಾಜ್ ಶರ್ಮಾ ಎಂಬುವನು 2018ರ ಮಾರ್ಚ್ 7 ರಂದು ಚಾಕುವಿನಿಂದ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಹತ್ಯಾಯತ್ನ ಮಾಡಿದ್ದ. ಪ್ರಕರಣದ ವಿಚಾರಣೆ ಸೆಷನ್ ಕೋರ್ಟ್ ನಲ್ಲಿ ನಡೆಯುತ್ತಿದೆ.

ಕೋರ್ಟ್‌ ಕಟೆಕಟೆಯಲ್ಲಿ ನಿಂತ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ!ಕೋರ್ಟ್‌ ಕಟೆಕಟೆಯಲ್ಲಿ ನಿಂತ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ!

ಸೆಷನ್ಸ್ ಕೋರ್ಟ್‌ಗೆ ಬಂದಿದ್ದ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರು ಸಾಕ್ಷಿ ಹೇಳಿಕೆ ಕೊಟ್ಟಿದ್ದಾರೆ. ಕರ್ನಾಟಕ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೆಷನ್ಸ್ ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳಿದ್ದಾರೆ. ನಗರದ ಸೆಷನ್ಸ್ ಕೋರ್ಟ್‌್ನಲ್ಲಿ ನಡೆದ ವಿಚಾರಣೆಯಲ್ಲಿ ಕೊಟ್ಟಿರುವ ಸಂಪೂರ್ಣ ಹೇಳಿಕೆ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ.

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ ನ್ಯಾ. ವಿಶ್ವನಾಥ ಶೆಟ್ಟಿ

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದ ನ್ಯಾ. ವಿಶ್ವನಾಥ ಶೆಟ್ಟಿ

ಲೋಕಾಯುಕ್ತ ಕಚೇರಿಯಲ್ಲಿ ತಮ್ಮ ಮೇಲೆ ನಡೆದಿದ್ದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರು ದೇವರ ಮೇಲೆ ಪ್ರಮಾಣ ಮಾಡಿ ಸಾಕ್ಷಿ ಹೇಳಿಕೆ ಕೊಟ್ಟಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಹೇಳಿಕೆ ಕೊಡುವ ಮೊಡಲು, ಸತ್ಯವನ್ನೇ ಹೇಳುತ್ತೇನೆಂದು ನ್ಯಾಯಮೂರ್ತಿಗಳು ಪ್ರಮಾಣ ಮಾಡಿದ್ದಾರೆ. ನ್ಯಾ. ವಿಶ್ವನಾಥ್ ಶೆಟ್ಟಿ ಅವರು ಸಾಕ್ಷಿ ಹೇಳುವಾಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಆರೋಪಿ ತೇಜರಾಜ್ ಶರ್ಮಾ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಮುಖಿಯಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಆರೋಪಿ ತೇಜರಾಜ್ ಶರ್ಮಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ.

ವಿದ್ಯಾರ್ಥಿ ಜೀವನದ ಎನ್‌ಸಿಸಿ ತರಬೇತಿ ಕಾಪಾಡಿತು

ವಿದ್ಯಾರ್ಥಿ ಜೀವನದ ಎನ್‌ಸಿಸಿ ತರಬೇತಿ ಕಾಪಾಡಿತು

ತಮ್ಮ ಮೇಲೆ ನಡೆದ ಕೊಲೆಯತ್ನದ ಪ್ರಕರಣವನ್ನು ನ್ಯಾ. ವಿಶ್ವನಾಥ ಶೆಟ್ಟಿ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸರ್ಕಾರಿ ಅಭಿಯೋಜಕರ ಎದುರು ಅವರು ಹೇಳಿದ ಸಾಕ್ಷಿಯ ಸಾರಾಂಶ ಹೀಗಿದೆ. 'ಆರೋಪಿ ಮಧ್ಯಾಹ್ನದ ಭೋಜನ ವಿರಾಮದಲ್ಲಿ ನನ್ನನ್ನು ಕಾಣಲು ಬಂದಿದ್ದರು. ಕುಳಿತುಕೊಳ್ಳುವಂತೆ ಹೇಳಿ, ಸಮಸ್ಯೆ ಏನೆಂದು ಕೇಳಿದೆ. ಯಾವುದೇ ವಿಚಾರವನ್ನು ಹೇಳದೆ ಒಂದು ಪೇಪರ್‌ನಲ್ಲಿ ಬರೆದ ಮನವಿಯನ್ನು ನನಗೆ ಓದಲು ನೀಡಿದರು. ಅದನ್ನು ನಾನು ಓದಲು ಪ್ರಾರಂಭಿಸಿದಾಗ, ಅದರಲ್ಲಿನ ಹೆಚ್ಚಿನ ವಿವರಗಳು ತಿಳಿಯದ ಕಾರಣ ಆ ಮನವಿಯನ್ನು ವಿಚಾರಣೆಗೆ ಸಂಬಂಧಪಟ್ಟ ವಿಚಾರಣಾಧಿಕಾರಿಗಳಾದ ಶ್ರೀಮತಿ ಲಲಿತಾ ಅವರಿಗೆ ಕೊಡಲು ಹೇಳಿದೆನು. ಆ ಸಂದರ್ಭದಲ್ಲಿ ನಾನು ಆರೋಪಿಯ ಕಡೆ ನೋಡಿದಾಗ, ತಾನು ಕುಳಿತ ಸ್ಥಳದಿಂದಲೇ ತನ್ನ ಪ್ಯಾಂಟ್ ಅಥವಾ ಶರ್ಟ್‌ನಿಂದ ಒಂದು ಚೂರಿಯನ್ನು ಮೇಲೆ ತೆಗೆಯುವುದನ್ನು ನಾನು ಗಮನಿಸಿದೆ.

ಅಷ್ಟರಲ್ಲಿ ಆರೋಪಿ ಹಲ್ಲೆ ಮಾಡುತ್ತಾರೆ ಎಂದು ಮನಗಂಡು ಕುಳಿತ ಸ್ಥಳದಿಂದ ಎದ್ದು ನಿಂತೆ, ಅಷ್ಟರಲ್ಲಿ ಆರೋಪಿ ಕುಳಿತಿದ್ದ ಖುರ್ಚಿಯ ಮೇಲೆ ಹತ್ತಿ, ನಂತರ ಎದುರಿಗಿದ್ದ ಟೆಬಲ್ ಮೇಲೆ ಹಾರಿ ನನ್ನನ್ನು ಚೂರಿಯಿಂದ ತೀವ್ರವಾಗಿ ತಿವಿಯಲು ಪ್ರಯತ್ನಿಸುತ್ತಿದ್ದನು. ಆ ಸಂದರ್ಭದಲ್ಲಿ ಏನೂ ಮಾಡಬೇಕು ಎಂದು ತೋಚದೆ, ನಮ್ಮದು ಸೌಂಡ್ ಫ್ರೂಪ್ ಚೇಂಬರ್ ಆಗಿರುವುದರಿಂದ, ನನ್ನಿಂದ ಎಷ್ಟು ಗಟ್ಟಿಯಾಗಿ ಕೂಗಲು ಸಾಧ್ಯವೊ ಅಷ್ಟು ಗಟ್ಟಿಯಾಗಿ ಕೂಗಿದೆ. ಆರೋಪಿ ಚೂರಿಯಿಂದ ತಿವಿಯುವಾಗ ಪ್ರತಿರೋಧಿಸಿ ಕಾದಾಡಿದೆ.

ನಾನು ನನ್ನ ವಿದ್ಯಾರ್ಥಿ ಜೀವನದ ಆರು ವರ್ಷ ಅಂದರೆ 2 ವರ್ಷ ಹೈಸ್ಕೂಲ್‌ನಲ್ಲಿ ಹಾಗೂ 4 ವರ್ಷ ಕಾಲೇಜಿನಲ್ಲಿ ಎನ್‌.ಸಿ.ಸಿ ತರಬೇತಿ ಪಡೆದಿದ್ದರಿಂದ ಆರೋಪಿ ಎಷ್ಟು ತೀಕ್ಷ್ಣವಾಗಿ ನನಗೆ ಚೂರಿಯಿಂದ ತಿವಿಯಲು ಸತತ ಪ್ರಯತ್ನ ಮಾಡಿದರು, ನಾನು ಸಾಧ್ಯವಾದಷ್ಟು ಅದರ ತೀವ್ರತೆ ಕಡಿಮೆ ಮಾಡಿಕೊಳ್ಳುತ್ತ ಬೊಬ್ಬೆ ಹಾಕಿದೆನು. ಅಷ್ಟರಲ್ಲಿ ನನ್ನ ಗನ್‌ಮ್ಯಾನ್‌ ಪುರುಷೋತ್ತಮ್ ತಮ್ಮ ಬಳಿ ಇದ್ದ ಗನ್ ತೋರಿಸಿದ ಮೇಲೆ ಆರೋಪಿ ಚೂರಿಯನ್ನು ಕೆಳಗೆ ಹಾಕಿದ್ದಾನೆ.

ಕೊಲ್ಲುವ ಸಲುವಾಗಿ 11ಕ್ಕಿಂತ ಹೆಚ್ಚು ಬಾರಿ ತಿವಿದ ಆರೋಪಿ

ಕೊಲ್ಲುವ ಸಲುವಾಗಿ 11ಕ್ಕಿಂತ ಹೆಚ್ಚು ಬಾರಿ ತಿವಿದ ಆರೋಪಿ

ಆರೋಪಿ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ನನಗೆ 11ಕ್ಕಿಂತ ಹೆಚ್ಚು ಬಾರಿ ತಿವಿದು ಗಾಯಮಾಡಿದ್ದಾರೆ. ದಪ್ಪನೆಯ ಸೂಟ್ ಧರಿಸಿದ್ದರಿಂದ ಹಾಗೂ ಪ್ರತಿರೋಧ ಮಾಡಿದ್ದರಿಂದ ಎದೆಗೆ ಗುರಿಯಿಟ್ಟು ತಿವಿಯುವ ಅವರ ಪ್ರಯತ್ನ ವಿಫಲವಾಗಿದೆ. ಎದೆಯ ಎಡಭಾಗದ ತುದಿಯಲ್ಲಿ ಆಗಿರುವ ಗಾಯ ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ಹೃದಯಕ್ಕೆ ತಗುಲಿ ಯಾವುದೆ ಚಿಕಿತ್ಸೆಗೆ ಅವಕಾಶ ಇಲ್ಲದೆ ಸ್ಥಳದಲ್ಲೆ ಸಾವಾಗುವ ಸಂಭವವಿತ್ತು.


ಮೊದಲು ನನ್ನ ಮುಖದಲ್ಲಿ ಯಾವುದೇ ಗಾಯ ಇರಲಿಲ್ಲ. ಆರೋಪಿ ಚೂರಿ ಇರಿತದ ಪರಿಣಾಮ ಈಗ ನನ್ನ ಗಲ್ಲದ ಎಡ ಭಾಗದಲ್ಲಿ ಗಾಯದ ಒಂದು ಮಾರ್ಕ್‌ ಹಾಗೆಯೆ ಉಳಿದಿದೆ. ಎದೆಯ ಎಡಬದಿ, ಎದೆಡ ಬಲಭಾಗ, ಎಡಗೈ, ಎಡಕೈಗೆ ಆಗಿರುವ ಗಾಯದಿಂದ ಎಡ ಹಸ್ತದ ಎರಡು ಮತ್ತು ಮೂರನೇ ಬೆರಳುಗಳನ್ನು ಮಡಚಲು ಆಗುತ್ತಿಲ್ಲ. ಈ ಗಾಯಗಳು ನನ್ನ ಮನಸ್ಸಿನ ಹಾಗು ಕುಟುಂಬದ ಸದಸ್ಯರ ಮನಸ್ಸಿನ ಮೇಲೆ ಬೀರಿರುವ ಪರಿಣಾಮ ಕಡಿಮೆ ಆಗಿಲ್ಲ ಎಂದು ನ್ಯಾ. ವಿಶ್ವನಾಥ್ ಶೆಟ್ಟಿ ಸಾಕ್ಷಿ ಹೇಳಿಕೆ ಕೊಟ್ಟಿದ್ದಾರೆ.

ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು

ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು

ನನ್ನನ್ನು ಆರೋಪಿಯಿಂದ ಬಿಡಿಸಿದ ತಕ್ಷಣ ಚೇಂಬರ್‌ನಿಂದ ಎತ್ತಿಕೊಂಡು ಹೋಗಿ ಕಾರಿನಲ್ಲಿ ಮಲಗಿಸಿ ನನ್ನನ್ನು ಸಮೀಪದ ಮಲ್ಯ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರಯಲ್ಲಿ ಯಾವುದೇ ವಿಳಂಬ ಮಾಡದೇ ಚಿಕಿತ್ಸೆಯನ್ನು ಕೊಡುವ ಏರ್ಪಾಡಾಗಿತ್ತು. ಆಸ್ಪತ್ರೆಯಲ್ಲಿ 5-6 ದಿವಸ ಚಿಕಿತ್ಸೆ ಪಡೆದಿದ್ದೇನೆ. ಆಸ್ಪತ್ರೆಗೆ ಸಾರ್ವಜನಿಕರು ಹಾಗೂ ಸಂದರ್ಶಕರು ನನ್ನನ್ನು ನೋಡಲು ಬರುವುದು ಹೆಚ್ಚಾಗಿದ್ದರಿಂದ ಹಾಗೂ ನನ್ನ ಮಗ ಕೂಡ ವೈದ್ಯನಾಗಿದ್ದರಿಂದ ಮನೆಯಲ್ಲಿಯೆ ಸುಮಾರು 49 ದಿವಸಗಳ ಕಾಲ ಚಿಕಿತ್ಸೆ ಪಡೆದು ಕಚೇರಿ ಕೆಲಸಕ್ಕೆ ಹಾಜರಾಗಿದ್ದೇನೆ ಎಂದಿದ್ದಾರೆ.

ವಿಚಾರಣೆಗೆ ಮೆಮೊ ಹಾಕಿದ ಆರೋಪಿ ಪರ ವಕೀಲರು

ವಿಚಾರಣೆಗೆ ಮೆಮೊ ಹಾಕಿದ ಆರೋಪಿ ಪರ ವಕೀಲರು

ಸರ್ಕಾರಿ ಅಭಿಯೋಜನಕರು ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಸಾಕ್ಷಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪಾಟಿಸವಾಲು ಮಾಡಲು ಆರೋಪಿ ಪರ ನ್ಯಾಯವಾದಿ ನಟರಾಜ್ ಶರ್ಮಾ ಅವರು ಕಾಲಾವಕಾಶ ಕೇಳಿಕೊಂಡಿದ್ದಾರೆ. ಹೀಗಾಗಿ ಮೆಮೊ ಹಾಕಿರುವ ನಟರಾಜ್ ಶರ್ಮಾ ಅವರು ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರನ್ನು ಪಾಟಿ ಸವಾಲು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ.

English summary
Karnataka Lokayukta Vishwanath Shetty has testified at the Session Court hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X