Lokayukta Raids: ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ಭರ್ಜರಿ ಬೇಟೆ
Lokayukta Raid: ಸಾಮಾನ್ಯವಾಗಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಾರೆ. ಹಾಗೆಯೇ ಇಂದು (ಜೂನ್ 24) ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ರೇಡ್ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿ, ನಿವಾಸ ಸೇರಿದಂತೆ ನಗರದ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್, ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ: ಶಿವಮೊಗ್ಗದಲ್ಲಿ ಭ್ರಷ್ಟಾಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಭಾಗವಾದ ಸಾವಯವ ಕೃಷಿ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್ ಅವರ ಮನೆ ಮೇಲೆ ದಾಳಿ ನಡೆದಿದ್ದು, ಶಿವಮೊಗ್ಗ ವಿನೋಬ ನಗರದಲ್ಲಿರುವ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಶಿವಮೊಗ್ಗದಲ್ಲಿರುವ ಪ್ರದೀಪ್ ಅವರ ಫಾರಂ ಹೌಸ್ ಮೇಲೂ ದಾಳಿ ಲೋಕಾಯುಕ್ತ ಮಾಡಿದ್ದಾರೆ. ಅಲ್ಲದೆ, ಶಿವಮೊಗ್ಗದ ಎರಡು ಕಚೇರಿಗಳ ಮೇಲೂ ದಾಳಿ ನಡೆಸಿದೆ. ವಿನೋಬ ನಗರ ಎಪಿಎಂಸಿ ಹಿಂಭಾಗದಲ್ಲಿ ಇರುವ ಪ್ರದೀಪ್ ಅವರ ನಿವಾಸದಲ್ಲಿ ದಾಳಿ ವೇಳೆ ಪ್ರದೀಪ್ ಮನೆಯಲ್ಲಿ ಇದ್ದರು. ನಿರಂತರ ದೂರುಗಳು ಬಂದ ಹಿನ್ನೆಲೆ ಈ ದಾಳಿ ನಡೆದಿದ್ದು, ಈ ವೇಳೆ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಲೋಕಾಯುಕ್ತ ದಾಳಿ: ಧಾರವಾಡ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ ನಡೆದಿದೆ. ಮಲಪ್ರಭಾ ಪ್ರಾಜೆಕ್ಟ್‌ನ ಇಂಜಿನಿಯರ್ ಅಶೋಕ್ ವಲ್ಸಂದ ಅವರ ಮನೆ ಮೇಲೂ ಲೋಕಾ ದಾಳಿ ಮಾಡಲಾಗಿದೆ. ಧಾರವಾಡ ನಗರದ ಕೆವಿಜಿ ಬ್ಯಾಂಕ್ ಬಳಿಯಿರುವ ಕ್ವಾಟರ್ಸ್ ಸೇರಿ ಇಂಜಿನಿಯರ್ ಕಚೇರಿ ಮೇಲೂ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕೋಕಾಯುಕ್ತ ದಾಳಿ: ಚಿಕ್ಕಮಗಳೂರು ನಗರ ಸಭೆಯ ಅಕೌಂಟ್ ಆಫೀಸರ್ ಲತಾಮಣಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದರು. ಜಯನಗರದಲ್ಲಿರುವ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಲಾಯಿತು. ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications