ಸಚಿವ ದೇಶಪಾಂಡೆ ವಿರುದ್ಧ ಲೋಕಾಯುಕ್ತ ತನಿಖೆ
ಬೆಂಗಳೂರು, ಫೆ. 18 : ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬುಧವಾರ ಆದೇಶ ನೀಡಿದೆ. ಐಟಿ ಕಾರಿಡಾರ್ ಯೋಜನೆಯಲ್ಲಿ ಅಕ್ರಮವಾಗಿ ಭೂಮಿ ಪಡೆದಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ತನಿಖೆ ನಡೆಯಲಿದೆ.
ವಾಸುದೇವ ರೆಡ್ಡಿ ಎಂಬುವವರು 2001ರಲ್ಲಿ ಕೈಗಾರಿಕೆ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು, ಐಟಿ ಕಾರಿಡಾರ್ ಯೋಜನೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.[ಐಟಿ ಕಾರಿಡಾರ್ ಹಗರಣದ ವಿವರ]

ಬುಧವಾರ ಈ ದೂರನ್ನು ಪರಿಗಣಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್‍ಪಿಗೆ ಆದೇಶ ನೀಡಿದೆ. 70 ಎಕರೆಗೂ ಹೆಚ್ಚು ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. [ಅಂಬರೀಶ್ ಚಿಕಿತ್ಸಾ ವೆಚ್ಚ, ಲೋಕಾಯುಕ್ತಕ್ಕೆ ದೂರು?]
ಐಟಿ ಕಾರಿಡಾರ್‌ಗೆ ಸೇರಿದ ಬೆಂಗಳೂರು ಹೊರವಲಯದ ವರ್ತೂರು-ವೈಟ್ ಫೀಲ್ಡ್ ಪ್ರದೇಶದಲ್ಲಿ ಸುಮಾರು 70 ಎಕರೆಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ, ಅನೇಕ ಉದ್ಯಮಿಗಳ ಜೊತೆ ಸೇರಿ ದೇಶಪಾಂಡೆ ಅವರು ಡಿನೋಟಿಫಿಕೇಶನ್ ಮಾಡಿಸಿದ್ದಾರೆ ಎಂಬುದು ದೂರಿನ ಸಾರಾಂಶ.
ವೈಟ್ ಫೀಲ್ಡ್, ಮಾರತ್‌ಹಳ್ಳಿ ಹಾಗೂ ಎಲೆಕ್ಟ್ರಾನಿಕ್ ಸಿಟಿಗಳಲ್ಲಿ 2000-01ರಲ್ಲಿ ಐಟಿ ಕಾರಿಡಾರ್ ಯೋಜನೆ ಮತ್ತು ಕೈಗಾರಿಕೆ ವಲಯ ಆರಂಭಿಸಲು ಸರ್ಕಾರ 500 ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಇದರಲ್ಲಿ 434 ಎಕರೆಯನ್ನು ಬಳಸಿಕೊಳ್ಳಲಾಗಿದೆ.












Click it and Unblock the Notifications