ಮೋದಿ, ಅನಂತ್, ಸೋನಿಯಾ, ಗೌಡ ಎಲ್ರೂ ಸಿಕ್ತಾರಿಲ್ಲಿ
ಬೆಂಗಳೂರು, ಫೆ. 1- ಎಲ್ಲಾ ರಾಜಕೀಯ ಪಕ್ಷಗಳೂ ಲೋಕಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಅನೇಕ ವ್ಯಾಪಾರಸ್ಥರು ಅದಾಗಲೇ ಅಂಗಡಿಗಳನ್ನು ತೆರೆದುಕೊಂಡು ಕುಳಿತಿದ್ದಾರೆ.
ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಚುನಾವಣಾ ಪ್ರಚಾರ ಸಾಮಗ್ರಿಯನ್ನು ಒದಗಿಸುವುದು ಈ ವ್ಯಾಪಾರಸ್ಥರ ಕಸುಬು. ಅಂದರೆ ನಾನಾ ಪಕ್ಷಗಳ ವಿವಿಧ ನಾಯಕರುಗಳ ಚಿತ್ರಗಳು, ಪಕ್ಷಗಳ ಚಿಹ್ನೆಗಳು ಮುಂತಾದುವನ್ನು ಮಾರಾಟ ಮಾಡುತ್ತಾರೆ. ಆ ಪಕ್ಷ ಈ ಪಕ್ಷ ಅಂಥಲ್ಲ. ಎಲ್ಲ ಪಕ್ಷಗಳೂ ಇಲ್ಲಿಗೆ ಸಲ್ಲುತ್ತಾರೆ.
ಬೆಂಗಳೂರಿನಲ್ಲಿಯೂ ಈ ಪ್ರಚಾರ ಸಾಮಾಗ್ರಿ ಸಿದ್ಧವಾಗುತ್ತಾದರೂ ಹೆಚ್ಚಾಗಿ ಹೈದರಾಬಾದ್, ಅಹಮದಾಬಾದ್, ಸೂರತ್, ಮುಂಬೈ ಕಡೆಗಳಿಂದ ಭಾರಿ ಪ್ರಮಾಣದಲ್ಲಿ ಬೆಂಗಳೂರಿಗೆ ಬರುತ್ತದೆ. ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಇಂತಹದೊಂದು ಅಂಗಡಿ ಒಂದು ವಾರದಿಂದ ಕಾರ್ಯಾರಂಭಿಸಿದೆ. ಅಂಗಡಿಯ ಹೆಸರು ರುಷಬ್ ಎಂಟರ್ ಪ್ರೈಸಸ್.

ಲೋಕಸಭೆ ಚುನಾವಣೆ ಇನ್ನೂ ಕಾವೇರಿಲ್ಲ
ಇತ್ತೀಚೆಗೆ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಒಳ್ಳೆಯ ವ್ಯಾಪಾರವಾಗಿತ್ತು. ಈಗ ಲೋಕಸಭೆ ಚುನಾವಣೆ ಇನ್ನೂ ಕಾವೇರಿಲ್ಲ. ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಬಿಸಿಯೇರುತ್ತದೆ. ವ್ಯಾಪಾರ ಭರದಿಂದ ಸಾಗುತ್ತದೆ. ಆದರೆ ಸಮಸ್ಯೆಯೂ ಅಲ್ಲಿಂದ ಶುರುವಾಗುತ್ತದೆ.

ಮೊದಲೆಲ್ಲ ಅಕ್ಷರಶಃ ಲೆಕ್ಕವಿಲ್ಲದಷ್ಟು ಮಾರಾಟವಾಗ್ತಿತ್ತು
ಮೊದಲಾಗಿದ್ದರೆ ಅಕ್ಷರಶಃ ಲೆಕ್ಕವಿಲ್ಲದಷ್ಟು ಮಾರಾಟವಾಗುತ್ತಿತ್ತು. ಅಂದರೆ ಪಕ್ಷಗಳು ತಾವು ಖರೀದಿಸಿದ ಚುನಾವಣಾ ಸಾಮಗ್ರಿಯ ಲೆಕ್ಕವನ್ನೇ ಇಡುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಆಯೋಗ ತುಂಬಾ ಸ್ಟ್ರಿಕ್ಟ್ ಆಗಿಬಿಟ್ಟಿದೆ. ಚುನಾವಣಾ ವೆಚ್ಚದ ಮೇಲೆ ಕಡಿವಾಣ ಹಾಕಿ ಕುಳಿತಿದೆ. ಹಾಗಾಗಿ ಪ್ರಚಾರ ಸಾಮಗ್ರಿ ಖರೀದಿಗೆ ಬರುವವರ ಕೈಹಿಡಿಯುತ್ತದೆ. ಹಾಗಾಗಿ ನಾವೂ ಹೆಚ್ಚು ಮಾಲು ತರುವುದಿಲ್ಲ ಎನ್ನುತ್ತಾರೆ ಅಂಗಡಿಯ ಮಾಲೀಕ ಎಂ ಪಿ ಜೈನ್.

ಕರ್ನಾಟಕಕ್ಕೆ ಆಮ್ ಆದ್ಮಿ ಪಕ್ಷ ಇನ್ನೂ ಹೊಸದೇ
ಕುತೂಹಲದ ಸಂಗತಿಯೆಂದರೆ ಕರ್ನಾಟಕಕ್ಕೆ ಆಮ್ ಆದ್ಮಿ ಪಕ್ಷ ಇನ್ನೂ ಹೊಸದೇ. ಹಾಗಾಗಿ ಆಮ್ ಆದ್ಮಿ ಚುನಾವಣಾ ಸಾಮಗ್ರಿ ಇನ್ನೂ ಸಿದ್ಧವಾಗಿಲ್ಲ. ಬೇಡಿಕೆಯೂ ಅಷ್ಟಾಗಿ ಬರುತ್ತಿಲ್ಲ. ಮುಂದೆ ಚುನಾವಣೆ ಸಮಯದಲ್ಲಿ ಬೇಡಿಕೆಯನ್ನು ನೋಡಿಕೊಂಡು ಮಾಲು ತಂದರೆ ಆಯ್ತು ಅನ್ನುತ್ತಾರೆ ಜೈನ್.

ಪ್ರಚಾರ ಸಾಧನಗಳಲ್ಲಿ ಆಮೂಲಾಗ್ರ ಬದಲಾವಣೆ
ಈ ಮಧ್ಯೆ, ರಾಜಕೀಯ ಪಕ್ಷಗಳಿಗೆ ಹಳೆ ಮಾದರಿಯ ಪ್ರಚಾರ ಸಾಮಗ್ರಿಯೇ ಬೇಕೆಂದೇನೂ ಇಲ್ಲ. ಇತ್ತೀಚೆಗೆ ಪ್ರಚಾರ ಸರಕು/ಮಾಧ್ಯಮಗಳು ಆಮೂಲಾಗ್ರ ಬದಲಾವಣೆ ಕಾಣುತ್ತಿವೆ. ಮಾಃಇತಿ ತಂತ್ರಜ್ಞಾನ ಮತ್ತು ಟಿವಿ ಮಾಧ್ಯಮಗಳ ಭರಾಟೆಯಲ್ಲಿ ಹಳೆ ಮಾದರಿಯ ಪ್ರಚಾರಕ್ಕೆ ಪಕ್ಷಗಳು ಹೆಚ್ಚು ಒತ್ತುಕೊಡುತ್ತಿಲ್ಲ ಎಂದೂ ಜೈನ್ ವಸ್ತುಸ್ಥಿತಿಯನ್ನು ಹರವಿಡುತ್ತಾರೆ.












Click it and Unblock the Notifications