PM Candidate: 'ಮಲ್ಲಿಕಾರ್ಜುನ್ ಖರ್ಗೆಗೆ ಅವಮಾನಿಸಲೆಂದೇ ಈ ಹೇಳಿಕೆ ನೀಡಿದ್ರಾ ಸಿದ್ದರಾಮಯ್ಯ?'
ಬೆಂಗಳೂರು, ಮೇ 24: ಕೇಂದ್ರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸದ್ಯ ಕಾಂಗ್ರೆಸ್‌ನಲ್ಲಿರುವ ಕನ್ನಡಿಗರು ಅಸಮರ್ಥರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವುದು ಸಹ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಲು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ರಾಜ್ಯ ಬಿಜೆಪಿ ಹೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಬಿಜೆಪಿ, ಅಸಲಿಗೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸೂರ್ಯ-ಚಂದ್ರರು ಇರುವಷ್ಟೆ ಸತ್ಯ. ಆದರೆ ಕರ್ನಾಟಕದ ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಹುದ್ದೆಗೆ ಸಮರ್ಥರು ಎಂಬ ಹೇಳಿಕೆಯನ್ನು ನೀಡುವಷ್ಟು ಸಿದ್ದರಾಮಯ್ಯನವರಿಗೆ ವಿಶಾಲ ಮನಸ್ಥಿತಿ ಇರದಿರುವುದು ಅವರಿಗೆ ದಲಿತ ನಾಯಕರ ಹಾಗೂ ಆ ಸಮುದಾಯದ ಮೇಲಿರುವ ಅಸಡ್ಡೆಯ ಪ್ರತೀಕ.

ಕಾಂಗ್ರೆಸ್ ಪಕ್ಷಕ್ಕೆ ದಲಿತರು ನೆನಪಾಗುವುದು ಕೇವಲ ಚುನಾವಣಾ ಸಮಯದಲ್ಲಿ ಮಾತ್ರ. ಚುನಾವಣೆಯಲ್ಲಿ ದಲಿತರನ್ನು ಕೇವಲ ವೋಟ್ ಬ್ಯಾಂಕ್‌ಗೆ ಬಳಸಿಕೊಳ್ಳುವ ಕಾಂಗ್ರೆಸ್ ಚುನಾವಣೆಯ ಬಳಿಕ ಹೀನಾಯವಾಗಿ ನಡೆಸಿಕೊಂಡಿರುವದು ಕಾಂಗ್ರೆಸ್‌ನ ಇತಿಹಾಸವನ್ನೊಮ್ಮೆ ಗಮನಿಸಿದರೆ ಸಾಕು ನಮಗೆ ತಿಳಿಯುತ್ತದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ಶುರುವಾಗಿ ಇತ್ತೀಚಿನ ದಲಿತ ನಾಯಕರಿಗೂ ಕಾಂಗ್ರೆಸ್ ಪಕ್ಷ ನೀಡಿದ್ದು ಕೇವಲ ಮಹಾದ್ರೋಹದ ಉಡುಗೊರೆ. ಇನ್ನು ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸುವುದನ್ನೇ ತಮ್ಮ ರಾಜಕೀಯದ ಪ್ರಮುಖ ಪಟ್ಟನ್ನಾಗಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರ ದಲಿತ ವಿರೋಧಿ ನೀತಿ ನಿಜಕ್ಕೂ ಭಯಾನಕ.
ಅಹಿಂದ ಹೆಸರೇಳಿ ನಿರಂತರವಾಗಿ ರಾಜಕೀಯ ಮಾಡಿಕೊಂಡು ಫಲಾನುಭವಿಯಾದ ಸಿದ್ದರಾಮಯ್ಯನವರು ಅವಕಾಶ ಸಿಕ್ಕಾಗಲೆಲ್ಲಾ ಅಹಿಂದದಲ್ಲಿನ "ದ"ವನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಸಿದ್ದರಾಮಯ್ಯನವರ ಈ ದಲಿತ ವಿರೋಧಿ ರಾಜಕಾರಣಕ್ಕೆ ಸಿಲುಕಿ ಪ್ರಬಲವಾಗಿ ಬೆಳೆಯಬೇಕಾಗಿದ್ದ ರಾಜ್ಯದ ಹಲವಾರು ಜನ ದಲಿತ ನಾಯಕರು ಬಹುತೇಕ ಅಸ್ತಿತ್ವ ಕಳೆದುಕೊಂಡಿದ್ದಾರೆ.
ಸಿದ್ದರಾಮಯ್ಯನವರು ಕಾಂಗ್ರೆಸ್ ಬಂದ ತಕ್ಷಣ ವಿಪಕ್ಷ ನಾಯಕ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಆ ಹುದ್ದೆಗೆ ಅವರಿಗೆ ಅಡ್ಡಲಾಗಿದ್ದಿದ್ದು ಮಲ್ಲಿಕಾರ್ಜುನ್ ಖರ್ಗೆ ಅವರು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಬೇಕಂತಲೆ ದೆಹಲಿ ರಾಜಕಾರಣಕ್ಕೆ ಕಳುಹಿಸಿ, ಈ ಮೂಲಕ 2013ರಲ್ಲಿ ಖರ್ಗೆಯವರು ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿಸಿದ್ದು ಸಹ ಸಿದ್ದರಾಮಯ್ಯನವರೇ.
ಇನ್ನು 2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಕೊರಟಗೆರೆಯಲ್ಲಿ ಗೆದ್ದರೆ, ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಕೊರಟಗೆರೆಯಲ್ಲಿ ಅವರನ್ನು ಸೋಲಿಸಿದ್ದು ಸಹ ಸಿದ್ದರಾಮಯ್ಯನವರೇ ಎಂಬುದನ್ನು ಕೊರಟಗೆರೆಯ ಜನ ಇಂದಿಗೂ ಮಾತನಾಡುತ್ತಾರೆ.
ಆರು ಬಾರಿ ಸಂಸದ ಕೆ. ಎಚ್. ಮುನಿಯಪ್ಪನವರನ್ನು ಕೋಲಾರಕ್ಕಷ್ಟೇ ಸೀಮಿತಗೊಳಿಸಿದ್ದು, ತಮ್ಮ ಬಹುಕಾಲದ ಒಡನಾಡಿ ಶ್ರೀನಿವಾಸ್ ಪ್ರಸಾದ್ ಅವರನ್ನು ಅವಮಾನಿಸಿ ಕಾಂಗ್ರೆಸ್ ತೊರೆಯುವಂತೆ ಮಾಡಿದ್ದು, ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಮತಾಂಧ ಜಿಹಾದಿಗಳನ್ನು ಮೆಚ್ಚಿಸಲು ದಲಿತ ಶಾಸಕನಿಗೆ ಟಿಕೇಟ್ ತಪ್ಪಿಸಿದ್ದು ಹೀಗೆ ದಲಿತರಿಗೆ ಸಿದ್ದರಾಮಯ್ಯನವರು ಮಾಡಿದ ದ್ರೋಹದ ಪಟ್ಟಿ ಉದ್ದುದ್ದ ಬೆಳೆಯುತ್ತದೆ.
ದಲಿತ ನಾಯಕರನ್ನು ತುಳಿದ ಸಿದ್ದರಾಮಯ್ಯನವರು ಈ ಅವಧಿಯಲ್ಲಿ ದಲಿತ ಸಮುದಾಯವನ್ನು ಸಹ ತುಳಿದಿರುವುದು ಅತ್ಯಂತ ವಿಪರ್ಯಾಸ. ದಲಿತರ ಕಲ್ಯಾಣಕ್ಕೆ ಮೀಸಲಾಗಿದ್ದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿಯ ₹25 ಸಾವಿರ ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಸಿದ್ದರಾಮಯ್ಯನವರ ದಲಿತ ವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ.
ಕೇಂದ್ರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸದ್ಯ ಕಾಂಗ್ರೆಸ್‌ನಲ್ಲಿರುವ ಕನ್ನಡಿಗರು ಅಸಮರ್ಥರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿರುವುದು ಸಹ ಉದ್ದೇಶಪೂರ್ವಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಲು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
— BJP Karnataka (@BJP4Karnataka) May 23, 2024
ಅಸಲಿಗೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು…
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾದರೆ ತಾವು ಸ್ವಾಗತಿಸುತ್ತೇವೆ ಎಂದು ಭಾಷಣ ಬಿಗಿದಿದ್ದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ತಮ್ಮ ವಂಧಿಮಾಗದರಿಂದ ಹೇಳಿಸುತ್ತಿರುವುದು ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ತಾವು "ಸಿದ್ದ"ರಿಲ್ಲ ಎಂಬುದರ ಸೂಚಕವಷ್ಟೆ ಎಂದು ಬಿಜೆಪಿ ತಿಳಿಸಿದೆ.












Click it and Unblock the Notifications