ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಗೆ ಕಗ್ಗಂಟಾಗಿರುವ 11 ಕ್ಷೇತ್ರಗಳು
Recommended Video

ಬೆಂಗಳೂರು, ಜುಲೈ 24 : ಕರ್ನಾಟಕ ಬಿಜೆಪಿ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಈ ಪಕ್ಷದ ನಾಯಕರ ಗುರಿಯಾಗಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಹಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಾಗಲಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, 11 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಾಗಿ ಪಕ್ಷ ಹುಡುಕಾಟ ನಡೆಸುತ್ತಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಇದುವರೆಗೂ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದ್ದವು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಆದ್ದರಿಂದ, ಈ ಮೈತ್ರಿ ಲೋಕಸಭೆ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ಇದು ಬಿಜೆಪಿಯ ಆತಂಕಕ್ಕೆ ಕಾರಣವಾಗಿವೆ.
ಈಗಾಗಲೇ ಬಂದಿರುವ ಕೆಲವು ಸಮೀಕ್ಷೆಗಳ ವರದಿಯಲ್ಲಿ ಹಲವು ಹಾಲಿ ಸಂಸದರು ಸೋಲು ಕಾಣಲಿದ್ದಾರೆ ಎಂದು ಹೇಳಿದೆ. ಜೊತೆಗೆ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಿ ಚುನಾವಣೆ ಎದುರಿಸಿದರೆ, ಇನ್ನೂ ಕೆಲವು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಷ್ಟವಾಗಲಿದೆ....11 ಕ್ಷೇತ್ರಗಳು ಯಾವುವು ಚಿತ್ರಗಳಲ್ಲಿ ನೋಡಿ....

11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಲ್ಲ
ಜೆಡಿಎಸ್-ಕಾಂಗ್ರೆಸ್ ಪ್ರಬಲವಾಗಿರುವ 11 ಕ್ಷೇತ್ರಗಳಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳು ಸಿಗುತ್ತಿಲ್ಲ. ಪಕ್ಷ ಈಗಾಗಲೇ ಸಂಭವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುತ್ತಿದೆ. ಒಂದು ವೇಳೆ ಅಭ್ಯರ್ಥಿಗಳು ಸಿಗದಿದ್ದರೆ ಬೇರೆ ಪಕ್ಷದ ನಾಯಕರನ್ನು ಸೆಳೆದು ಅಭ್ಯರ್ಥಿಯಾಗಿಸಲು ಚಿಂತನೆ ನಡೆದಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶೀಘ್ರವೇ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಆಗ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿದೆ. ಎಲ್ಲಾ 28 ಕ್ಷೇತ್ರಗಳ ಕುರಿತು ಅವರು ಚರ್ಚೆ ನಡೆಸಲಿದ್ದು, ಆಗ ಪರ್ಯಾಯ ಅಭ್ಯರ್ಥಿಗಳ ಬಗ್ಗೆ ರಾಜ್ಯದ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.

ಅಭ್ಯರ್ಥಿ ಕೊರತೆ ಇರುವ ಕ್ಷೇತ್ರಗಳು
ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾದರೆ ಬಿಜೆಪಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಈ ಕ್ಷೇತ್ರಗಳತ್ತ ಪಕ್ಷ ಹೆಚ್ಚಿನ ಗಮನ ಹರಿಸಿದೆ.
ಮೈಸೂರು-ಕೊಡಗು ಕ್ಷೇತ್ರದ ಹಾಲಿ ಸಂಸದರು ಬಿಜೆಪಿಯ ಪ್ರತಾಪ್ ಸಿಂಹ, ಹಾಸನ- ಎಚ್.ಡಿ.ದೇವೇಗೌಡ, ಚಾಮರಾಜನಗರ- ಕಾಂಗ್ರೆಸ್‌ನ ಧ್ರುವ ನಾರಾಯಣ, ಮಂಡ್ಯ- ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು (ರಾಜೀನಾಮೆ ನೀಡಿದ್ದಾರೆ). ಬೆಂಗಳೂರು ಗ್ರಾಮಾಂತರ - ಕಾಂಗ್ರೆಸ್‌ನ ಡಿ.ಕೆ.ಸುರೇಶ್.

ಬಿಜೆಪಿಗೆ ಪ್ರಬಲ ಪೈಪೋಟಿ ಎದುರಾಗುವ ಕ್ಷೇತ್ರ
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಯಚೂರು ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳು ಸಿಗುತ್ತಿಲ್ಲ. ಆದ್ದರಿಂದ, ಬೇರೆ ಪಕ್ಷದ ನಾಯಕರನ್ನು ಸೆಳೆದು ಅಭ್ಯರ್ಥಿಯನ್ನಾಗಿಸುವ ಕುರಿತು ಚರ್ಚೆ ನಡೆದಿದೆ.
ಚಿಕ್ಕಬಳ್ಳಾಪುರ- ವೀರಪ್ಪ ಮೊಯ್ಲಿ, ಕೋಲಾರ - ಕೆ.ಎಚ್.ಮುನಿಯಪ್ಪ, ತುಮಕೂರು- ಮುದ್ದಹನುಮೇಗೌಡ, ಚಿತ್ರದುರ್ಗ - ಬಿ.ಎನ್.ಚಂದ್ರಪ್ಪ, ರಾಯಚೂರು - ಬಿ.ವಿ.ನಾಯಕ್. ಈ ಕ್ಷೇತ್ರಗಳ ಪೈಕಿ ಎಲ್ಲಿಯೂ ಬಿಜೆಪಿ ಸಂಸದರು ಇಲ್ಲ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯುವ ಕುರಿತು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ, ಬಿಜೆಪಿಗೆ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ.
28 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಅಮಿತ್ ಶಾ ಟಾರ್ಗೆಟ್ ನೀಡಿದ್ದಾರೆ. ಅತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications