5 ಅಭ್ಯರ್ಥಿಗಳ ಬಿಜೆಪಿ 2ನೇ ಪಟ್ಟಿ ನೋಡಿ
ನವದೆಹಲಿ, ಮಾ.14 : ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲಿರುವ 25 ಕ್ಷೇತ್ರದ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದೆ. ಮೊದಲು 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಅಂತಿಮಗೊಳಿಸಿತ್ತು. ಗುರುವಾರ ನಡೆದ ಕೇಂದ್ರ ಚುನಾವಣಾ ಸಮತಿ ಸಭೆಯಲ್ಲಿ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿ, 3 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.
ಗುರುವಾರ ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಸಭೆಯ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ 5 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಇನ್ನೂ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ ಎಂದು ಅನಂತ್ ಕುಮಾರ್ ಹೇಳಿದರು.[ಬಿಜೆಪಿ ಮೊದಲ ಪಟ್ಟಿ]

ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಒಪ್ಪಿಗೆ ನೀಡಲಾಗಿದೆ. ತುಮಕೂರು ಕ್ಷೇತ್ರದ ಹಾಲಿ ಸಂಸದ ಜಿಎಸ್ ಬಸವರಾಜು ಅವರಿಗೆ ಪುನಃ ಬಿಜೆಪಿ ಟಿಕೆಟ್ ನೀಡಿದೆ. ಮೈಸೂರು ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಮತ್ತು ಸಿಎಚ್ ವಿಜಯಶಂಕರ್ ಹೊರತು ಪಡಿಸಿ ಪತ್ರಕರ್ತ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಲಾಗಿದೆ. [ಶ್ರೀರಾಮುಲು ಬಿಜೆಪಿಗೆ]
ಬಾಕಿ ಉಳಿದಿರುವ ಕ್ಷೇತ್ರಗಳು : ಕರ್ನಾಟಕ ಬಿಜೆಪಿ ತನ್ನ ಅಂತಿಮ ಪಟ್ಟಿಯಲ್ಲಿ ಹಾಸನ, ಬಳ್ಳಾರಿ, ಬೀದರ್ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಬೇಕಾಗಿದೆ. ಹಾಸನ ಕ್ಷೇತ್ರಕ್ಕೆ ಮೈಸೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಚ್.ವಿಜಯಶಂಕರ್ ಹೆಸರು ಕೇಳಿಬರುತ್ತಿದೆ. ಬೀದರ್ ಕ್ಷೇತ್ರಕ್ಕೆ ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಅವರ ಪುತ್ರರ ಹೆಸರು ಚಾಲ್ತಿಯಲ್ಲಿದೆ. ಬಳ್ಳಾರಿ ಕ್ಷೇತ್ರದಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ ಶ್ರೀರಾಮುಲು ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಅಂದಹಾಗೆ ಕರ್ನಾಟಕದ 28 ಕ್ಷೇತ್ರಗಳ ಚುನಾವಣೆಗೆ ಮಾರ್ಚ್ 19ರಂದು ಅಧಿಸೂಸಚನೆ ಹೊರಬೀಳಲಿದ್ದು, ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 16ರಂದು ಫಲಿತಾಂಶ ಹೊರಬೀಳಲಿದೆ. [ಕರ್ನಾಟಕ ಚುನಾವಣೆ ವೇಳಾಪಟ್ಟಿ]
ಬಿಜೆಪಿ 5 ಕ್ಷೇತ್ರದ ಅಭ್ಯರ್ಥಿಗಳು ಇವರು
ಮೈಸೂರು - ಪ್ರತಾಪ್ ಸಿಂಹ
ಉಡುಪಿ ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
ಮಂಡ್ಯ- ಬಿ.ಶಿವಲಿಂಗಯ್ಯ
ಕೋಲಾರ - ನಾರಾಯಣಸ್ವಾಮಿ
ತುಮಕೂರು - ಜಿ.ಎಸ್.ಬಸವರಾಜ್ [ಕಾಂಗ್ರೆಸ್ 2ನೇ ಪಟ್ಟಿ ನೋಡಿ]












Click it and Unblock the Notifications