Exit Poll: ಚುನಾವಣೋತ್ತರ ಸಮೀಕ್ಷೆಗಳನ್ನು INDIA ಒಕ್ಕೂಟದ ನಾಯಕರು ಏಕೆ ಒಪ್ಪಿಕೊಳ್ಳುತ್ತಿಲ್ಲ?

ಬೆಂಗಳೂರು, ಜೂನ್‌ 02: ದೇಶವ್ಯಾಪಿ ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿದ್ದು, ಎಲ್ಲ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎಗೆ ಬಹುಪರಾಕ್ ಹೇಳಿದ್ದು, ಮೂರನೇ ಬಾರಿಗೆ ನರೇಂದ್ರಮೋದಿಯವರು ಪ್ರಧಾನಿಯಾಗುವುದು ಖಚಿತ ಎಂಬುದನ್ನು ಸಾರಿ ಹೇಳುತ್ತಿವೆ. ಆದರೆ ಸಮೀಕ್ಷೆಗಳ ನಡುವೆಯೂ ಜೂನ್ 4ರ ಫಲಿತಾಂಶ ಏನು ಹೇಳುತ್ತದೆಯೋ ಅದೇ ಅಂತಿಮ ಎನ್ನುವುದಂತು ನಿಜ.

ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಡೆದಿರುವ ಚುನಾವಣೆಯತ್ತ ಇಡೀ ವಿಶ್ವ ಅಚ್ಚರಿಯಿಂದ ನೋಡುತ್ತಿದ್ದು, ಪ್ರಧಾನಿ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುವವರು ಮತ್ತು ಅದನ್ನು ವಿರೋಧಿಸುವ, ಬದಲಾವಣೆ ಬಯಸುವವರು ಕೂಡ ಇತ್ತ ದೃಷ್ಟಿ ನೆಟ್ಟಿದ್ದಾರೆ. ಇದೀಗ ಬಂದಿರುವ ಸಮೀಕ್ಷೆಗಳು ಕೆಲವರಿಗೆ ಸಂತಸ ತಂದಿದ್ದರೆ, ಮತ್ತೆ ಕೆಲವರಿಗೆ ನಿರಾಸೆಯನ್ನುಂಟು ಮಾಡಿದೆ. ಹಾಗೆಂದು ಈ ಸಮೀಕ್ಷೆಗಳೇ ಅಂತಿಮವಲ್ಲ ಎಂಬುದು ಅಷ್ಟೇ ಸತ್ಯ. ಹಾಗೆಂದು ಹಗುರವಾಗಿ ಪರಿಗಣಿಸುವುದು ಕೂಡ ಅಸಾಧ್ಯವೇ..

Lok Sabha Election 2024 Why INDIA Union Leaders Are Not Accepting Post Election Polls

ಸಮೀಕ್ಷೆಗಳು ಎನ್ ಡಿಎ ಒಕ್ಕೂಟದ ಪರವಾಗಿ ಬಂದಿರುವ ಕಾರಣದಿಂದ ಬಿಜೆಪಿ ಮತ್ತು ಮಿತ್ರ ಪ್ರಕ್ಷಗಳು ಸಂತಸದಲ್ಲಿದ್ದರೆ, ಇದನ್ನು ಐಎನ್ ಡಿಐಎ ನಾಯಕರು ಯಾರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇಂಡಿಯಾ ಒಕ್ಕೂಟದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನಖರ್ಗೆ ಎಲ್ಲರೂ ತಮ್ಮದೇ ಆದ ಸಮೀಕ್ಷೆಗಳನ್ನು ಹೊರಗಿಡುತ್ತಿದ್ದು, ಅವರ ಪ್ರಕಾರ ಇಂಡಿಯಾ ಒಕ್ಕೂಟ 293 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ಇದು ಮೋದಿ ಮೀಡಿಯಾ ಸಮೀಕ್ಷೆ ಎಂದು ವ್ಯಂಗ್ಯವಾಡಿದ್ದಾರೆ.

ನಿಜ ಹೇಳಬೇಕೆಂದರೆ ಸಮೀಕ್ಷೆಗಳೇ ಅಂತಿಮವಲ್ಲ

ಈ ಸಮೀಕ್ಷೆಗಳೇ ಸತ್ಯ ಎಂಬುದನ್ನು ಯಾರೂ ಹೇಳುತ್ತಿಲ್ಲ. ಎಲ್ಲರೂ ಜೂನ್ 4ರಂದು ಮತದಾರರು ನೀಡಲಿರುವ ತೀರ್ಪನ್ನೇ ಕಾಯುತ್ತಿದೆ. ಅವತ್ತು ಬರುವ ಫಲಿತಾಂಶವೇ ಅಂತಿಮವಾಗಲಿದೆ. ಆದರೆ ಅಲ್ಲಿ ತನಕ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರ ಎಲ್ಲ ಪಕ್ಷಗಳ ನಾಯಕರಿಗಿದೆ. ಎಲ್ಲರೂ ಅವರವರಿಗೆ ಪೂರಕವಾಗುವಂತಹ ಹೇಳಿಕೆಗಳನ್ನೇ ನೀಡುವುದು ಸಹಜ. ಅದರಂತೆಯೇ ದೇಶದಾದ್ಯಂತ ನಾಯಕರ ಅಭಿಪ್ರಾಯಗಳು ಹೊರಬರುತ್ತಿವೆ.

Lok Sabha Election 2024 Why INDIA Union Leaders Are Not Accepting Post Election Polls

ಸದ್ಯದ ಸಮೀಕ್ಷೆಗಳನ್ನು ಗಮನಿಸಿದರೆ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂಬ ಸಂದೇಶ ರವಾನೆಯಾಗುತ್ತಿದೆ. ಅದರಂತೆಯೇ ಆದರೆ ನರೇಂದ್ರಮೋದಿ ಮೂರನೇ ಬಾರಿಗೆ ದೇಶದ ಚುಕ್ಕಾಣಿಯನ್ನು ಹಿಡಿಯಲಿದ್ದಾರೆ. ಈ ಬಾರಿ ಅವರ ಮೇಲೆ ಮತದಾರರ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಅದನ್ನು ಈಡೇರಿಸುವ ಜವಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ. ಇದರ ಜತೆಜತೆಗೆ ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರಮೋದಿಯನ್ನು ಎದುರಿಸ ಬಲ್ಲ ನಾಯಕ ವಿರೋಧ ಪಕ್ಷಗಳಲ್ಲಿ ಸೃಷ್ಟಿಯಾಗದಿರುವುದು ದುರಂತವೇ ಸರಿ.

ಮೋದಿಗೆ ಪರ್ಯಾಯ ನಾಯಕ ಸೃಷ್ಟಿಯಾಗಲಿಲ್ಲ

ಕಳೆದೊಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸೇರಿದಂತೆ ಮೋದಿಯನ್ನು ವಿರೋಧಿಸುವವರೆಲ್ಲರೂ ಒಟ್ಟಾಗಿ ಹೋರಾಟ ಮಾಡುವ ಸಂಕಲ್ಪ ತೊಟ್ಟರಾದರೂ ಅದು ದೊಡ್ಡ ಮಟ್ಟದ ಹೋರಾಟದ ವೇದಿಕೆಯಾಗಲೇ ಇಲ್ಲ. ಇದರ ಜತೆಗೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚಿನ ಪಕ್ಷಗಳು ಸೇರಿ ಒಕ್ಕೂಟ ರಚನೆ ಮಾಡಿದರಾದರೂ ಒಗ್ಗಟ್ಟು ಕಾಣಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸ್ಥಾನ ಹಂಚಿಕೆ ವಿಚಾರದಲ್ಲಿಯೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ಮಣೆ ಹಾಕಲೇ ಇಲ್ಲ.

Lok Sabha Election 2024 Why INDIA Union Leaders Are Not Accepting Post Election Polls

ಐಎನ್ ಡಿಐಎ ನಲ್ಲಿ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿದವು ಹೀಗಾಗಿ ಕಾಂಗ್ರೆಸ್ ಅನಿವಾರ್ಯವಾಗಿ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಿ ತಾನು ಸ್ಪರ್ಧಿಸುವ ಸ್ಥಾನವನ್ನು ಕಡಿಮೆ ಮಾಡಿಕೊಂಡಿತು. ಇನ್ನು ಪ್ರಧಾನಿ ನರೇಂದ್ರ ಮೋದಿಗೆ ಎದುರಾಳಿಯಾಗಿ ಯಾರನ್ನೂ ಬಿಂಬಿಸಲೇ ಇಲ್ಲ. ಒಕ್ಕೂಟದಲ್ಲಿ ಒಮ್ಮತದ ಕೊರತೆಯಿಂದಾಗಿ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವುದಕ್ಕೆ ಟಿಎಂಸಿ ಮತ್ತು ಎಎಪಿ ಸುತಾರಾಂ ಒಪ್ಪಲಿಲ್ಲ.

ಪ್ರಧಾನಿ ಅಭ್ಯರ್ಥಿಯನ್ನೇಕೆ ಆಯ್ಕೆ ಮಾಡಲಿಲ್ಲ

ತಮ್ಮೊಳಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಬದಲಿಗೆ ಸಾಮೂಹಿಕ ನಾಯಕತ್ವದ ಹೋರಾಟದ ಮುಖವಾಡ ಧರಿಸಲಾಯಿತು. ಇದು ಮತದಾರರ ಗೊಂದಲಕ್ಕೆ ಕಾರಣವಾಯಿತು. ನರೇಂದ್ರಮೋದಿಯನ್ನು ವಿರೋಧಿಸುವವರಿಗೆ ಮೋದಿಗೆ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲೇ ಇಲ್ಲ. ಇದು ಎನ್ ಡಿಎಗೆ ಹೆಚ್ಚಿನ ಲಾಭವಾಯಿತು. ಜತೆಗೆ ಇಂಡಿಯಾ ಒಕ್ಕೂಟದ ನಾಯಕರ ಎಡವಟ್ಟು ಹೇಳಿಕೆಗಳು ಮತ್ತು ನಡವಳಿಕೆಗಳು ಮತದಾರರು ದೂರ ಸರಿಯಲು ಕಾರಣವಾಯಿತು ಎಂದರೂ ತಪ್ಪಾಗಲಾರದು.

Lok Sabha Election 2024 Why INDIA Union Leaders Are Not Accepting Post Election Polls

ಒಂದು ವೇಳೆ ಸಮೀಕ್ಷೆಗಳು ನಿಜವಾಗಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ ಮತದಾರರು ಜಾಗೃತರಾಗಿದ್ದಾರೆ. ಅವರು ದೇಶದ ಹಿತಾಸಕ್ತಿಯತ್ತ ಗಮನ ಹರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಧಿಕ್ಕಾರ ಹೇಳುತ್ತಾರೆ ಎಂಬುದು ಸಾಬೀತಾದಂತಾಗುತ್ತದೆ. ರಾಷ್ಟ್ರೀಯತೆಯ ವಿಚಾರದಲ್ಲಿ ಮತದಾರರು ಪ್ರಬುದ್ಧರಾಗಿದ್ದಾರೆ. ಅವರು ದೇಶದ ಆರ್ಥಿಕತೆಯ ಬಗ್ಗೆ ತಿಳುವಳಿಕೆ ಹೊಂದಿದ್ದಾರೆ ಎಂಬುದು ತಿಳಿಯಲಿದೆ.

ಫಲಿತಾಂಶದ ಬಳಿಕ ಕಲಿಯುವುದಿದೆ

ಎಲ್ಲವನ್ನೂ ಈಗಲೇ ಹೇಳುವುದು ಸರಿಯಲ್ಲ. ಮತದಾರರು ಯಾವ ರೀತಿಯ ತೀರ್ಪು ನೀಡಿದ್ದಾರೆ ಎಂಬುದು ಗೊತ್ತಾಗಲು ಫಲಿತಾಂಶ ಬರುವ ತನಕ ಕಾಯಲೇ ಬೇಕಾಗಿದೆ. ಫಲಿತಾಂಶದ ಬಳಿಕ ಯುವ ಮತದಾರರು ಏನನ್ನು ಬಯಸುತ್ತಾರೆ? ರಾಜಕೀಯ ಪಕ್ಷಗಳ ನಾಯಕರು ಎಲ್ಲಿ ಎಡವಿದ್ದಾರೆ? ಎಂಬುದು ತಿಳಿಯಲಿದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+