ಲೋಕಸಭಾ ಚುನಾವಣೆ 2024: ರಾಜಕೀಯ ಪಡಸಾಲೆಯಲ್ಲೀಗ ಮಂಡ್ಯ ಕ್ಷೇತ್ರದ್ದೇ ಚರ್ಚೆ..!
ಮಂಡ್ಯ, ಜನವರಿ 06: ಮಂಡ್ಯ ರಾಜಕೀಯ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿಯೂ ಹಲವು ಸಂದರ್ಭಗಳಲ್ಲಿ ಸುದ್ದಿ ಮಾಡಿದೆ. ಹೀಗಾಗಿ ಚುನಾವಣೆಗಳು ಬಂದಾಗಲೆಲ್ಲ ಎಲ್ಲರ ಕಣ್ಣು ಅತ್ತ ಹೋಗುತ್ತದೆ. 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಪೈಪೋಟಿ ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿತು ಎನ್ನುವುದು ಒಂದು ಕಡೆಯಾದರೆ ಮುಂದೆ ಬರಲಿರುವ ಲೋಕಸಭಾ ಚುನಾವಣೆ ಮಂಡ್ಯದಲ್ಲಿ ಹೇಗೆ ನಡೆಯಬಹುದು ಎಂಬ ಕುತೂಹಲ ಈಗ ರಾಜಕೀಯವಾಗಿ ಎಲ್ಲರನ್ನು ಕಾಡಲಾರಂಭಿಸಿದೆ.
ಕಳೆದೊಂದು ವರ್ಷದ ಹಿಂದೆ ಇದ್ದ ಮಂಡ್ಯ ರಾಜಕೀಯದ ವಾತಾವರಣ ಈಗ ಬದಲಾಗಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಮಂಡ್ಯದ ಏಳು ಸ್ಥಾನಗಳ ಪೈಕಿ ಆರು ಸ್ಥಾನಗಳಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿತ್ತು. ಒಂದು ಸ್ಥಾನದಲ್ಲಿ ಬಿಜೆಪಿಯಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅವಕಾಶವೇ ಇರಲಿಲ್ಲ. ಆದರೆ ಬದಲಾದ ರಾಜಕೀಯದಲ್ಲಿ ಜೆಡಿಎಸ್ ಒಂದು ಸ್ಥಾನ ಉಳಿಸಿಕೊಂಡಿದ್ದರೆ, ಉಳಿದಂತೆ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಆ ಮೂಲಕ ಜೆಡಿಎಸ್‌ನ ಭದ್ರಕೋಟೆ ಛಿದ್ರವಾಗಿದೆ.

ಈಗ ಲೋಕಸಭಾ ಚುನಾವಣೆ ಹತ್ತಿರ ಬಂದಿರುವುದರಿಂದ ಎಲ್ಲರ ಕಣ್ಣು ಮಂಡ್ಯ ರಾಜಕೀಯದತ್ತ ನೆಟ್ಟಿದೆ. ಇದಕ್ಕೆ ಕಾರಣವೂ ಇದೆ. ಕಳೆದ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧವೇ ನಿಂತು ಬ್ರಹತ್ ಹೋರಾಟ ನಡೆಸಿದ್ದರು. ಅವರು ಪಕ್ಷೇತರರಾಗಿದ್ದರೂ ಅವರ ಜತೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ರೈತಸಂಘದ ಕೆಲವು ಕಾರ್ಯಕರ್ತರು ಇದ್ದರು. ಅವರ ಸಮಾವೇಶಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮೂರು ಬಾವುಟಗಳು ರಾರಾಜಿಸಿದ್ದು ರಾಜಕೀಯ ಇತಿಹಾಸದಲ್ಲಿಯೇ ಬರೆದಿಡುವಂತಹದ್ದಾಗಿದೆ.
ಅವತ್ತಿನ ಬೆಂಬಲ ಇವತ್ತಿಗೂ ಇದೆಯಾ?
ಅವತ್ತು ಅವರಿಗೆ ಸಿಕ್ಕಿದ್ದ ಬೆಂಬಲ ಇವತ್ತಿಗೂ ಉಳಿದಿದೆಯಾ? ಎಂಬುದು ಈಗಿರುವ ಪ್ರಶ್ನೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಮಂಡ್ಯದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲದೇ ಹೋದರೂ ಅವರು ಬಿಜೆಪಿಯೊಂದಿಗೆ ಇದ್ದರು. ಬಿಜೆಪಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರ ಬಹುತೇಕ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿದ್ದರು, ಹೀಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸುಮಲತಾ ಅವರಿಗೆ ಟಿಕೆಟ್ ಫಿಕ್ಸ್ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು.
ಆದರೆ ವಿಧಾನಸಭಾ ಚುನಾವಣೆ ಕಳೆದು ಒಂದೆರಡು ತಿಂಗಳಲ್ಲೇ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೊಂದು ಬೆಳವಣಿಗೆಯಾಗಿತ್ತು. ಅದಕ್ಕೆ ಕಾರಣವೂ ಇತ್ತು. ರಾಜ್ಯದಲ್ಲಿ ಅತ್ಯಧಿಕ ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುತ್ತೇವೆ ಎಂದು ನಂಬಿದ್ದ ಜೆಡಿಎಸ್ ಸೋಲು ಕಂಡಿತ್ತು. ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತ್ತು. ಇದಕ್ಕೆ ಕಾರಣ ಕಾಂಗ್ರೆಸ್ ಗಿಂತಲೂ ಬಿಜೆಪಿ ಎನ್ನುವುದು ಜೆಡಿಎಸ್‌ಗೆ ಗೊತ್ತಾಗಿತ್ತು. ಜೊತೆಗೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ ಇಂಡಿಯಾ ಒಕ್ಕೂಟದಲ್ಲೂ ಜೆಡಿಎಸ್‌ಗೆ ಆಹ್ವಾನ ಇರಲಿಲ್ಲ.

ಊಹಾಪೋಹದ ಸುದ್ದಿಗಳಿಗೆ ಬರವಿಲ್ಲ
ಇದೆಲ್ಲ ಬೆಳವಣಿಗೆ ನಡುವೆ ಸೆಪ್ಟಂಬರ್ ವೇಳೆಗೆ ಎನ್‌ಡಿಎ ಒಕ್ಕೂಟವನ್ನು ಜೆಡಿಎಸ್ ಸೇರುವ ಮೂಲಕ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುದ್ದಿ ಹೊರ ಬಂದಿತು. ಈ ಸಂದರ್ಭ ಹೆಚ್ಚು ಚರ್ಚೆಗೆ ಬಂದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಸಂಸದೆ ಸುಮಲತಾ ಅವರ ಮುಂದಿನ ನಡೆ ಏನು ಎಂಬುದು. ಈ ಕುರಿತಂತೆ ಇದುವರೆಗೆ ಯಾವುದೇ ತೀರ್ಮಾನಗಳು ಬಿಜೆಪಿಯಿಂದಾಗಲೀ, ಜೆಡಿಎಸ್ ನಿಂದಾಗಲೀ ಹೊರ ಬಿದ್ದಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ನಿಖಿಲ್ ಅಥವಾ ಹೆಚ್.ಡಿ.ಕುಮಾರಸ್ವಾಮಿ ಅವರು ಅಖಾಡಕ್ಕಿಳಿಯುತ್ತಾರೆ ಎಂಬ ಊಹಾಪೋಹ ಸುದ್ದಿಗಳಿಗೆ ಬರವಿಲ್ಲ. ಸಂಸದೆ ಸುಮಲತಾ ಅವರು ಮಾತ್ರ ನಾನು ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ ಎಂಬ ಮಾತುಗಳನ್ನಾಡಿದ್ದಾರೆ. ಆದರೆ ಯಾವ ಪಕ್ಷದಿಂದ? ಅಥವಾ ಪಕ್ಷೇತರರಾಗಿಯಾ? ಎಂಬುದನ್ನು ಬಹಿರಂಗಗೊಳಿಸಿಲ್ಲ.
ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವುದೇ ಸವಾಲ್
ಮುಂದಿನ ಲೋಕಸಭಾ ಚುನಾವಣೆ ಸುಮಲತಾ ಅವರಿಗೆ ಅಂದುಕೊಂಡಷ್ಟು ಸುಲಭವಾಗಿ ಉಳಿದಿಲ್ಲ. 2019ರ ಚುನಾವಣೆಯಂತೆ ಈ ಚುನಾವಣೆ ನಡೆಯುವುದಿಲ್ಲ. ಅವತ್ತು ಅವರ ಮೇಲೆ ಅನುಕಂಪದ ಅಲೆಯಿತ್ತು. ಕುಟುಂಬ ರಾಜಕಾರಣ ವಿರುದ್ಧದ ಆಕ್ರೋಶ, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಹಕಾರವಿತ್ತು. ಜೊತೆಗೆ ಮತದಾರರು ಅವರನ್ನು ಒಬ್ಬ ರಾಜಕಾರಣಿಯಂತೆ ನೋಡದೆ ನಮ್ಮೂರಿನ ಹೆಣ್ಣುಮಗಳಂತೆ ಭಾವಿಸಿದ್ದರು.

ಇವತ್ತು ಸುಮಲತಾ ಕೂಡ ರಾಜಕಾರಣಿಯೇ ಆಗಿದ್ದಾರೆ. ಜನ ಕೂಡ ಹಾಗೆಯೇ ನೋಡುತ್ತಾರೆ. ಹೀಗಾಗಿ ಸಂಸದರು ತಮಗೇನು ಮಾಡಿದ್ದಾರೆ? ತಮ್ಮ ಜಿಲ್ಲೆಗೆ ಯಾವ ಯೋಜನೆ ತಂದಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆಲ್ಲ ಉತ್ತರ ಹೇಳಬೇಕಾಗಿದೆ. ಜತೆಗೆ ಖರ್ಚು ವೆಚ್ಚವನ್ನು ಭರಿಸಿ ಚುನಾವಣೆ ಎದುರಿಸಬೇಕಾಗಿದೆ. ಹೀಗಾಗಿ ಅವರಿಗೆ ರಾಜಕೀಯ ಪಕ್ಷವೊಂದರ ಸಹಕಾರ ಅಗತ್ಯವಾಗಿ ಬೇಕಾಗಿದೆ. ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲುವುದು ಸವಾಲ್ ಆಗಿದೆ. ಹೀಗಾಗಿ ಮುಂದಿನ ಬೆಳವಣಿಗೆ ಏನು ಎಂಬುದು ತಿಳಿಯಬೇಕಾದರೆ ಇನ್ನೊಂದಷ್ಟು ದಿನ ಕಾಯಲೇಬೇಕಾಗಿದೆ.












Click it and Unblock the Notifications