Sumalatha: ಅಂದು ಮಗನ ವಿರುದ್ಧ ಕುಸ್ತಿ, ಇಂದು ಅಪ್ಪನ ಜೊತೆ ದೋಸ್ತಿ: ಏನಾಗುತ್ತೇ ಮಂಡ್ಯ ಸೊಸೆಯ ಪರಿಸ್ಥಿತಿ
ಮಂಡ್ಯ, ಏಪ್ರಿಲ್ 08: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ರಾಜಕಾರಣ ಮಾತ್ರವಲ್ಲ ಮಂಡ್ಯದ ರಾಜಕಾರಣ, ದೆಹಲಿ ರಾಜಕೀಯದಲ್ಲೂ ಹೆಚ್ಚು ಸದ್ದು ಮಾಡಿತ್ತು. 2019 ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸುಮಲತಾ ಅಂಬರೀಶ್ ಮಾಡಿದ್ದು, ಇವರಿಬ್ಬರ ನಡುವೆ ನಡೆದ ಲೋಕಸಭಾ ಕುರುಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದರು.
ಹೌದು, 2019 ಲೋಕಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ಪ್ರತಿಷ್ಠೆಯಾಗಿದ್ದ ಮಂಡ್ಯ ಲೋಕಸಭಾ ಕುರುಕ್ಷೇತ್ರದ ಚಕ್ರವ್ಯೂಹವನ್ನು ಬೇಧಿಸಲಾಗದೆ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಂಡ್ಯ ಸೊಸೆಗೆ ಸ್ವಾಭಿಮಾನಿ ಅಸ್ತ್ರವೇ ಕೈ ಹಿಡಿದಿತ್ತು. 2019 ರ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರ ರಚಿಸಿದ್ದು, ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ವರ್ಧೆ ಮಾಡಿದ್ದರು.

ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿತ್ತು. 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸುಮಲತಾ ಅಂಬರೀಶ್ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 1,25,876 ಮತಗಳ ಗೆಲುವಿನ ಅಂತರದಿಂದ ಗೆದ್ದು, ಬರೋಬ್ಬರಿ 7,03,660 ಮತಗಳನ್ನು ಗಳಿಸಿದರು. 5,77,784 ಮತಗಳನ್ನು ಪಡೆದ ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಹೀನಾಯವಾಗಿ ಸೋಲು ಅನುಭವಿಸಿದ್ದರು.
ಇಂದು ಕುಮಾರಸ್ವಾಮಿಗೆ ಬೆಂಬಲ ಕೊಟ್ಟ ಸುಮಲತಾ
ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಮಂಡ್ಯ ಕ್ಷೇತ್ರವನ್ನ ಪಡೆಯುವಲ್ಲಿ ಕೊನೆಗೂ ಜೆಡಿಎಸ್ ನಾಯಕರು ಯಶಸ್ವಿಯಾಗಿದ್ದು, ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದ್ದಾರೆ. ಅಂದು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಚುನಾವಣಾ ಕಣದಲ್ಲಿ ಕುಸ್ತಿ ನಡೆಸಿದ್ದ ಮಂಡ್ಯ ಹಾಲಿ ಸಂಸದೆ ಸುಮಲತಾ, ಇಂದು ಕುಮಾರಸ್ವಾಮಿ ಅವರ ಜೊತೆಗೆ ದೋಸ್ತಿ ಮಾಡಿಕೊಂಡಿದ್ದಾರೆ.

ಮಂಡ್ಯ ಕ್ಷೇತ್ರವನ್ನ ಪಡೆಯುತ್ತಿದ್ದಂತೆ ಸುಮಲಿತಾ ಅವರನ್ನ ಖುದ್ದಾಗಿ ಭೇಟಿ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಬಿಜೆಪಿ ಹೈಕಮಾಂಡ್ ನಾಯಕರ ಮಾತಿನಂತೆ ಸುಮಲತಾ ಅಂಬರೀಶ್ ಅವರು ಏಪ್ರಿಲ್ 5 ರಂದು ಬಿಜೆಪಿ ಸೇರ್ಪಡೆಯಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಮಂಡ್ಯದಿಂದ ಸ್ವತಂತ್ರವಾಗಿ ಸ್ಪರ್ಧಿಸಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.
ಸುಮಲತಾ ಅಂಬರೀಶ್ ಅವರನ್ನ ಮನವೊಲಿಸುವಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಯಶಸ್ವಿಯಾಗಿದ್ದು, ಮುನಿಸು ಮರೆತು ಮೈತ್ರಿ ಧರ್ಮ ಪಾಲಿಸಲು ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಕುಮಾರಸ್ವಾಮಿ ಅವರು ಸುಮಲತಾ ಅವರ ಜೊತೆಗೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ನಿಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸುಮಲತಾ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿರುವ ಕುಮಾರಸ್ವಾಮಿ ಅವರು ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲಿಸಿ. ಮುಂದಿನ ದಿನಗಳಲ್ಲಿ ಪುತ್ರ ಅಭಿಷೇಕ್ ಗೆ ಮಂಡ್ಯ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವ ಮೂಲಕ ರಾಜಕೀಯ ಭವಿಷ್ಯವನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಸೋಲಿಸಲು ನನಗೆ ನೀವು ಸಹಕಾರಿಸಿ, ಅಂಬರೀಶ್ ಅವರಿಗೆ ರಾಜಕೀಯವಾಗಿ ಕಾಂಗ್ರೆಸ್ ಅನ್ಯಾಯ ಮಾಡಿದೆ. ನಾವು ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ರೆ ಮಂಡ್ಯ ಕಾಂಗ್ರೆಸ್ ನಿರ್ನಾಮ ಮಾಡಬಹುದು ಎಂದು ಹೇಳಿದ್ದಾರೆ.
ನಿಮ್ಮ ರಾಜಕೀಯ ಭವಿಷ್ಯವು ನಮಗೆ ಮುಖ್ಯ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿ, ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿಮ್ಮ ಪರವಾಗಿ ಮನವಿ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಒಟ್ನಲಿ, 2019 ರ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರದ ಮೂಲಕ ಗೆದ್ದ ಸುಮಲತಾ ಇಂದು ಕುಮಾರಸ್ವಾಮಿ ಅವರ ಪರವಾಗಿಯೇ ಪ್ರಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications