ಲೋಕಸಭಾ ಚುನಾವಣೆ: ಕರ್ನಾಟಕದತ್ತ ದೃಷ್ಟಿನೆಟ್ಟ ಎನ್‌ಡಿಎ-ಐಎನ್‌ಡಿಐಎ ನಾಯಕರು!

ಬೆಂಗಳೂರು, ಜನವರಿ 01: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳಿಗೆ ಅದರಲ್ಲೂ ರಾಷ್ಟ್ರೀಯ ಪಕ್ಷಗಳಿಗೆ ಹೊಸವರ್ಷ ಹತ್ತು ಹಲವು ಸವಾಲಿನ ವರ್ಷವಾಗಿ ಮಾರ್ಪಡುತ್ತಿದೆ. ದೇಶದಲ್ಲಿ ರಾಜಕೀಯ ಪಕ್ಷಗಳು ಐಎನ್‌ಡಿಐಎ ಮತ್ತು ಎನ್‌ಡಿಎ ಎಂಬ ಎರಡು ಬೃಹತ್ ಶಕ್ತಿಗಳಾಗಿ ಅಖಾಡಕ್ಕಿಳಿದಿವೆ. ಮತದಾರರು ಯಾರ ಮೇಲೆ ಒಲವು ತೋರುತ್ತಾರೋ ಗೊತ್ತಿಲ್ಲ. ಆದರೆ ಮತದಾರರನ್ನು ಓಲೈಸುವ ಕಾರ್ಯಗಳಂತು ಎಗ್ಗಿಲ್ಲದೆ ನಡೆಯಲಿದೆ.

ಕರ್ನಾಟಕದ ಮಟ್ಟಿಗೆ ರಾಜಕೀಯವಾಗಿ ಹೇಳುವುದಾದರೆ ಕಳೆದ ವರ್ಷದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಹಿಯನ್ನು ಅನುಭವಿಸಿದರೆ, ಕಾಂಗ್ರೆಸ್ ಪಾಲಿಗೆ ಸಿಹಿ ಅನುಭವವಾಗಿದೆ. ಹೋರಾಟ, ಪಂಚ ಗ್ಯಾರಂಟಿಗಳು, ಮತ್ತೊಂದಷ್ಟು ತಂತ್ರಗಳಿಂದ ಅಧಿಕಾರ ಹಿಡಿದ ಕಾಂಗ್ರೆಸ್ ರಾಜ್ಯದಲ್ಲಿ 136 ಸ್ಥಾನಗಳನ್ನು ಪಡೆಯುವ ಮೂಲಕ ಭದ್ರ ಅಡಿಪಾಯದೊಂದಿಗೆ ಆಡಳಿತ ನಡೆಸುತ್ತಿದೆ.

ಬಿಜೆಪಿ ಆಡಳಿತದಲ್ಲಿ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳು, ಒಳಜಗಳ, ಗುಜರಾತ್ ಮಾದರಿ ಅಳವಡಿಕೆಗೆ ಮುಂದಾಗಿದ್ದು, ಹಿರಿಯ ನಾಯಕರ ಕಡಗಣನೆ, ಒಂದಷ್ಟು ವಿವಾದಗಳು ಹೀಗೆ ಒಂದು ರಾಜಕೀಯ ಪಕ್ಷ ನೆಲಕಚ್ಚಲು ಏನೆಲ್ಲ ಬೇಕೋ ಅದೆಲ್ಲವೂ ಇದ್ದಿದ್ದರಿಂದ ಬಿಜೆಪಿ ಚುನಾವಣೆಯಲ್ಲಿ 66 ಸ್ಥಾನ ಪಡೆದು ಅಧಿಕಾರ ಕಳೆದುಕೊಂಡು ವಿರೋಧಪಕ್ಷದಲ್ಲಿ ಕೂರುವಂತಾಯಿತು.

Lok Sabha Election 2024: NDA-INDIA Leaders Focusing On Karnataka Voters

ಲೋಕಾ ಚುನಾವಣೆ 'ಕೈ' ನಾಯಕರಿಗೆ ಸವಾಲ್

ಇನ್ನು ಕಿಂಗ್ ಮೇಕರ್ ಕನಸು ಕಾಣುತ್ತಿದ್ದ ಜೆಡಿಎಸ್ 19ಕ್ಕೆ ತೃಪ್ತಿಪಡುವಂತಾಯಿತು. ರಾಜ್ಯದ ಮಟ್ಟಿಗೆ 135 ಸ್ಥಾನಗಳನ್ನು ಪಡೆಯುವುದು ಕಾಂಗ್ರೆಸ್ ಗೆ ಸುಲಭದ ಮಾತಾಗಿರಲಿಲ್ಲ. ಆದರೆ ಪಕ್ಷದ ಸಂಘಟನೆ ಜತೆಗೆ ರಾಜಕೀಯ ತಂತ್ರಗಳನ್ನು ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಫಲರಾಗಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲವನ್ನೂ ಮೀರಿ ಒಟ್ಟಾಗಿ ಮತದಾರರ ಮುಂದೆ ಹೋಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದುಹೋಗಿದೆ. ಚುನಾವಣೆ ವೇಳೆ ಭರಪೂರ ಭರವಸೆಗಳನ್ನು ನೀಡಿದ್ದರಾದರೂ ಸದ್ಯ ಪಂಚ ಗ್ಯಾರಂಟಿಗಳನ್ನು ಆರು ತಿಂಗಳೊಳಗೆ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಘೋಷಣೆಯನ್ನು ಆಡಳಿತ ನಡೆಸುವ ನಾಯಕರು ಮಾಡುತ್ತಿದ್ದಾರೆ. ಅದು ಏನೇ ಇರಲಿ. ಇನ್ಮುಂದೆ ಇರುವ ಸವಾಲ್ ಗಳನ್ನು ಎದುರಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಬೇಕಾಗಿದೆ.

Lok Sabha Election 2024: NDA-INDIA Leaders Focusing On Karnataka Voters

ಬಿಜೆಪಿ, ಕಾಂಗ್ರೆಸ್‌ಗೆ ಕರ್ನಾಟಕವೇ ಭರವಸೆ

ಈಗಾಗಲೇ ಐಎನ್ ಡಿಐಎ ಒಕ್ಕೂಟ ರಚನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ನ ಹಿರಿಯ ನಾಯಕರು ದಕ್ಷಿಣ ಕಡೆಗೆ ಮುಖಮಾಡಿದ್ದು ಅವರಿಗೆ ಈಗ ಭರವಸೆ ಇರುವುದು ಕರ್ನಾಟಕ ಮೇಲೆ ಮಾತ್ರ. ಅದನ್ನು ಹೊರತುಪಡಿಸಿದರೆ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿದಿರುವ ತೆಲಂಗಾಣದ ಬಗ್ಗೆ ಸ್ವಲ್ಪ ಮಟ್ಟಿಗೆ ಭರವಸೆಯಿದೆ.

ಕೇಂದ್ರದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಒಂದಷ್ಟು ಸ್ಥಾನಗಳನ್ನು ತಂದುಕೊಂಡುವ ರಾಜ್ಯವಿದ್ದರೆ ಅದು ಕರ್ನಾಟಕ ಮಾತ್ರ ಎಂಬ ನಿರೀಕ್ಷೆಯಿದೆ. ಹೀಗಾಗಿ ರಾಜ್ಯದ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸವಿಟ್ಟಿರುವ ಹೈಕಮಾಂಡ್ ಕನಿಷ್ಟ 20 ಸ್ಥಾನಗಳನ್ನು ಗೆದ್ದುಕೊಂಡು ಬನ್ನಿ ಎಂಬ ಸಂದೇಶವನ್ನು ರವಾನಿಸಿ ಟಾರ್ಗೆಟ್ ನೀಡಿದೆ. ಇದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ದೊಡ್ಡದೊಂದು ಜವಬ್ದಾರಿಯಾಗಿದ್ದು, ಅದನ್ನು ನಿಭಾಯಿಸುವುದು ಸುಲಭವಾಗಿ ಉಳಿದಿಲ್ಲ.

Lok Sabha Election 2024: NDA-INDIA Leaders Focusing On Karnataka Voters

ರಾಜ್ಯದಲ್ಲಿ ಮೋದಿ ಜಾದು ನಡೆಯುತ್ತಾ?

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗಮನಿಸಿದರೆ ಎರಡು ಚುನಾವಣೆಗಳನ್ನು ಮತದಾರರು ನೋಡುವ ರೀತಿಯೇ ಭಿನ್ನವಾಗಿದೆ. ಇದಕ್ಕೆ ಫಲಿತಾಂಶಗಳು ಸಾಕ್ಷಿಯಾಗಿವೆ. ಅದರಲ್ಲೂ ನರೇಂದ್ರಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯೊಂದಿಗೆ ನಡೆದ 2014ರ ಲೋಕಸಭಾ ಚುನಾವಣೆ ಮತ್ತು ಪ್ರಧಾನಿಯಾದ ಬಳಿಕ ನಡೆದ 2019ರ ಚುನಾವಣೆಗಳನ್ನು ಗಮನಿಸಿದರೆ ಫಲಿತಾಂಶದ ಗ್ರಾಪ್ ಮೇಲೇರಿದ್ದನ್ನು ಕಾಣಬಹುದಾಗಿದೆ.

ಈ ಹಿಂದೆ ಎರಡು ಲೋಕಸಭಾ ಚುನಾವಣೆ ನಡೆದಾಗಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರಲಿಲ್ಲ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಆದರೂ ಬಿಜೆಪಿ ಅತ್ಯಧಿಕ ಸ್ಥಾ ನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೆ ಕಾರಣ ಮೋದಿ ಮೇನಿಯಾ ಎಂದರೂ ತಪ್ಪಾಗಲಾರದು. ಈ ಬಾರಿಯೂ ಮೋದಿ ಜಾದು ಕೆಲಸ ಮಾಡುತ್ತಾ ಗೊತ್ತಿಲ್ಲ.?

Lok Sabha Election 2024: NDA-INDIA Leaders Focusing On Karnataka Voters

ಪಂಚ ಗ್ಯಾರಂಟಿ 'ಕೈ' ಹಿಡಿಯಬಹುದಾ?

ಸಾಮಾನ್ಯವಾಗಿ ಮತದಾರರ ಪೈಕಿ ಮಹಿಳೆಯರು ಮತ್ತು ಯುವ ಜನತೆ ಮೋದಿ ಕಡೆಗಿದ್ದು ಅವರನ್ನು ಕಾಂಗ್ರೆಸ್ ಕಡೆಗೆ ತಿರುಗಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ನಾಯಕರು ಪಂಚ ಗ್ಯಾರಂಟಿ ಅದರಲ್ಲೂ ಗೃಹಲಕ್ಷ್ಮಿ, ಶಕ್ತಿಯೋಜನೆ ಮತ್ತು ಯುವನಿಧಿ ಮೂಲಕ ಮಾಡಿದ್ದಾರೆ ಎನ್ನುವುದು ಕಾಂಗ್ರೆಸ್ ನ್ನು ಬೆಂಬಲಿಸುವವರ ಅಭಿಪ್ರಾಯವಾಗಿದೆ. ಸರ್ಕಾರ ಮಾಡಿರುವ ಯೋಜನೆಯಿಂದ ಮಹಿಳೆಯರಿಗೆ ಮತ್ತು ಯುವ ಜನತೆಗೆ ಅನುಕೂಲವಾಗಿದೆ. ಹೀಗಾಗಿ ಅವರೆಲ್ಲರೂ ಕಾಂಗ್ರೆಸ್ ಜತೆಗಿರುತ್ತಾರೆ ಎಂಬ ನಂಬಿಕೆಯೂ ಅವರಲ್ಲಿದೆ.

ಒಂದು ವೇಳೆ ರಾಜ್ಯ ಸರ್ಕಾರ ನೀಡಿದ ಯೋಜನೆಗಳು ಮತಗಳಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಗೆ ಅದು ವರವಾಗುವುದಲ್ಲದೆ, ಅದು ಮುಂದಿನ ವಿಧಾನಸಭಾ ಚುನಾವಣೆಗೂ ಭದ್ರ ಓಟ್ ಬ್ಯಾಂಕ್ ಆಗಲಿದೆ. ಆದರೆ ಪ್ರತಿ ಚುನಾವಣೆಯಲ್ಲಿ ಮತದಾರರು ನೋಡುವ ರೀತಿ ನೀತಿಗಳು ವಿಭಿನ್ನವಾಗಿರುತ್ತವೆ. ಹೀಗಾಗಿ ಕೆಲವೊಮ್ಮೆ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಈ ಬಾರಿ ಮತದಾರರು ಏನನ್ನು ನೋಡಿ ಮತಹಾಕುತ್ತಾರೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.

ಇನ್ಮುಂದೆ ರಾಜಕಾರಣಿಗಳದ್ದೇ ಮೆರವಣಿಗೆ

ಲೋಕಸಭಾ ಚುನಾವಣೆ ನಡೆಯುವಾಗ ಮತದಾರರು ಏನನ್ನು ಗಮನಿಸಿ ಮತ ನೀಡಬಹುದು? ಎಂಬುದನ್ನು ಅಷ್ಟು ಸುಲಭವಾಗಿ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಮತದಾರರ ಪೈಕಿ ಎರಡು ವರ್ಗವಿದೆ. ಒಂದು ವರ್ಗ ಪಕ್ಷ ನೋಡಿ ಮತ ನೀಡುತ್ತದೆ. ಮತ್ತೊಂದು ವರ್ಗದವರು ಪರಿಸ್ಥಿತಿ ಅರಿತು, ವಿಶ್ಲೇಷಣೆ ಮಾಡಿ, ಅಳೆದು ತೂಗಿ ಮತ ನೀಡುತ್ತದೆ. ಹೀಗಾಗಿ ಎರಡನೇ ವರ್ಗದ ಮತದಾರರು ನಿರ್ಣಾಯಕರಾಗಿ ಕಂಡು ಬರುತ್ತಾರೆ.

ಹೊಸವರ್ಷದ ಆರಂಭದಿಂದಲೇ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುವುದರಿಂದ ಇನ್ಮುಂದೆ ರಾಜಕೀಯ ಜಾತ್ರೆ ಶುರುವಾಗಲಿದ್ದು, ರಾಜಕಾರಣಿಗಳ ಮೆರವಣಿಗೆ ನಡೆಯಲಿದೆ. ಪ್ರಚಾರ, ಸಮಾವೇಶ, ರೋಡ್ ಶೋ ಹೀಗೆ ರಾಜಕೀಯ ಕಾರ್ಯಕ್ರಮಗಳಲ್ಲಿಯೇ ವರ್ಷದ ಆರಂಭ ಶುರುವಾಗಲಿದೆ. ಅಂತಿಮವಾಗಿ ಈ ವರ್ಷ ದೇಶದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಕುತೂಹಲದಲ್ಲಿಯೇ ಮುನ್ನಡೆಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+