Lok Sabha Election Survey: ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಖುಷಿ ಕೊಟ್ಟ ಲೋಕಪೋಲ್ ಸಮೀಕ್ಷೆ!
ಬೆಂಗಳೂರು, ಮಾರ್ಚ್ 31: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಇರುವ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಇಪ್ಪತ್ತೈದು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಒಬ್ಬ ಪಕ್ಷೇತರ ಸಂಸದರಿದ್ದಾರೆ. ಆದರೆ, ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದೆ.
ಕರ್ನಾಟಕ ಲೋಕಸಭಾ ಚುನಾವಣೆ ಕುತೂಹಲ ಕೆರಳಿಸಿರುವುದಕ್ಕೆ ಮುಖ್ಯ ಕಾರಣ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಾಖಲಿಸಿರುವ ಭರ್ಜರಿ ಜಯ. ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಾದರೂ ಗೆದ್ದು ಬೀಗಬೇಕು ಎಂದು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಇಷ್ಟು ದಿನ ಬಂದಿರುವ ಸಮೀಕ್ಷೆಗಳು ಕೂಡ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಕಾಂಗ್ರೆಸ್‌ಗೆ ಖುಷಿ ಕೊಟ್ಟ ಸಮೀಕ್ಷೆ!
ಬಿಜೆಪಿಯ 25 ಸಂಸದರಿರುವ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಪಾರುಪತ್ಯ ಸಾಧಿಸಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಅದಕ್ಕೆ ತಕ್ಕಂತೆ ಬಹುತೇಕ ಸರ್ವೆಗಳು ಬಿಜೆಪಿ -ಜೆಡಿಎಸ್ ಮೈತ್ರಿ 23 ರಿಂದ 25 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ 4-5 ಕ್ಷೇತ್ರಗಳಲ್ಲಿ ಗೆಲುವ ಸಾಧ್ಯತೆಯುದೆ ಎಂದು ಹೇಳಿದ್ದವು. ಇಂಡಿಯಾ ಟಿವಿಯ ಸಮೀಕ್ಷೆ ಕೂಡ ಬಿಜೆಪಿ 22 ಕ್ಷೇತ್ರಗಳನ್ನು, ಕಾಂಗ್ರೆಸ್ 4 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದಿತ್ತು.
ಈಗ ಪ್ರಕಟವಾಗಿರುವ ಲೋಕಪೋಲ್ (Lok Poll ) ಸರ್ವೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ -ಜೆಡಿಎಸ್ ಮೈತ್ರಿ ಸಮನಾದ ಸ್ಥಾನಗಳನ್ನು ಗೆಲ್ಲಲಿವೆ ಎಂಬ ಅಂಶ ಬೆಳಕಿಗೆ ಬಂದಿದೆ. ಲೋಕಪೋಲ್ ಗ್ರೌಂಡ್ ರಿಪೋರ್ಟ್ ಪ್ರಕಾರ ಕಾಂಗ್ರೆಸ್ 12 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 10 ರಿಂದ 12, ಜೆಡಿಎಸ್ ಒಂದು ಅಥವಾ ಎರಡು ಸ್ಥಾನ ಗೆಲ್ಲಬಹುದು ಎಂದಿದೆ.
ಒಟ್ಟು ಸೀಟು 28
* ಕಾಂಗ್ರೆಸ್ - 12 - 14
* ಬಿಜೆಪಿ 10 - 12
* ಜೆಡಿಎಸ್ 1 - 2

ಇನ್ನು, ಈ ದಿನ ನಡೆಸಿದ ಮೆಗಾ ಸಮೀಕ್ಷೆಯ ಪ್ರಕಾರವೂ ಕರ್ನಾಟಕದಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದಿತ್ತು. ಐದು ಗ್ಯಾರಂಟಿಗಳನ್ನ ಕೊಟ್ಟಿರುವ ಕಾಂಗ್ರೆಸ್ ರಾಜ್ಯದ 28 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ 11 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ವರದಿ ಮಾಡಿತ್ತು.
ಲೋಕಸಭಾ ಚುನಾವಣೆ 2024 : ಕರ್ನಾಟಕ
ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತ, ಮೇ 07 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಏಣಿಕೆ ನಡೆಯಲಿದ್ದು ಫಲಿತಾಂಶ ಹೊರಬೀಳಲಿದೆ.
ದಕ್ಷಿಣ ಭಾರತದಲ್ಲಿ 'ಇಂಡಿಯಾ' ಬಣದ್ದೇ ಪಾರುಪತ್ಯ!
ಇನ್ನು, ದಕ್ಷಿಣ ಭಾರತದಲ್ಲಿ ಒಟ್ಟು 132 ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ- 78 ರಿಂದ 82, ಎನ್‌ಡಿಎ ಒಕ್ಕೂಟ 28 ರಿಂದ 34, ವೈಎಸ್‌ಆರ್‌ಸಿಪಿ 10 ರಿಂದ 11, ಎಐಎಡಿಎಂಕೆ 1 ರಿಂದ 3 ಮತ್ತು ಇತರರು 1 ರಿಂದ 3 ಸ್ಥಾನಗಳನ್ನು ಗೆಲ್ಲಬಹುದು ಎಂದು ಲೋಕ್‌ಪೋಲ್ ಸರ್ವೆ ಭವಿಷ್ಯ ನುಡಿದಿದೆ.












Click it and Unblock the Notifications