'ಒಬ್ಬ ಹೆಣ್ಣು ಮಗಳಿಗೆ ಅನ್ಯಾಯ': ಟಿಕೆಟ್ ಕೈ ತಪ್ಪಿದ್ದಕ್ಕೆ ಗಳಗಳನೆ ಅತ್ತ ವೀಣಾ ಕಾಶಪ್ಪನವರ್
ಬೆಂಗಳೂರು, ಮಾರ್ಚ್ 20: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ ಜೋರಾಗಿದೆ. ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮವಾಗಿದ್ದು, ಉಳಿದ ಕ್ಷೇತ್ರಗಳ ಟಿಕೆಟ್‌ಗಾಗಿ ಆಕಾಂಕ್ಷಿಗಳು ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೂ ಟಿಕೆಟ್ ಫೈಟ್ ಜೋರಾಗಿದ್ದು, ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ವೀಣಾ ಕಾಶಪ್ಪನವರ್ ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದು ಕೆಲವು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಇದೀಗ ಟಿಕೆಟ್‌ಗಾಗಿ ಹೈಮಾಂಡ್ ನಾಯಕರನ್ನು ಭೇಟಿಯಾದ ಅವರಿಗೆ ಶಾಂಕಿಗ್ ವಿಚಾರ ಕಾದಿತ್ತು.

ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಂದ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಕೈ ತಪ್ಪಿರುವುದು ಬಹುತೇಕ ಖಚಿತವಾಗುತ್ತಿದ್ದಂತೆ ವೀಣಾ ಕಾಶಪ್ಪನವರ್ ಗಳ ಗಳನೆ ಅಳುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
"ನನಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನನ್ನ ಜಿಲ್ಲೆಯ ಜನ ನನ್ನ ಮೇಲಿಟ್ಟಿರುವ, ಪ್ರೀತಿ, ಅಭಿಮಾನ ಎಂದು ಭಾವಿಸುತ್ತೇನೆ. ನನಗಿರುವುದೇ ಇದು ಕೊನೆ ಒಂದು ಅವಕಾಶ. ನನ್ನ ಜಿಲ್ಲೆಯ ಜನರು ನನ್ನನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಕೊನೆಯ ಅವಕಾಶ. ಇದನ್ನು ಇವರು ಈ ರೀತಿ ಮಾಡಿದ್ದಾರೆ ಅಂದರೆ ಒಬ್ಬ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ ಹಾಗೆ" ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
"ಪ್ರತಿ ಶಾಸಕರ ಚುನಾವಣಾ ಪ್ರಚಾರದಲ್ಲಿ ನಾನು ಸಂಪೂರ್ಣವಾಗಿ ಭಾಗಿಯಾಗಿದ್ದೇನೆ. ಕಳೆದ ಬಾರಿ ಸ್ಪರ್ಧೆಗೆ ಯಾರು ಮುಂದೆ ಬರಲಿಲ್ಲ. ಕಳೆದ ಬಾರಿ ನಮ್ಮ ಶಾಸಕರು ಇರಲಿಲ್ಲ. ಕಷ್ಟದ ಸಮಯದಲ್ಲಿ, ಸೋಲುವ ಸಮಯದಲ್ಲಿ ನಾನು ಸ್ಪರ್ಧಿಸಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಐದು ಮಂದಿ ನಮ್ಮ ಶಾಸಕರಿದ್ದಾರೆ. ಈಗ ನನಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದಾರೆ. ಪಕ್ಷಕ್ಕೆ ಕೆಲಸ ಮಾಡಿದವರನ್ನು ಪರಿಗಣಿಸುತ್ತಿಲ್ಲ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಇನ್ನು ಸಂಯುಕ್ತ ಶಿವಾನಂದ ಪಾಟೀಲ್ ಹೆಸರು ಕೇಳಿ ಬಂದ ವಿಚಾರವಾಗಿ ಮಾತನಾಡಿದ ಅವರು, "ಈ ಹೆಸರು ಯಾಕೆ ಬಂತು ಎಂದು ಅವರನ್ನೇ ನೀವು ಕೇಳಬೇಕು. ಎಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಎಲ್ಲಿ ಕೆಲಸ ಮಾಡಿದ್ದಾರೆ. ಯಾವ ಗ್ರಾಮಕ್ಕೆ ಹೋಗಿದ್ದಾರೆ. ಪಕ್ಕದ ಜಿಲ್ಲೆಯವರಿಗೆ ಯಾವ ಮಾನದಂಡಲ್ಲಿ ನೀಡಿದ್ದಾರೋ ಗೊತ್ತಿಲ್ಲ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದೆ ಮುಂದಿನ ವಿಚಾರ ನನಗೆ ಗೊತ್ತಿಲ್ಲ" ಎಂದು ಕಣ್ಣೀರು ಹಾಕಿದ್ದಾರೆ.












Click it and Unblock the Notifications