ಲೋಕಸಭಾ ಚುನಾವಣೆಯ ಗೆಲುವಿಗಾಗಿ ಕೈಪಡೆ ತಂತ್ರ..ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ
ಬೆಂಗಳೂರು, ಆಗಸ್ಟ್ 07: ಲೋಕಸಭಾ ಚುನಾವಣೆಗೆ ಕನಿಷ್ಟ ಹತ್ತು ತಿಂಗಳಷ್ಟೆ ಬಾಕಿಯಿದೆ. ಹೀಗಾಗಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಏನೇ ಮಾಡಿದರೂ ಅದರಿಂದ ಚುನಾವಣೆಗೆ ಯಾವ ರೀತಿಯಲ್ಲಿ ಅನುಕೂಲವಾಗುತ್ತದೆ ಮತ್ತು ಎಷ್ಟು ಮತ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಹೇಗಾದರೂ ಮಾಡಿ ಇಪ್ಪತ್ತು ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಿದ್ದಂತೆ ಕಾಣಿಸುತ್ತಿದೆ.
ರಾಜ್ಯದಲ್ಲಿ 135 ಸ್ಥಾನ ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಗೆ ನಾಯಕರು ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ನಾವೇ ಹೆಚ್ಚಿನ ಸ್ಥಾನದಲ್ಲಿ ಗೆದ್ದು ಬಿಜೆಪಿಗೆ ಸೆಡ್ಡು ಹೊಡೆದು ತೋರಿಸಲೇ ಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ ಏನೆಲ್ಲ ತಂತ್ರಗಳನ್ನು ಮಾಡಬಹುದೋ ಅದೆಲ್ಲವನ್ನು ಮಾಡಲು ಸಿದ್ಧತೆಯೂ ಭರದಿಂದ ಸಾಗಿದೆ. ಹೈಕಮಾಂಡ್‌ಗೆ ಕೂಡ ಕರ್ನಾಟಕ ಭರವಸೆ ಹುಟ್ಟಿಸಿದೆ. ಹೀಗಾಗಿ ಮಿಷನ್ 20 ಸದ್ದು ಮಾಡುತ್ತಿದೆ.

ಎನ್‌ಡಿಎಗೆ ಕರ್ನಾಟಕದಿಂದ 25 ಸ್ಥಾನಗಳನ್ನು ಗೆದ್ದುಕೊಟ್ಟಿದ್ದು ರಾಜ್ಯ ಬಿಜೆಪಿಯ ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಸದ್ಯ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿರುವುದರಿಂದ ಬಿಜೆಪಿ ಗಟ್ಟಿಯಾಗಿದೆ. ಆದರೆ ಈ ಗಟ್ಟಿತನವನ್ನು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿಯೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯಾ? ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.
2019ರ ಚುನಾವಣೆಯಲ್ಲಿ ಅಬ್ಬರಿಸಿದ್ದ ಬಿಜೆಪಿ
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಿತ್ತು. ಕಾರಣ ಅವತ್ತು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವಿತ್ತು. ಸರ್ಕಾರ ಮತ್ತು ಅಧಿಕಾರ ಎರಡು ಅವರ ಕೈನಲ್ಲಿತ್ತು. ಆದರೂ ಬಿಜೆಪಿಯ ಸಂಸದರು 25 ಸ್ಥಾನಗಳಲ್ಲಿ ಗೆದ್ದು ಬಂದಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ ಒಬ್ಬರು ಸಂಸದರು ಮತ್ತು ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದು ಬಂದಿದ್ದರು. ಅವತ್ತು ಬಿಜೆಪಿ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಧೂಳಿಪಟವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಘಟಾನುಘಟಿ ನಾಯಕರಾದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್‌ನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಸೋಲು ಕಾಣುವಂತಾಗಿತ್ತು.

ಬಿಜೆಪಿಯಿಂದ ಸ್ಪರ್ಧಿಸಿದ್ದ ಇಪ್ಪತ್ತೈದು ಅಭ್ಯರ್ಥಿಗಳು ನಿರಾಯಾಸವಾಗಿ ಗೆದ್ದು ಸಂಸದರಾಗುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಯ್ಯನ್ನು ಬಲಪಡಿಸಿದ್ದರು. ಬಹುಶಃ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ತಂದುಕೊಡುವ ರಾಜ್ಯವಿದ್ದರೆ ಅದು ಕರ್ನಾಟಕ ರಾಜ್ಯ ಮಾತ್ರ. ಹಾಗಾಗಿಯೇ ಎರಡು ರಾಷ್ಟ್ರೀಯ ಪಕ್ಷಗಳು ಕರ್ನಾಟಕವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿಗೆ ನಮ್ಮದೇ ಸಂಸದರು ಹೆಚ್ಚಿರುವ ಕಾರಣ ಮತ್ತೆ ಗೆದ್ದು ಬರುತ್ತೇವೆ ಎಂಬ ವಿಶ್ವಾಸವಿದ್ದರೆ ಕಾಂಗ್ರೆಸ್ ಗೆ ಈಗಾಗಲೇ ವಿಧಾನಸಭೆಯಲ್ಲಿ 135 ಸ್ಥಾನಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಪೂರಕ ವಾತಾವರಣ ಇರುವುದರಿಂದ ಕನಿಷ್ಟ ಇಪ್ಪತ್ತು ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ ಆತ್ಮವಿಶ್ವಾಸ ಹೆಚ್ಚಾಗಿದೆ.
ಈ ಬಾರಿ ಗೆಲುವು ನಮ್ಮದೇ ಎನ್ನುತ್ತಿರುವ ಕೈಪಡೆ
ಕಾಂಗ್ರೆಸ್‌ಗೆ ಕರ್ನಾಟಕದಲ್ಲಿನ ಗೆಲುವು ಒಂದು ರೀತಿಯಲ್ಲಿ ಟಾನಿಕ್ ಆಗಿದೆ. ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳ ಮಹಾಮೈತ್ರಿಯ ಇಂಡಿಯಾ ಭದ್ರವಾಗಬೇಕಾದರೆ ಅದಕ್ಕೆ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಲೇ ಬೇಕಾಗಿದೆ. ಅದಕ್ಕೆ ಏನು ಮಾಡಬೇಕು? ಯಾವ ರೀತಿಯ ತಂತ್ರಗಳನ್ನು ಹೂಡಬೇಕು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಈಗಾಗಲೇ ಕಾಂಗ್ರೆಸ್ ದೆಹಲಿಯಲ್ಲಿ ನಾಯಕರ ಸಭೆ ನಡೆಸಿ ಒಂದಷ್ಟು ತಯಾರಿಗಳನ್ನು ಮಾಡಿಕೊಂಡಿದೆ. ಇಲ್ಲಿಯೂ ಕೂಡ ಮತದಾರರನ್ನು ಸೆಳೆಯಲು ಗ್ಯಾರಂಟಿ ಯೋಜನೆಗಳು ಕೆಲಸ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ.

ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ನಾಯಕರು ಅದರಲ್ಲೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸಿಕೊಡಬೇಕಾಗಿದೆ. ಇದು ಪ್ರತಿಷ್ಠೆಯೂ ಆಗಿದೆ. ಹೀಗಾಗಿಯೇ ಕಾಂಗ್ರೆಸ್ ನಿಂದ ತಂತ್ರಗಳು ಆರಂಭವಾಗಿವೆ. ಹಾಗಾದರೆ ಬಿಜೆಪಿ ಸುಮ್ಮನಿರುತ್ತಾ? ಅದು ಕೂಡ ತಂತ್ರಗಳನ್ನು ಹೆಣೆಯುತ್ತಾ? ರಾಜ್ಯ ನಾಯಕರಲ್ಲದೆ ಸ್ವತಃ ನರೇಂದ್ರ ಮೋದಿಯೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸುವ ಸಾಧ್ಯತೆಯಿದೆ.
ತೆನೆ ಕಮಲ ಸೇರಿ 'ಕೈ'ಗೆ ಟಕ್ಕರ್ ಕೊಡ್ತಾರಾ?
ಇದೆಲ್ಲದರ ನಡುವೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ವಿಫಲತೆಯನ್ನೇ ಪಟ್ಟಿ ಮಾಡುತ್ತಿರುವ ಬಿಜೆಪಿ ಆ ಮೂಲಕ ಕಾಂಗ್ರೆಸ್ ದೌರ್ಬಲ್ಯತೆಯನ್ನು ಜನರ ಮುಂದಿಡುವ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಜೆಡಿಎಸ್ ಕೂಡ ಬಿಜೆಪಿ ಬಗ್ಗೆ ಮೃದುಧೋರಣೆ ತಾಳುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದೆ.
ಇದೆಲ್ಲವನ್ನು ಗಮನಿಸಿದರೆ ಲೋಕ ಸಭೆಗೆ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಕಾಂಗ್ರೆಸ್‌ಅನ್ನು ಎದುರಿಸುವ ಲಕ್ಷಣಗಳು ಕಂಡು ಬರುತ್ತಿವೆ. ಅದು ಏನೇ ಇರಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಎನ್ ಡಿಎ ಮತ್ತು ಇಂಡಿಯಾಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಆಶಾಕಿರಣವಾಗಿರುವುದಂತು ನಿಜ. ಮುಂದೇನು ಕಾದು ನೋಡಬೇಕಿದೆ.












Click it and Unblock the Notifications