Lok Sabha Election 2024: ಲೋಕಸಭಾ ಚುನಾವಣೆಗೆ ಹಾಲಿ ಸಂಸದರಿಗೆ ಕೊಕ್: ಅವರ ಟಿಕೆಟ್ ಇವರ ಪಾಲು?
ಬೆಂಗಳೂರು, ಮಾರ್ಚ್. 07: 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈಗಾಗಲೇ 195 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವ ಪಕ್ಷ, ಕರ್ನಾಟಕದಲ್ಲಿ ಮತ್ತಷ್ಟು ಬದಲಾವಣೆ ಮಾಡಲು ಚಿಂತನೆ ನಡೆಸುತ್ತಿದೆ. ಇದೇ ಕಾರಣಕ್ಕೆ ಸುಮಾರು ಹತ್ತು ಮಂದಿ ಹಾಸಿ ಸಂಸದರಿಗೆ ಕೊಕ್ ಕೊಡಲು ಸಿದ್ಧವಾಗಿದೆ.
ಕನಿಷ್ಠ ಎಂಟರಿಂದ 10 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸೂಚನೆಗಳಿದ್ದು, ಈ ಜಾಗದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಿದೆ. ಬಿಜೆಪಿಯ ಆಂತರಿಕ ಸಮೀಕ್ಷೆ ಮತ್ತು ವಯಸ್ಸನ್ನು ಗಣನೆಗೆ ತೆಗೆದುಕೊಂಡು ಪಕ್ಷವು ತುಮಕೂರು, ಹಾವೇರಿ-ಗದಗ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ಬೆಳಗಾವಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಉತ್ತರ ಕನ್ನಡ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಹೊಸ, ಯುವ ಮುಖಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28 ರಲ್ಲಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಫಲಿತಾಂಶ ಪಡೆದಿದೆ. ಈ ಬಾರಿ ಬಿಜೆಪಿ ಜೊತೆಗೆ ಜೆಡಿಎಸ್ ಕೂಡ ಸೇರಿಕೊಂಡದ್ದು, ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲುವ ಹಪಾಹಪಿಯಲ್ಲಿದೆ ಬಿಜೆಪಿ, ಹೀಗಾಗಿಯೇ ಪಕ್ಷವು ಕೆಲವು ಹಿರಿಯ ಸಂಸದರನ್ನು ಯುವ ಅಭ್ಯರ್ಥಿಗಳ ಜೊತೆಗೆ ಬದಲಾಯಿಸುವ ಸಾಧ್ಯತೆಯಿದೆ. ಚುನಾವಣೆಯಲ್ಲಿ ಮುಖ್ಯವಾಗಿ 40 ರಿಂದ 50 ವರ್ಷ ವಯಸ್ಸಿನ ಹೊಸ ಮುಖಗಳನ್ನು ಕಣಕ್ಕಿಳಿಸಲು ಬಿಜೆಪಿ ಆದ್ಯತೆ ನೀಡುತ್ತಿದೆ.
ಯಾವ ಹಾಲಿ ಸಂಸದರಿಗಿಲ್ಲ ಬಿಜೆಪಿ ಟಿಕೆಟ್?
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ (71) ಹಾಗೂ ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ (56) ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಇವರುಗಳ ಜೊತೆಗೆ ತುಮಕೂರು ಸಂಸದ ಜಿ.ಎಸ್.ಬಸವರಾಜ್ (82), ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ (55), ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ (72), ಕೊಪ್ಪಳ ಸಂಸದ ಕರಡಿ ಸಂಗಣ್ಣ (73), ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯ್ಕ (66), ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ (71), ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ (72), ಬೆಳಗಾವಿ ಸಂಸದ ಮಂಗಳಾ ಅಂಗಡಿ (60) ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ 'ಸೌತ್ ಫಸ್ಟ್' ವರದಿ ಮಾಡಿದೆ.
ಹಾಲಿ ಸಂಸದರ ಕ್ಷೇತ್ರದಲ್ಲಿ ಯಾರಿಗೆ ಸಿಗಲಿದೆ ಟಿಕೆಟ್?
ಬಿಜೆಪಿ ಸಂಸದರ ಪೈಕಿ ದಾವಣಗೆರೆಯ ಸಿದ್ದೇಶ್ವರ್ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ, ಅದೇ ಸ್ಥಾನದಿಂದ ತಮ್ಮ ಪುತ್ರ ಜಿ.ಎಸ್.ಅನಿತ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಇದೇ ವೇಳೆ ಕೊಪ್ಪಳ ಸಂಸದ ಸಂಗಣ್ಣ ಅವರು ತಮ್ಮ ಪುತ್ರ ಅಮರೇಶ ಕರಡಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದಿಂದ (ಎಸ್‌ಸಿ) ಆರು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರ ಸ್ಥಾನಕ್ಕೆ ಡಾ.ಬಾಬು ರಾಜೇಂದ್ರ ನಾಯ್ಕ್ ಆಯ್ಕೆಯಾಗುವ ಸಾಧ್ಯತೆಯಿದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಪಿ.ಸಿ.ಗದ್ದಿಗೌಡರ್ ಅವರ ಸ್ಥಾನಕ್ಕೆ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಆಯ್ಕೆಯಾಗುವ ಸಾಧ್ಯತೆ ಇದೆ. ಮೇ ತಿಂಗಳ ವಿಧಾನಸಭೆ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಅನಿಲ್ ಮೆಣಸಿನಕಾಯಿ ಹಾಲಿ ಸಂಸದ ಶಿವಕುಮಾರ ಉದಾಸಿ ಬದಲಿಗೆ ಹಾವೇರಿ-ಗದಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ (ಎಸ್‌ಟಿ) ಹಾಲಿ ಸಂಸದ ವೈ ದೇವೇಂದ್ರಪ್ಪ ಬದಲಿಗೆ ಮಾಜಿ ಸಚಿವ, ಎಸ್‌ಟಿ ಮುಖಂಡ ಬಿ ಶ್ರೀರಾಮುಲು ಕಣಕ್ಕಿಳಿಯುವ ಸಾಧ್ಯತೆ ಇದೆ. ಸಂಸದ ಸಿದ್ದೇಶ್ವರ್ ಅವರು ತಮ್ಮ ಪುತ್ರ ಜಿ.ಎಂ.ಅನಿತ್‌ಗೆ ದಾವಣಗೆರೆಯಿಂದ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದರೂ, ಬಿಜೆಪಿಯ ಹಿರಿಯ ಮುಖಂಡ, ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಅಲ್ಲಿಂದ ಟಿಕೆಟ್ ಕೇಳುತ್ತಿದ್ದಾರೆ.












Click it and Unblock the Notifications