Lok Sabha Election 2024: ಕಾಂಗ್ರೆಸ್ ಲೆಕ್ಕಾಚಾರವನ್ನು ಬುಡಮೇಲು ಮಾಡಲಿದೆಯೇ ಬಿಜೆಪಿ-ಜೆಡಿಎಸ್ ಮೈತ್ರಿ? ವಿವರ, ವಿಶ್ಲೇಷಣೆ
ಬೆಂಗಳೂರು, ಸೆಪ್ಟೆಂಬರ್ 15: ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಸೀಟು ಹಂಚಿಕೆ ಸಂಬಂಧ ಎರಡೂ ಪಕ್ಷಗಳ ನಾಯಕರು ಮಾತುಕತೆ ನಡೆಸಬೇಕಿದೆ. ಒಂದು ವೇಳೆ, ಇವೆರಡು ಪಕ್ಷಗಳು ಮೈತ್ರಿ ಮಾಡಿಕೊಂಡರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರಗಳನ್ನು ಬುಡಮೇಲು ಮಾಡಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಮೈತ್ರಿಯೂ ಸವಾಲಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಕನಿಷ್ಠ ಪಕ್ಷ 20 ಸಂಸತ್ ಸ್ಥಾನಗಳನ್ನು ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತದ ವಿರೋಧಿ ಅಲೆಯನ್ನು ಲೋಕಸಭೆ ಚುನಾವಣೆವರೆಗೂ ಬಳಸಿಕೊಳ್ಳಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ಇಚ್ಛೆಯಾಗಿದೆ. ಈಗ ನೀಡಿರುವ ನಾಲ್ಕು ಭಾಗ್ಯಗಳ ಕುರಿತು ಜಾಹೀರಾತುಗಳ ಮೂಲಕ ಪ್ರಚಾರ ಮಾಡಿ ಜನರನ್ನು ಸೆಳೆಯುವುದು ಕಾಂಗ್ರೆಸ್ ತಂತ್ರವಾಗಿದೆ.
ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲಿಯೂ ಪ್ರಬಲ ಸಮುದಾಯಗಳಾದ ಲಿಂಗಾಯತರು ಹಾಗೂ ಒಕ್ಕಲಿಗರನ್ನು ಸೆಳೆಯಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್ ಸೂಚನೆಯಾಗಿದೆ. ಆದರೆ, ಇದು ಮರುಕಳಿಸಬಹುದೇ ಎಂಬ ಪ್ರಶ್ನೆಗಳು ಎದ್ದಿವೆ.

ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ವಿಧಾನಸಭೆ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಇರುವುದು ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇದು ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಒಕ್ಕಲಿಗ ಹೃದಯಭಾಗದ 52 ಸ್ಥಾನಗಳಲ್ಲಿ ಕಾಂಗ್ರೆಸ್ 38 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಅವರು ಮುಂದಾಗಿದ್ದಾರೆ. ಒಂದು ವೇಳೆ, ಇವೆರಡು ಪಕ್ಷಗಳು ಮೈತ್ರಿ ಮಾಡಿಕೊಂಡರೆ ಹಳೇ ಮೈಸೂರು ಭಾಗದ ಲಿಂಗಾಯತರೂ ಜೆಡಿಎಸ್ ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನದಲ್ಲಿದೆ. ಬಿಎಸ್‌ವೈ ಮೂಲಕ ವೀರಶೈವ ಲಿಂಗಾಯತರನ್ನು ಮರಳಿ ಪಕ್ಷಕ್ಕೆ ಸೆಳೆಯುವ ಆಕಾಂಕ್ಷೆಗಳನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.
ಒಂದು ವೇಳೆ, ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡರೆ, ಕಾಂಗ್ರೆಸ್ ಲೆಕ್ಕಾಚಾರಗಳು ತಲೆಕೆಳಗಾಗಬಹುದು ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಇಬ್ಬರು ನಾಯಕರ ನಿರ್ಧಾರವನ್ನು ರಾಜ್ಯ ಬಿಜೆಪಿ ನಾಯಕರು ಒಪ್ಪಲಿದ್ದಾರೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.
ಗಣೇಶ ಚತುರ್ಥಿ ನಂತರ ಮೈತ್ರಿ ಕುರಿತು ಮಾತುಕತೆ ನಡೆಸಲಾಗುವುದು ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications