ಬಳ್ಳಾರಿಯಲ್ಲಿ ಶ್ರೀರಾಮುಲು ವಿರುದ್ಧ ಜನಾರ್ಧನ ರೆಡ್ಡಿ ಪತ್ನಿ ಕಣಕ್ಕೆ? ಪ್ರಾಣ ಸ್ನೇಹಿತನ ವಿರುದ್ಧವೇ ಗಣಿಧಣಿ ಸಂಘರ್ಷ
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ಲೋಕ ಸಮರಕ್ಕೆ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಮತ್ತೆ ಸದ್ದು ಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ. ಬಿಜೆಪಿಯಿಂದ ಮಾಜಿ ಸಚಿವ ಶ್ರೀರಾಮುಲು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಶ್ರೀರಾಮುಲು ವಿರುದ್ಧ ಶಾಸಕ ಜನಾರ್ಧನ ರೆಡ್ಡಿ ಅವರ ಪತ್ನಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಪತ್ನಿ ಸೋಲು
ಬಿಜೆಪಿ ವಿರುದ್ಧ ಸಮರ ಸಾರಿರುವ ಜನಾರ್ಧನ ರೆಡ್ಡಿ ಅವರು ವಿಧಾನಸಭೆಯಲ್ಲಿ ತಮ್ಮ ಪತ್ನಿ ಅರುಣಾ ಲಕ್ಷ್ಮಿಯನ್ನು ಕಣಕ್ಕಿಳಿಸಿದ್ದರು. ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರುಣಾ ಲಕ್ಷ್ಮಿ ಅವರು ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ ಸಮರ ಸಾರಿದ್ದರು. ಆದರೆ, ಅರುಣಾ ಲಕ್ಷ್ಮಿಗಾಗಲಿ, ಸೋಮಶೇಖರ ರೆಡ್ಡಿಗಾಗಲಿ ಈ ಸಮರದಲ್ಲಿ ಗೆಲುವು ದೊರೆಯಲಿಲ್ಲ.

ಜನಾರ್ಧನ ರೆಡ್ಡಿ ಬೇಸರ
ತಮ್ಮ ಪತ್ನಿ ಅರುಣಾ ಲಕ್ಷ್ಮಿ ಬಳ್ಳಾರಿಯಲ್ಲಿ ಗೆಲುವು ಸಾಧಿಸದೇ ಇರುವುದು ಜನಾರ್ಧನ ರೆಡ್ಡಿ ಅವರಿಗೆ ಭಾರೀ ಬೇಸರವನ್ನು ಉಂಟುಮಾಡಿತ್ತು. ಗಂಗಾವತಿಯಲ್ಲಿ ತಾವು ಗೆದ್ದರೂ, ಪತ್ನಿ ಸೋತಿದ್ದು ನೋವು ತಂದಿದೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದರು. ಆದರೆ, ಮುಂದಿನ ಚುನಾವಣೆಗಳಲ್ಲಿ ತಮ್ಮ ಯತ್ನಗಳನ್ನು ಕೈಬಿಡುವುದಿಲ್ಲ ಎಂದು ಶಪಥ ಮಾಡಿದ್ದರು.
ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು ಸೋಲು
ಮೇ ತಿಂಗಳಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಶ್ರೀರಾಮುಲು ಅವರು ಹೀನಾಯ ಸೋಲು ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರು ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿರುವ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಒಂದು ವೇಳೆ, ಶ್ರೀರಾಮುಲು ಅವರು ಕಣಕ್ಕಿಳಿದರೆ ಜನಾರ್ಧನ ರೆಡ್ಡಿ ಪತ್ನಿ ವಿರುದ್ಧ ಹೋರಾಡಲು ಶ್ರೀರಾಮುಲು ತಯಾರಾಗಬೇಕಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

ಸಹೋದರ ಆಯ್ತು, ಈಗ ಪ್ರಾಣ ಸ್ನೇಹಿತನ ವಿರುದ್ಧವೇ ರೆಡ್ಡಿ ಸಮರ
ಬಳ್ಳಾರಿಯಲ್ಲಿ ಸಹೋದರನ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ್ದ ಜನಾರ್ಧನ ರೆಡ್ಡಿ ಇದೀಗ ಶ್ರೀರಾಮುಲು ವಿರುದ್ಧ ಸಮರ ಸಾರಲು ಹೊರಟಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಶ್ರೀರಾಮುಲು ವಿರುದ್ಧ ರೆಡ್ಡಿ ಪತ್ನಿ ಕಣಕ್ಕಿಳಿದರೆ ಬಳ್ಳಾರಿ ಮತ್ತೊಮ್ಮೆ ರಣಕಣವಾಗುವುದು ಶತಸಿದ್ಧವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications