ಎಂಎಲ್ಸಿ ಚುನಾವಣೆ ಲಾಬಿ, ರಮ್ಯಾ ಹೆಸರು ಐತೇನ್ರಿ!
ಬೆಂಗಳೂರು, ನ.23: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ಸಿನಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಬಿಜೆಪಿ ಸ್ವಜನ ಹಿತಾಸಕ್ತಿ ಎಂಬ ಕಿವಿಗೆ ಕೇಳಿಸದಂತೆ ಸರ್ವರಿಗೂ ಹಿತವಾದ ಪಟ್ಟಿ ತಯಾರಿಸಿ ಚುನಾವಣಾ ಆಯೋಗಕ್ಕೆ ಕಳಿಸಿ. 2016ರಲ್ಲಿ ನಡೆಯಲಿರುವ ಎಂಎಲ್ಸಿ ಎಲೆಕ್ಷನ್ ಗೆ ಈಗಿಂದಲೆ ಭರ್ಜರಿ ಲಾಬಿ ಶುರುವಾಗಿದೆ.
ಜನವರಿ 2016 ರ ಅಂತ್ಯಕ್ಕೆ ಸುಮಾರು 25 ಸದಸ್ಯರ ಅವಧಿ ಮುಗಿಯಲಿದೆ. ಈ ಪೈಕಿ 13 ಜನ ಕಾಂಗ್ರೆಸ್ಸಿಗರು, 7 ಜನ ಬಿಜೆಪಿ ಹಾಗೂ 5 ಜನ ಜೆಡಿಎಸ್ ನಿಂದ ಇದ್ದಾರೆ. ಕಾಂಗ್ರೆಸ್ ಬಹುತೇಕ ಹಳೆ ಸದಸ್ಯರನ್ನೇ ಮರು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಅದರೆ, ಹೈಕಮಾಂಡ್ ಆಜ್ಞೆಯಂತೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಸೇರಿದಂತೆ ನಾಲ್ವರು ಹೊಸಬರು ಮೇಲ್ಮನೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂಬ ಗುಸುಗುಸು ಸುದ್ದಿ ಓಡಾಡಿಕೊಂಡಿದೆ.

ಎಲ್ಲಾ ನಾಯಕರು ಚರ್ಚಿಸಿ ನನ್ನನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ರಾಜ್ಯ ರಾಜಕಾರಣಕ್ಕೆ ಮರಳುವ ಆಸೆ ನನಗೂ ಇಲ್ಲ. ಆದರೆ, ಹಿರಿಯ ನಾಯಕರು ಬಯಸಿದಲ್ಲಿ ಎಂಎಲ್ಸಿ ಚುನಾವಣೆಗೆ ನನ್ನ ಹೆಸರು ಸೇರಲಿದೆ ಎಂದು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.
ಎಲ್ ಇಡಿ ಬಳಕೆ ಜಾಗೃತಿ ಕಾರ್ಯಕ್ರಮಕ್ಕಾಗಿ ವಿಧಾನಸಭೆಗೆ ಆಗಮಿಸಿದ್ದ ರಮ್ಯಾ ಅವರು ಕರ್ನಾಟಕ ಇಂಧನ ಇಲಾಖೆಗೆ ಎಲ್‌ಇಡಿ ಬಲ್ಬ್ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಸಾರ್ವಜನಿಕರು ವಿದ್ಯುತ್ ಉಳಿತಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು, ಸಿಎಫ್‌ಎಲ್ ಬಲ್ಬ್‌ಗಳನ್ನು ಬದಲಾಯಿಸಿ ಎಲ್‌ಇಡಿ ಅಳವಡಿಸುವುದರಿಂದ ವಿದ್ಯುತ್ ಉಳಿತಾಯವಾಗಲಿದೆ. ಬಿಲ್ ಮೊತ್ತವೂ ಕಡಿಮೆಯಾಗಲಿದೆ ಎಂದರು.
*ಎಸ್ ಆರ್ ಪಾಟೆಲ್, ನಾಗರಾಜ್ ಛಬ್ಬಿ, ಶ್ರೀಕಾಂತ್ ಘೋಟ್ನೆಕರ್(ಉತ್ತರ ಕನ್ನಡ), ವೀರಕುಮಾರ್ ಅಪ್ಪಾಸೊ ಪಾಟೀಲ್, ಶ್ರೀನಿವಾಸ್ ಮಾನೆ, ದಯಾನಂದ, ಎವಿ ಗಾಯತ್ರಿ ಶಾಂತೇಗೌಡ(ಚಿಕ್ಕಮಗಳೂರು), ಪ್ರತಾಪ್ ಚಂದ್ರ ಶೆಟ್ಟಿ, ಟಿ ಜಾನ್(ಕೊಡಗು), ನಾಸಿರ್ ಅಹ್ಮದ್, ಅಲ್ಲಮ ಪ್ರಭು ಪಾಟೀಲ್, ಆರ್ ಧರ್ಮಸೇನ ಅವರ ಸದಸ್ಯತ್ವ ಅವಧಿ ಮುಗಿಯಲಿದೆ.
* ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಮೇಲ್ಮನೆ ಸದಸ್ಯ ರಘು ಆಚಾರ್ ಅವರು ಚಿತ್ರದುರ್ಗದಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವ ಸಾಧ್ಯತೆಯಿದೆ.
* ಶ್ರೀಕಾಂತ್ ಘೋಟ್ನೆಕರ್(ಉತ್ತರ ಕನ್ನಡ), ಎವಿ ಗಾಯತ್ರಿ ಶಾಂತೇಗೌಡ(ಚಿಕ್ಕಮಗಳೂರು),ಟಿ ಜಾನ್(ಕೊಡಗು) ಮರು ಆಯ್ಕೆ ಸಾಧ್ಯವಿಲ್ಲ ಎಂಬ ಮಾಹಿತಿ ಸಿಕ್ಕಿದೆ.












Click it and Unblock the Notifications