ಲೋಡ್ ಶೆಡ್ಡಿಂಗ್ ನಿರ್ಧಾರ ವಾಪಸ್ ಪಡೆದ ಸರ್ಕಾರ
ಬೆಂಗಳೂರು, ಅ.16 : ವಿದ್ಯುತ್ ಉತ್ಪಾದನೆ ಸಹಜ ಸ್ಥಿತಿಗೆ ಮರಳುತ್ತಿರುವ ಕಾರಣ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದ ಲೋಡ್ ಶೆಡ್ಡಿಂಗ್ ಅನ್ನು ರದ್ದುಪಡಿಸಲಾಗಿದೆ. ಪ್ರತಿಪಕ್ಷಗಳು ಸಹ ಲೋಡ್ ಶೆಡ್ಡಿಂಗ್ ಜಾರಿಗೆ ತಂದಿರುವ ಸರ್ಕಾರದ ಕ್ರಮವನ್ನು ಟೀಕಿಸಿದ್ದವು.
ಲೋಡ್ ಶೆಡ್ಡಿಂಗ್ ರದ್ದುಗೊಳಿಸಿರುವ ಕುರಿತು ಮಾಹಿತಿ ನೀಡಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಉಡುಪಿಯ ಯುಪಿಸಿಎಲ್ 2 ಘಟಕದಿಂದ 500 ಮೆಗಾವ್ಯಾಟ್ ಹೆಚ್ಚುವರಿಯಾಗಿ ದೊರೆಯುತ್ತಿದೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲೂ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ. [ಕರ್ನಾಟಕದಲ್ಲಿ ಲೋಡ್ ಶೆಡ್ಡಿಂಗ್ 'ಭಾಗ್ಯ']

ವಿದ್ಯುತ್ ಉತ್ಪಾದನೆ ಸಹಜ ಸ್ಥಹಜ ಸ್ಥಿತಿಗೆ ಮರಳಿದ ಕಾರಣದಿಂದಾಗಿ ಬೆಂಗಳೂರು, ಚಾಮುಂಡೇಶ್ವರಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬುಧವಾರದಿಂದಲೇ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿಲ್ಲ ಎಂದು ಸಚಿವರು ತಿಳಿಸಿದರು. ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ಬರಬೇಕಿದ್ದ 900 ಮೆಗಾವ್ಯಾಟ್ ಪೈಕಿ 400 ಮೆಗಾವ್ಯಾಟ್ ಈಗ ದೊರೆಯುತ್ತಿದೆ ಎಂದರು. [ಲೋಡ್ ಶೆಡ್ಡಿಂಗ್ ಹಿಂದೆ ಡಿಕೆಶಿ ಕೈವಾಡವಿದೆ]
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಒಟ್ಟು 200 ಮೆಗಾವ್ಯಾಟ್ ವಿದ್ಯುತ್ ಕೊರತೆ ಇತ್ತು. ಆದರೆ, ಬುಧವಾರ ರಾತ್ರಿ ವೇಳೆಗೆ ಪರಿಸ್ಥಿತಿ ಸುಧಾರಿಸಿದೆ. ಆದ್ದರಿಂದ ಆ ಭಾಗದಲ್ಲೂ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದಿಲ್ಲ ಎಂದು ಸಚಿವರು ವಿವರಣೆ ನೀಡಿದರು.[ಹುಡ್ ಹುಡ್ ಚಂಡಮಾರುತದ ಚಿತ್ರಗಳು]
ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿರುವ ಹುಡ್‌ಹುಡ್ ಚಂಡಮಾರುತದಿಂದಾಗಿ ಉಷ್ಣವಿದ್ಯುತ್ ಸ್ಥಾವರಗಳಲ್ಲಿನ ಉತ್ಪಾದನೆ ಕೊರತೆ ಉಂಟಾಗಿದೆ ಎಂದು ಹೇಳಿದ್ದ ಸರ್ಕಾರ ಭಾನುವಾರದಿಂದಲೇ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿತ್ತು. ಬೆಂಗಳೂರು ನಗರದಲ್ಲಿ ದಿನ 2 ತಾಸು ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ 2-4 ತಾಸು ಮತ್ತು ಗ್ರಾಮೀಣ ಪ್ರದೇಶದಲ್ಲಿ 15 ತಾಸು ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿತ್ತು.
ಪ್ರತಿಪಕ್ಷಗಳು ಲೋಡ್ ಶೆಡ್ಡಿಂಗ್ ಅನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದವು, 'ಕರ್ನಾಟಕದಲ್ಲಿ ಕೃತಕವಾಗಿ ವಿದ್ಯುತ್ ಆಭಾವ ಸೃಷ್ಟಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನದಲ್ಲಿ ಕೂರಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಯಾರಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದ್ದರು.












Click it and Unblock the Notifications