ಹುಟ್ಟೂರು ತಲುಪಿದ ಹನುಮಂತಪ್ಪ ಪಾರ್ಥಿವ ಶರೀರ

Posted By:
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 12 : ವಿಶ್ವದ ಅತ್ಯಂತ ಎತ್ತರದ ಮತ್ತು ಅಪಾಯಕಾರಿ ಯುದ್ಧಭೂಮಿ ಸಿಯಾಚಿನ್‌ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿ ಆರು ದಿನಗಳ ಕಾಲ ಜೀವ ಉಳಿಸಿಕೊಂಡಿದ್ದ ಧೀರ ಹನುಮಂತಪ್ಪ ಕೊಪ್ಪದನನ್ನು ಉಳಿಸುವ ವೈದ್ಯರ ಪ್ರಯತ್ನ ಯಶಸ್ವಿಯಾಗಲಿಲ್ಲ. ವೀರ ಯೋಧ ಬದುಕಿ ಬರಲಿ ಎಂಬ ಕೋಟ್ಯಾಂತರ ಜನರ ಪ್ರಾರ್ಥನೆ ಫಲಿಸಲಿಲ್ಲ. ದೆಹಲಿಯಲ್ಲಿ ಗುರುವಾರ ವಿಧಿವಶರಾದ ಹುನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯಿಂದ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗಿದೆ. [ವೀರಯೋಧನಿಗೆ ಅಂತಿಮ ನಮನ : ಚಿತ್ರಗಳು]

ಸಮಯ 11 ಗಂಟೆ : ಹುಬ್ಬಳ್ಳಿಯಿಂದ ಹನುಮಂತಪ್ಪ ಅವರ ಪಾರ್ಥೀವ ಶರೀರ ಬೆಟದೂರು ಗ್ರಾಮ ತಲುಪಿದೆ. ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯ ಜನರು ಭಾರತದ ಧ್ವಜ ಹಿಡಿದು ಘೋಷಣೆ ಕೂಗುತ್ತ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ನಡೂರಮಠ ಹೈಸ್ಕೂಲ್‌ನಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. [Live : ಹುಟ್ಟೂರಿನಲ್ಲಿ ವೀರಯೋಧನಿಗೆ ಅಂತಿಮ ನಮನ]

ಸಮಯ 10.50 : 'ಸಿಯಾಚಿನ್‌ನಲ್ಲಿ ಮೃತಪಟ್ಟ ರಾಜ್ಯದ ಇತರ ಇಬ್ಬರು ಯೋಧರಿಗೂ 25 ಲಕ್ಷ ಪರಿಹಾರ ನೀಡಲಾಗುವುದು. ಹುಬ್ಬಳ್ಳಿ ನಗರದ ರಸ್ತೆಯೊಂದಕ್ಕೆ ಹನುಮಂತಪ್ಪ ಕೊಪ್ಪದ ಅವರ ಹೆಸರು ಇಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸಮಯ 10.35 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಯೋಧ ಹನುಮಂತಪ್ಪ ಅವರ ನಿವಾಸಕ್ಕೆ ಆಗಮಿಸಿದರು.

ಸಮಯ 10.22 : ನೆಹರೂ ಮೈದಾನದಿಂದ ಹನುಮಂತಪ್ಪ ಅವರ ಹುಟ್ಟೂರು ಸುಮಾರು 17 ಕಿ.ಮೀ. ದೂರವಿದೆ. ರಾಷ್ಟ್ರೀಯ ಹೆದ್ದಾರಿಯ ಎಲ್ಲೆಡೆ ಹನುಮಂತಪ್ಪ ಅವರಿಗೆ ಶ್ರದ್ಧಾಂಜಲಿ ಸೂಚಿಸುವ ಫೆಕ್ಸ್‌ಗಳು ಕಾಣುತ್ತಿವೆ. ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಪಾರ್ಥಿವ ಶರೀರದ ದರ್ಶನಕ್ಕಾಗಿ ಕಾದು ನಿಂತಿದ್ದಾರೆ.

ಸಮಯ 10 ಗಂಟೆ : ಹುಬ್ಬಳ್ಳಿ ನೆಹರೂ ಮೈದಾನದಿಂದ ಧಾರವಾಡದ ಬೆಟದೂರಿಗೆ ಹುನುಮಂತಪ್ಪ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ. [ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ]

ಸಮಯ 9.45 : ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ

ಸಮಯ9.30 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮಂತಪ್ಪ ಕೊಪ್ಪದ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

cm siddaramaiah

ಸಮಯ 9.15 : ಕುಂದಗೋಳ ತಾಲ್ಲೂಕಿನ ಬೆಟದೂರಿನಲ್ಲಿ ಯೋಧ ಹನುಮಂತಪ್ಪ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. [ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

ಸಮಯ 9 ಗಂಟೆ : ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್

hanumanthappa

ಸಮಯ 8.20 : ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಸೇನಾ ವಾಹನದಲ್ಲಿ ಕಿಮ್ಸ್ ಆಸ್ಪತ್ರೆಯಿಂದ ನೆಹರೂ ಮೈದಾನಕ್ಕೆ ತೆಗೆದುಕೊಂಡು ಬರಲಾಗಿದೆ. ಬೆಳಗ್ಗೆ 10 ಗಂಟೆಯ ತನಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಮಯ 8 ಗಂಟೆ : ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಗಂಟೆಯಿಂದ 10 ಗಂಟೆ ತನಕ ಅಂತಿಮ ದರ್ಶನ ಪಡೆಯಬಹುದಾಗಿದ್ದು, ಕಿಮ್ಸ್ ಆಸ್ಪತ್ರೆಯಿಂದ ಮೈದಾನಕ್ಕೆ ತೆರೆದ ಸೇವಾ ವಾಹನದಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

ಸಮಯ 7.50 : 'ಹನುಮಂತಪ್ಪ ಅವರ ಹುಟ್ಟೂರು ಕುಂದಗೋಳ ತಾಲ್ಲೂಕಿನ ಬೆಟದೂರಿನ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆಯನ್ನು ಮಧ್ಯಾಹ್ನ 2 ಗಂಟೆಗೆ ನಡೆಸಲಾಗುತ್ತದೆ' ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಹೇಳಿದ್ದಾರೆ.

ಸಮಯ 7.40 : ನೆಹರೂ ಮೈದಾನದಲ್ಲಿ ಅಂತಿಮ ದರ್ಶನದ ಬಳಿಕ ಸೇನಾ ವಿಧಿವಿಧಾನವನ್ನು ಪೂರೈಸಿ ನಂತರ ಜಿಲ್ಲಾಡಳಿತಕ್ಕೆ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಲಾಗುತ್ತದೆ.

ಸಮಯ 7.30 : ನವದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಗೆ ತರಲಾಗಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.

ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನ ಗುರುವಾರ ರಾತ್ರಿ 10.20ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

hubballi

ನಂತರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹನುಮಂತಪ್ಪ ಅವರ ಹುಟ್ಟೂರು ಕುಂದಗೋಳ ತಾಲ್ಲೂಕಿನ ಬೆಟದೂರಿನ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿಯೇ ಇರುವ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಗ್ರಾಮದ ಹೊರವಲಯದಲ್ಲಿರುವ ನಡೂರಮಠ ಪ್ರೌಢಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The body of Lance Hanumanthappa Koppad reached Hubballi on Thursday, February 11th night. Hanumanthappa Koppad, who was dug out alive after being buried under ice for six days in the Siachen Glacier, died on Thursday at New Delhi.
Please Wait while comments are loading...