'ಗಣಪತಿ ಅವರ ಜೊತೆ ಡೈಯಿಂಗ್ ಡಿಕ್ಲೆರೇಷನ್ ಸಮಾಧಿಯಾಗಿದೆ'

Posted By:
Subscribe to Oneindia Kannada

ಬೆಂಗಳೂರು, ಜುಲೈ 12 : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ವಿಧಾನಸಭೆ ಮತ್ತು ವಿಧಾಪರಿಷತ್ತಿನಲ್ಲಿ ಸೋಮವಾರ ಕೋಲಾಹಲ ಉಂಟಾಗಿತ್ತು. ಮಂಗಳವಾರದ ಕಲಾಪ ಆರಂಭಗೊಂಡಿದ್ದು, ಇದೇ ವಿಚಾರದ ಬಗ್ಗೆ ಚರ್ಚೆ ಮುಂದುವರೆದಿದೆ.

ಮಂಗಳವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಮತ್ತು ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ವಿಷಯ ಪ್ರಸ್ತಾಪಿಸಿದರು. 'ಆದರ್ಶ ರಾಜ್ಯವಾಗುವತ್ತ ಕರ್ನಾಟಕ ಹೆಜ್ಜೆ ಇಡುತ್ತಿದೆಯೇ?' ಎಂದು ಸಚಿವರನ್ನು ಪ್ರಶ್ನಿಸಿದರು. [ಗಣಪತಿ ಆತ್ಮಹತ್ಯೆ : ಸದನದಲ್ಲಿ ಯಾರು, ಏನು ಹೇಳಿದರು?]

assembly session

ದೂರು ಕೊಡಿಸಿದ್ದೇನೆ : 'ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಮಕ್ಕಳ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ ಕಾರಣ ನಾನು ವಕೀಲರನ್ನು ನೇಮಕ ಮಾಡಿ, ಗಣಪತಿ ಅವರ ಪುತ್ರ ನೇಹಾಲ್ ಮೂಲಕ ಮಡಿಕೇರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಖಾಸಗಿ ದೂರು ಕೊಡಿಸಿದ್ದೇನೆ' ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದರು. [ಸೋಮವಾರ ಸನದಲ್ಲಿ ನಡೆದ ಚರ್ಚೆಯ ವಿವರಗಳು]

'ಎಂ.ಕೆ.ಗಣಪತಿ ಅವರು ನೀಡಿರುವ ಮಾಧ್ಯಮ ಹೇಳಿಕೆ ಆಧಾರದಲ್ಲಿ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ.ಪ್ರಸಾದ್ ವಿರುದ್ಧ ಖಾಸಗಿ ದೂರು ಸಲ್ಲಿಸಲಾಗಿದೆ. ಜುಲೈ 18 ರಂದು ನ್ಯಾಯಾಲಯದಲ್ಲಿ ದೂರಿನ ವಿಚಾರಣೆ ನಡೆಯಲಿದೆ' ಎಂದು ಕುಮಾರಸ್ವಾಮಿ ತಿಳಿಸಿದರು. [ಸಚಿವ ಜಾರ್ಜ್ ವಿರುದ್ಧ ಗಣಪತಿ ಪತ್ನಿ, ಪುತ್ರರಿಂದ ದೂರು]

'ಗಣಪತಿ ಅವರು ಡೈಯಿಂಗ್ ಡಿಕ್ಲೆರೇಷನ್‌ ಅನ್ನು ರಾಜ್ಯದ 6 ಕೋಟಿ ಜನರ ಮುಂದೆ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳು ಡೈಯಿಂಗ್ ಡಿಕ್ಲರೇಷನ್ ಪರಿಗಣಿಸಬೇಕು ಎಂದು ಹೇಳಿವೆ. ಆದರೆ, ಸರ್ಕಾರ ಅದನ್ನು ಏಕೆ ಪರಿಗಣಸಿಲ್ಲ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

'ಇಂದು ಬೆಳಗ್ಗೆ ಪತ್ರಿಕೆ ನೋಡಿ ಹತ್ತು ನಿಮಿಷ ಕಣ್ಣೀರು ಹಾಕಿದ್ದೇನೆ. ನೀರಿನ ಟ್ಯಾಂಕ್‌ನಲ್ಲಿ ಹಣ ಇಟ್ಟಿದ್ದಾನೆ ಎಂದು ಕಲ್ಲಪ್ಪ ಹಂಡಿಭಾಗ್ ಅವರ ಮನೆ ಟ್ಯಾಂಕ್ ಪರಿಶೀಲನೆ ಮಾಡುತ್ತದೆ ಸಿಐಡಿ ತಂಡ, ನಿಮಗೆ ನಾಚಿಕೆಯಾಗಬೇಕು. ಬಡ ಕುಟುಂಬಕ್ಕೆ ಹಿಂಸೆ ನೀಡಬೇಡಿ'. [ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ]

'ಕಲ್ಲಪ್ಪ ಆತ್ಮಹತ್ಯೆ ಹಿಂದೆ ಜೂಜಾಟ, ಮರಳು ಗಣಿಗಾರಿಕೆ, ಬೆಟ್ಟಿಂಗ್ ದಂಧೆಯ ಸಂಚಿದೆ. ಮಾನಸಿಕ ಕಿರುಕುಳ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಅವರನ್ನು ಅಮಾನತು ಮಾಡಿ ಇಲಾಖಾ ತನಿಖೆ ಮಾಡಿಸಿ' ಎಂದು ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಸಿ.ಶಿಖಾ ಅವರ ವಿಚಾರ ಪ್ರಸ್ತಾಪಿಸಿದರು. 'ನಮ್ಮ ಕಾಲದಲ್ಲಿ ಆಗಿದ್ದಕ್ಕೆ ಜಿಲ್ಲಾಧಿಕಾರಿ ನೀಡಿದ್ದ ದೂರು ದಾಖಲಾಗಿದೆ. ಎಫ್‌ಐಆರ್ ಆಗಿದೆ, ಕೋರ್ಟ್‌ಗೆ ಹೋಗಿದೆ. ಮೈಸೂರು ಇತಿಹಾಸ ನಿಮಗೆ ಮಾತ್ರ ಗೊತ್ತು ಕುಳಿತುಕೊಳ್ರಿ. ನಿಮ್ಮಿಂದ ಪಾಠ ಕಲಿಯಬೇಕಿಲ್ಲ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಧಾನಪರಿಷತ್ ಕಲಾಪದಲ್ಲಿ ಗಣಪತಿ ಆತ್ಮಹತ್ಯೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, 'ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಅವರ ರಾಜೀನಾಮೆ ತೆಗೆದುಕೊಳ್ಳಿ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡಿ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Budget session 2016 : Tuesday July 12 highlights. What happened in the Assembly today?.
Please Wait while comments are loading...